ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ರಕ್ಷಣೆಗೆ ಕಾನೂನು ಬಲ ನೀಡಲು ಬದ್ಧ: ಜೆ.ಸಿ.ಮಾಧುಸ್ವಾಮಿ ಭರವಸೆ

ಕಾನೂನು ಸಚಿವ
Last Updated 21 ಜುಲೈ 2022, 19:44 IST
ಅಕ್ಷರ ಗಾತ್ರ

ಬೆಂಗಳೂರು: ‘ಬೇರೆ ಭಾಷೆಗಳಿಗಿಂತ ಕನ್ನಡ ಕಡಿಮೆಯಿಲ್ಲ ಎನ್ನುವಂತಾಗಬೇಕು. ನಮ್ಮ ಭಾಷೆಯ ರಕ್ಷಣೆ ಹಾಗೂ ಪೋಷಣೆಗೆ ಕಾನೂನು ಬಲ ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

ಕನ್ನಡ ಚಂದ್ರ ಪ್ರಶಸ್ತಿ ಪ್ರದಾನ ಸಮಿತಿ, ಸಪ್ನ ಬುಕ್ ಹೌಸ್ ಹಾಗೂ ಕರ್ನಾಟಕ ವಿಕಾಸ ರಂಗ ಜಂಟಿಯಾಗಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾ.ನಂ. ಚಂದ್ರಶೇಖರ–70 ಕಾರ್ಯಕ್ರಮದಲ್ಲಿ ‘ಕನ್ನಡ ಡಿಂಡಿಮ’ ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಿ, ರಾ. ಪ್ರಭುಶಂಕರ ಹಾಗೂ ಭಾರ್ಗವಿ ಹೇಮಂತ್ ಅವರಿಗೆ ‘ಕನ್ನಡ ಚಂದ್ರ ಪ್ರಶಸ್ತಿ’ ಪ್ರದಾನ ಮಾಡಿದರು. ಪ್ರಶಸ್ತಿಯು ₹ 5 ಸಾವಿರ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

‘ಭಾಷೆಯ ಬಗೆಗೆ ಹಲವಾರು ಹೋರಾಟಗಳು ನಡೆದರೂ ಸಮಸ್ಯೆಗಳು ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಿಲ್ಲ. ಕನ್ನಡ ಭಾಷೆ ಮಾತ್ರ ಬಲ್ಲವರಿಗೆ ಉದ್ಯೋಗ
ಸಿಗುತ್ತಿಲ್ಲ. ನ್ಯಾಯಾಲಯದಲ್ಲಿ ಕನ್ನಡ ಅನುಷ್ಠಾನವಾಗದಿದ್ದರೆ ವಕೀಲರು ಏನು ವಾದ ಮಾಡಿದರು ಎನ್ನುವುದು‌ ಕಕ್ಷಿದಾರರಿಗೇ ತಿಳಿಯುವುದಿಲ್ಲ. ಭಾಷೆಯ ರಕ್ಷಣೆಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಮಕ್ಕಳಲ್ಲಿ ಮಾತೃ ಭಾಷೆ ಪ್ರೇಮ ಹೆಚ್ಚಿಸಬೇಕು. ಕೇಂದ್ರ ಸರ್ಕಾರವೂ ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ ನೀಡಲು ಸೂಚಿಸಿದೆ. ಪೋಷಕರು ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಓದಿಸಬೇಕು’ ಎಂದರು.

ಮಸೂದೆ ಮಂಡಿಸಿ: ಕಲಾವಿದ ‘ಮುಖ್ಯಮಂತ್ರಿ’ ಚಂದ್ರು, ‘ಕರ್ನಾಟಕ ಏಕೀಕರಣ ಬಳಿಕವೂ ಕನ್ನಡಕ್ಕೆ ಹೋರಾಡುವ ಸ್ಥಿತಿಯಲ್ಲಿ ಇದ್ದೇವೆ. ದೇಶಪ್ರೇಮದ ಜತೆಗೆ ನಾಡ ಪ್ರೇಮವೂ ಇರಬೇಕು. ಭಾಷೆಯ ಮೇಲಿನ ಅಸಡ್ಡೆಯಿಂದಾಗಿ ಸರ್ಕಾರಿ ಆದೇಶಗಳಲ್ಲಿಯೂ ತಪ್ಪುಗಳು ಕಾಣಿಸಿಕೊಳ್ಳುತ್ತಿವೆ. ಆದೇಶ, ಸುತ್ತೋಲೆಗಳಲ್ಲಿ ಕನ್ನಡವನ್ನು ತಪ್ಪಾಗಿ ಬರೆದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಭಾಷೆ ಇನ್ನಷ್ಟು ದುಃಸ್ಥಿತಿಗೆ ತಲುಪಲಿದೆ. ಸರ್ಕಾರವು ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ’ಯನ್ನು ಅಧಿವೇಶನದಲ್ಲಿ ಮಂಡಿಸಬೇಕು’ ಎಂದು ಹೇಳಿದರು.

‘ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿರೋಧಗಳು ವ್ಯಕ್ತವಾದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೌನಕ್ಕೆ ಶರಣಾಗಿದ್ದಾರೆ. ಇದು ಅವರ ವ್ಯಕ್ತಿತ್ವಕ್ಕೆ ಒಪ್ಪುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT