ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗಿನೆಲೆ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿಯಿಂದ ಮೈಕ್ ಕಸಿದ ಸಿಎಂ

Last Updated 26 ಜನವರಿ 2023, 19:01 IST
ಅಕ್ಷರ ಗಾತ್ರ

ಬೆಂಗಳೂರು: ‘ಭರವಸೆಯನ್ನಷ್ಟೆ ಕೊಟ್ಟರೆ ಒಪ್ಪುವುದಿಲ್ಲ’ ಎಂದು ಕಾಗಿನೆಲೆ ಹೊಸದುರ್ಗ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳುತ್ತಿದ್ದಂತೆ, ಅವರ ಕೈಯಿಂದ ಮೈಕ್ ಕಸಿದುಕೊಂಡು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ ಪ್ರಸಂಗ ಗುರುವಾರ ನಡೆಯಿತು.

ಮಹದೇವಪುರ ಕ್ಷೇತ್ರದ ಗರುಡಾಚಾರ್‌ಪಾಳ್ಯ ಮಂಜುನಾಥಸ್ವಾಮಿ ದೇಗುಲದಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ‘ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲ ಜನ ತೊಂದರೆಗೆ ಸಿಲುಕುತ್ತಿದ್ದಾರೆ. ಶಾಶ್ವತ ಪರಿಹಾರ ಕಂಡುಕೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಕೇವಲ ಭರವಸೆ ನೀಡುವುದನ್ನು ನಾವು ಒಪ್ಪುವುದಿಲ್ಲ. ಅದನ್ನು ಚಾಚೂತಪ್ಪದೆ ಮಾಡಬೇಕು’ ಎಂದರು.

ಆಗ ಅಸಮಾಧಾನಗೊಂಡ ಮುಖ್ಯಮಂತ್ರಿ, ‘ಕೊಡಿ ಇಲ್ಲಿ’ ಎಂದು ಮೈಕ್ ಪಡೆದುಕೊಂಡರು. ‘ಇದು ಭರವಸೆಯಲ್ಲ. ಈಗಾಗಲೇ ಯೋಜನೆ ಸಿದ್ಧಪಡಿಸಿ ಹಣ ಕೊಟ್ಟಿದ್ದೇನೆ. ಕಾಮಗಾರಿಯೂ ನಡೆಯುತ್ತಿದೆ ಬುದ್ಧಿ. ಭರವಸೆ ನೀಡುವ ಮುಖ್ಯಮಂತ್ರಿ ನಾನಲ್ಲ. ಸಾಧ್ಯವಿದ್ದರೆ ಮಾಡುತ್ತೇನೆ ಎನ್ನುತ್ತೇನೆ, ಇಲ್ಲದಿದ್ದರೆ ಇಲ್ಲ. ನನಗೆ ಯಾರ ಭಯವೂ ಇಲ್ಲ. ನಾನು ಆ ರೀತಿಯ ಮುಖ್ಯಮಂತ್ರಿಯೂ ಅಲ್ಲ. ನನಗೆ ಆ ಪದ ಬಳಸಬೇಡಿ’ ಎಂದು ಮುಖ ಗಂಟಿಕ್ಕಿದರು.

ಮತ್ತೆ ಮೈಕ್ ಪಡೆದ ಸ್ವಾಮೀಜಿ, ‘ನಾನು ಹಾಗೆ ಹೇಳಲಿಲ್ಲ. ಪೂರ್ತಿ ಹೇಳುವಷ್ಟರಲ್ಲಿ ನೀವು ಮೈಕ್ ಪಡೆದುಕೊಂಡಿರಿ. ಮುಖ್ಯಮಂತ್ರಿಯವರ ಕಾರ್ಯವೈಖರಿಯನ್ನು ನಾನು ಗಮನಿಸಿದ್ದೇನೆ. ಹಿಂದುಳಿದ ವರ್ಗಗಳ ಮಠಗಳಿಗೆ ನೂರಾರು ಕೋಟಿ ಹಣ ಕೊಟ್ಟು ಶಾಲಾ–ಕಾಲೇಜುಗಳನ್ನು ಕಟ್ಟಲು ಸಹಕಾರ ನೀಡಿದ್ದೀರಿ. ನಿಮ್ಮನ್ನು ಆ ಗುಂಪಿಗೆ ನಾವು ಸೇರಿಸುವುದಿಲ್ಲ’ ಎಂದರು. ಆಗ ನಗುಮುಖದಿಂದ ಬೊಮ್ಮಾಯಿ ಕೈಮುಗಿದರು.

‘ಅವರ ಎಲ್ಲ ಭಾಷಣಗಳನ್ನೂ ಗಮನಿಸುತ್ತಿದ್ದೇನೆ. ಅವರು ರಾಜಕಾರಣಿಯಂತೆ ಮಾತನಾಡದೆ, ಜನರ ಸಂಕಷ್ಟಕ್ಕೆ ಮಿಡಿಯುತ್ತಿದ್ದಾರೆ. ಯಾರನ್ನೂ ಹೊಗಳುವುದಿಲ್ಲ, ತೆಗಳುವುದೂ ಇಲ್ಲ. ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT