ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒತ್ತುವರಿ ತೆರವು: ₹85 ಕೋಟಿ ಮೌಲ್ಯದ ಆಸ್ತಿ ವಶ

Published : 14 ಫೆಬ್ರುವರಿ 2024, 0:15 IST
Last Updated : 14 ಫೆಬ್ರುವರಿ 2024, 0:15 IST
ಫಾಲೋ ಮಾಡಿ
Comments

ಯಲಹಂಕ: ಬ್ಯಾಟರಾಯನಪುರದ ಕೊಡಿಗೇಹಳ್ಳಿ ಮುಖ್ಯರಸ್ತೆಯ ಕೋತಿಹೊಸಹಳ್ಳಿಯಲ್ಲಿ ಒತ್ತುವರಿಯಾಗಿದ್ದ ಸುಮಾರು ₹85 ಕೋಟಿ ಮೌಲ್ಯದ ಆಸ್ತಿಯನ್ನು ಬಿಬಿಎಂಪಿ ಮಂಗಳವಾರ ವಶಪಡಿಸಿಕೊಂಡಿತು.

ಕೋತಿಹೊಸಹಳ್ಳಿ ಗ್ರಾಮದ ಸರ್ವೆ ನಂ. 52ರಲ್ಲಿ ಕೆಲವು ವ್ಯಕ್ತಿಗಳು ವಾಸದ ಮನೆಗಳು ಹಾಗೂ ಶೆಡ್‌ಗಳನ್ನು ನಿರ್ಮಿಸಿಕೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಯಲಹಂಕ ತಹಶೀಲ್ದಾರ್‌ ಅನಿಲ್‌ಕುಮಾರ್‌ ಅರೋಲಿಕರ್‌ ಮತ್ತು ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಮೊಹಮದ್‌ ನಯೀಮ್‌ ಮೋಮಿನ್‌ ನೇತೃತ್ವದಲ್ಲಿ ಅಧಿಕಾರಿಗಳು, ಪೊಲೀಸ್‌ ಇಲಾಖೆಯ ಸಿಬ್ಬಂದಿಯ ಸಹಯೋಗದೊಂದಿಗೆ ಮಂಗಳವಾರ ಬೆಳಗ್ಗೆ 5.30ರ ಸಮಯದಲ್ಲಿ ದಿಢೀರ್‌ ಕಾರ್ಯಾಚರಣೆ ನಡೆಸಿದರು.

4 ಜೆಸಿಬಿ, 6 ಟಿಪ್ಪರ್‌ಗಳು, 140 ಪೊಲೀಸ್‌ ಸಿಬ್ಬಂದಿ, 70 ಜನ ಕಾರ್ಮಿಕರು ಮತ್ತು ಗ್ಯಾಂಗ್‌ಮನ್‌ಗಳ ಸಹಾಯದೊಂದಿಗೆ ಸುಮಾರು 2.755 ಎಕರೆ (1.2 ಲಕ್ಷ ಚದರಡಿ) ಭೂಮಿಯನ್ನು ಪಾಲಿಕೆ ವಶಕ್ಕೆ ಪಡೆಯಲಾಯಿತು.

ಒತ್ತುವರಿದಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು, ಸ್ಥಳದಲ್ಲಿ ಕೆಲಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳೀಯ ನಿವಾಸಿ ಪಿ.ಗೋಪಾಲಸ್ವಾಮಿ ಮಾತನಾಡಿ, ‘ಸರ್ವೆ ನಂ.7, 17, 15/1, 15/2 ಹಾಗೂ 51ರ ಸರ್ಕಾರಿ ಉದ್ಯಾನಕ್ಕೆ ಮೀಸಲಾಗಿರುವ ಜಾಗದಲ್ಲಿ ಬಲಾಢ್ಯರು ಅಕ್ರಮವಾಗಿ ವಾಣಿಜ್ಯ ಮಳಿಗೆಗಳು, ಬೃಹತ್‌ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಆ ಜಾಗವನ್ನು ವಶಕ್ಕೆ ಪಡೆಯಬೇಕೆಂದು ನ್ಯಾಯಾಲಯ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

ಸಚಿವರಿಗೆ ಮನವಿ: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರನ್ನು ಭೇಟಿ ಮಾಡಿದ ದಲಿತ ಮುಖಂಡರು, ‘ಸರ್ಕಾರಿ ಉದ್ಯಾನಗಳಿಗೆ ಸೇರಿದ ಜಾಗ ಒತ್ತುವರಿಯಾಗಿದ್ದು, ಅದನ್ನು ವಶಕ್ಕೆ ಪಡೆಯಬೇಕು’ ಎಂದು ಮನವಿ ಮಾಡಿದರು.

ಕೃಷ್ಣಬೈರೇಗೌಡ, ‘ಕಳೆದ ಐದು ವರ್ಷಗಳಿಂದ ಅಕ್ರಮಗಳು ನಡೆದು, ಸರ್ಕಾರಿ ಜಾಗಗಳೆಲ್ಲ ಕೈತಪ್ಪಿ ಹೋಗುತ್ತಿವೆ. ಯಾವುದನ್ನು ಕೈಬಿಡಿ ಅಥವಾ ತೆಗೆದುಕೊಳ್ಳಿ ಎಂದು ಹೇಳಿಲ್ಲ. ಒಂದು ಕಡೆಯಿಂದ ಆರಂಭಿಸಿ, ಸಮಗ್ರವಾಗಿ ಪರಿಶೀಲನೆ ನಡೆಸಿ, ಯಾವುದೇ ಮುಲಾಜಿಲ್ಲದೆ ಅಕ್ರಮವಾಗಿ ಒತ್ತುವರಿಯಾಗಿರುವ ಜಮೀನುಗಳನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಸರ್ಕಾರಿ ಉದ್ಯಾನಗಳ ಜಾಗದ ಒತ್ತುವರಿಯಾಗಿರುವ ಬಗ್ಗೆ ಸ್ಥಳೀಯರು ದೂರಿದ್ದು, ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ, ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದು ಜಂಟಿ ಆಯುಕ್ತ ಮೊಹಮದ್‌ ನಯೀಮ್‌ ಮೋಮಿನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT