ಭಾನುವಾರ, ಜನವರಿ 26, 2020
18 °C

ಅಮಿತ್ ಶಾ ಭೇಟಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಸ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಯಾವುದೇ ಕ್ಷಣದಲ್ಲೂ ಬೆಂಗಳೂರಿಗೆ ಬರುವ ಸಾಧ್ಯತೆ ಇರುವುದರಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಸಂಜೆ ಮತ್ತು ಶುಕ್ರವಾರ ಬೆಳಗ್ಗಿನ ಎಲ್ಲ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದಾರೆ.

ವಿಜಯಪುರದಲ್ಲಿ ಗುರುವಾರ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ಪಕ್ಷದ ಪ್ರಮುಖರ ಸಭೆಯನ್ನು ಮುಂದೂಡಿದ್ದರು.

ಶುಕ್ರವಾರ ವಿಜಯಪುರದಿಂದ ಬರುವುದು ತಡವಾದರೆ ಶಾ ಜತೆ ಭೇಟಿಯಾಗುವುದು ಕಷ್ಟವಾಗಬಹುದು ಎಂಬುದು ಮುಖ್ಯ ಕಾರಣ. ಅಲ್ಲದೆ, ದಾವೋಸ್‌ನಲ್ಲಿ ನಡೆಯುವ ಸಭೆಗಳಲ್ಲಿ ಮಾಡುವ ಭಾಷಣಕ್ಕೆ ತಯಾರಿ ಮಾಡಿಕೊಳ್ಳುವ ಉದ್ದೇಶದಿಂದ ಅವರು ತಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ. 

ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಹುದ್ದೆಗೆ ಗುರುವಾರ ಬೆಳಿಗ್ಗೆ ಔಪಚಾರಿಕವಾಗಿ ಚುನಾವಣೆ ನಡೆಯಲಿದ್ದು, ನಳಿನ್‌ ಕುಮಾರ್‌ ಕಟೀಲ್‌ ಅವರೇ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಮಧ್ಯಾಹ್ನ 3 ಕ್ಕೆ ಅರಮನೆ ಮೈದಾನದಲ್ಲಿ ಕಟೀಲ್‌ ಅವರಿಗೆ ಅಭಿನಂದನಾ ಸಭೆ ನಡೆಯಲಿದೆ. ಬಳಿಕ ಪಕ್ಷದ ಪ್ರಮುಖರ ಸಭೆ ನಡೆದರೆ, ಅದರಲ್ಲಿ ಪಾಲ್ಗೊಳ್ಳುವರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೈಕಮಾಂಡ್ ಸಂಸ್ಕೃತಿ ಬಗ್ಗೆ ಅಪಸ್ವರ

‘ರಾಜ್ಯದಲ್ಲಿ ಪಕ್ಷದ ಪ್ರತಿ ನಿರ್ಣಯಕ್ಕೂ ದೆಹಲಿಯ ವರಿಷ್ಠರ ಅಪ್ಪಣೆಗೆ ಕಾದು ಕೂರುವಂತಾಗಿರುವುದು ಸರಿಯಲ್ಲ. ಕಾಂಗ್ರೆಸ್‌ನ ಹೈಕಮಾಂಡ್‌ ಸಂಸ್ಕೃತಿ ಬಿಜೆಪಿಯಲ್ಲಿ ನುಸುಳುತ್ತಿರುವುದಕ್ಕೆ ಸಾಕ್ಷಿ’ ಎಂದು ಬಿಜೆಪಿಯ ಕೆಲವು ಹಿರಿಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಉಪಚುನಾವಣೆ ಮುಗಿದು, ಒಂದು ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಆಗಿಲ್ಲ. ಈ ವಿದ್ಯಮಾನಗಳು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಕಡಿವಾಣ ಒಂದು ಮಿತಿಯಲ್ಲಿ ಇರಲಿ. ಎದ್ದು ನಿಲ್ಲುವುದಕ್ಕೂ ಕೂರುವುದಕ್ಕೂ ದೆಹಲಿಯತ್ತ ಮುಖ ಮಾಡಬೇಕು ಎಂದರೆ ಎಷ್ಟು ಸರಿ’ ಎಂದು ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು