ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಧರಣಿ

Last Updated 17 ಮಾರ್ಚ್ 2022, 16:15 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇಕಡ 3ರಿಂದ ಶೇ 7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ವಿಧಾನಸಭೆಯಲ್ಲಿ ಗುರುವಾರ ಧರಣಿ ನಡೆಸಿದರು.

ಗಮನ ಸೆಳೆಯುವ ಸೂಚನೆ ಮಂಡಿಸಿದ ಕಾಂಗ್ರೆಸ್‌ನ ಟಿ. ರಘುಮೂರ್ತಿ, ಈ. ತುಕಾರಾಂ, ಪ್ರಿಯಾಂಕ್‌ ಖರ್ಗೆ, ಅನಿಲ್‌ ಚಿಕ್ಕಮಾದು, ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ, ಬಿಜೆಪಿಯ ಸೋಮಲಿಂಗಪ್ಪ, ಮೀಸಲಾತಿ ಪ್ರಮಾಣ ಹೆಚ್ಚಿಸಿ ತಕ್ಷಣ ಆದೇಶ ಹೊರಡಿಸುವಂತೆ ಆಗ್ರಹಿಸಿದರು.

‘ಈ ವಿಷಯದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ಆಯೋಗ ವರದಿ ನೀಡಿದೆ. ಪುನಃ ಅದನ್ನು ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ನೇತೃತ್ವದ ಸಮಿತಿಯ ಪರಾಮರ್ಶೆಗೆ ವರ್ಗಾಯಿಸಿರುವುದು ಸರಿಯಲ್ಲ. ಆಯೋಗ ನೀಡಿದ್ದ ವರದಿ ಆಧರಿಸಿ ಮೀಸಲಾತಿ ಹೆಚ್ಚಿಸಿ ಆದೇಶ ಹೊರಡಿಸಬೇಕು’ ಎಂದು ಈ ಎಲ್ಲ ಶಾಸಕರು ಒತ್ತಾಯಿಸಿದರು.

ಉತ್ತರ ನೀಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ‘ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ವರದಿ ನೀಡುವಂತೆ ಸುಭಾಷ್‌ ಅಡಿ ನೇತೃತ್ವದ ಸಮಿತಿಗೆ ಮನವಿ ಮಾಡುತ್ತೇನೆ. ಅವರಿಂದ ವರದಿ ಬರುವುದು ವಿಳಂಬವಾದರೆ ನಾಗಮೋಹನದಾಸ್‌ ಆಯೋಗದ ವರದಿ ಆಧಾರದಲ್ಲೇ ಮೀಸಲಾತಿ ಹೆಚ್ಚಳ ಮಾಡಲು ಪ್ರಯತ್ನಿಸುತ್ತೇನೆ’ ಎಂದರು.

‘ಈ ವಿಚಾರದಲ್ಲಿ ಆಡಿದ ಮಾತಿಗೆ ನಾನು ಬದ್ಧನಾಗಿದ್ದೇನೆ. ಅಡ್ವೊಕೇಟ್‌ ಜನರಲ್‌ ಅವರಿಂದ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು.

ಸಚಿವರ ಉತ್ತರದಿಂದ ತೃಪ್ತರಾಗದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಸಭಾಧ್ಯಕ್ಷರ ಪೀಠದ ಎದುರು ಧಾವಿಸಿ ಧರಣಿ ಆರಂಭಿಸಿದರು. ಸ್ವಸ್ಥಾನಕ್ಕೆ ಮರಳುವಂತೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿದ ಮನವಿಗೆ ಸ್ಪಂದನೆ ಸಿಗಲಿಲ್ಲ. ಗದ್ದಲ ಹೆಚ್ಚಾದ ಕಾರಣ ಸಭಾಧ್ಯಕ್ಷರು ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT