ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲೆ ಸೇರಿದ ರಾಗಿ ಗುಂಡು

ಸಿ. ಜಿ. ಮೋಹನ್ ಕುಮಾರ್
Published 6 ಫೆಬ್ರುವರಿ 2024, 18:29 IST
Last Updated 6 ಫೆಬ್ರುವರಿ 2024, 18:29 IST
ಅಕ್ಷರ ಗಾತ್ರ

ದಾಬಸ್ ಪೇಟೆ: ಕೃಷಿ ಯಾಂತ್ರೀಕರಣಕ್ಕೆ ಒಳಗಾಗುತ್ತಿದ್ದಂತೆ ಪೂರ್ವಜರು ಬಳಸುತ್ತಿದ್ದ ಗ್ರಾಮೀಣ ಸೊಗಡಿನ ಕೃಷಿ ಪರಿಕರಗಳು ಕಣ್ಮರೆಯಾಗುತ್ತಾ, ಮೂಲೆ ಸೇರುತ್ತಿವೆ.

ರಾಗಿ ಬೆಳೆಯುವ ಬಯಲು ಸೀಮೆ ಜಿಲ್ಲೆಗಳಾದ ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಚಿತ್ರದುರ್ಗ ಜಿಲ್ಲೆಗಳ ಕಣಗಳಲ್ಲಿ ಹುಲ್ಲಿನಿಂದ ರಾಗಿ ಬೇರ್ಪಡಿಸಲು ಗುಂಡು ಅಂದರೆ ರೋಣ ಕಲ್ಲು ಬಳಸುತ್ತಿದ್ದರು.

ಮರದಲ್ಲಿ ಮಾಡಿದ ಉಪಕರಣಗಳಿಗೆ ಗುಂಡನ್ನು ಜೋಡಿಸಿ, ಕಣದಲ್ಲಿ ಹದವಾಗಿ ಹುಲ್ಲು ಹರಡಿ ಅದರ ಮೇಲೆ ಎತ್ತು, ಎಮ್ಮೆಗಳಿಗೆ ಕಟ್ಟಿದ ಗುಂಡನ್ನು ಓಡಾಡಿಸುತ್ತಿದ್ದರು. ಹೀಗೆ ಕಣಗಳಲ್ಲಿ ಕೆಲಸಕ್ಕೆ ಬಂದ ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಿದ್ದರೆ, ಪುರುಷರು ರೋಣು ಹೊಡೆಯುತ್ತಿದ್ದರು. ಗುಂಡಿಗೆ ಅಳವಡಿಸಿದ್ದ ಮರದಿಂದ ಹೊಮ್ಮುತ್ತಿದ್ದ ಶಬ್ದವು ವಿಶೇಷವಾಗಿತ್ತು.

ಗುಂಡು ಕಣಕ್ಕೆ ಇಳಿಸುವ ಹಾಗೂ ಹೊರಗೆ ಬಿಡುವ ಸಮಯದಲ್ಲಿ ಹುಲ್ಲು ಹಿಡಿದುಕೊಂಡು ಕಣದ ಸುತ್ತಲೂ ಒಂದು ಕಾಲು ಗಟ್ಟುವ ಸಂಪ್ರದಾಯ ಇತ್ತು. ರಾಗಿ ಅಷ್ಟೇ ಅಲ್ಲದೆ ಭತ್ತ, ತೊಗರಿ, ಹುರುಳಿ, ಜೋಳಗಳಿಂದ ಕಾಳು ಬೇರ್ಪಡಿಸಲು ರೈತರು ಗುಂಡು ಹೊಡೆಯುತ್ತಿದ್ದರು.

1990ರ ದಶಕದ ನಂತರ ಕೃಷಿಗೆ ಟ್ರ್ಯಾಕ್ಟರ್ ಲಗ್ಗೆಯಿಟ್ಟಿತ್ತು. ರೈತರು ನಿಧಾನವಾಗಿ ಗುಂಡುಗಳನ್ನು ಕಣಕ್ಕೆ ಹೂಡುವುದು ಕಡಿಮೆ ಮಾಡುತ್ತಾ ಬಂದರು. ನಾಲ್ಕೈದು ವರ್ಷಗಳಿಂದ ಈಚೆಗೆ ನೇರವಾಗಿ ಹೊಲದಲ್ಲಿಯೇ ಹುಲ್ಲು ಮತ್ತು ರಾಗಿಯನ್ನು ಬೇರ್ಪಡಿಸುವ ಬೇಲರ್ ಯಂತ್ರಗಳು ಬಂದಮೇಲೆ, ಒಂದು ಕಾಲದಲ್ಲಿ ರೈತನಿಗೆ ಅತಿ ಅವಶ್ಯಕವಾಗಿದ್ದ ಗುಂಡುಗಳು ಅನಾಥವಾಗಿ ರೈತರ ಬದು ಅಥವಾ ಹೊಲದ ಮೂಲೆ ಸೇರಿ ಪಳೆಯುಳಿಕೆಗಳಾಗುತ್ತಿವೆ.

ಮೂಲೆ ಸೇರಿರುವ ರಾಗಿ ಗುಂಡು
ಮೂಲೆ ಸೇರಿರುವ ರಾಗಿ ಗುಂಡು
ಮೂಲೆ ಸೇರಿರುವ ರಾಗಿ ಗುಂಡು
ಮೂಲೆ ಸೇರಿರುವ ರಾಗಿ ಗುಂಡು

- ಕಣದಲ್ಲಿ ಗುಂಡಿನ ಗಮ್ಮತ್ತು...

ಸಗಣಿಯಿಂದ ಸಾರಿಸಿದ ಕಣದಲ್ಲಿ ಸಂಕ್ರಾಂತಿ ನಂತರ ಬಿಸಿಲ ಕಾಲದಲ್ಲಿ ಎತ್ತು ಮತ್ತು ಗುಂಡಿನ ಶಕ್ತಿ ಗಮನಿಸಿ ಹುಲ್ಲು ಹರಡಿ ಗುಂಡು ಹೊಡೆಯುತ್ತಿದ್ದರು. ಗುಂಡು ಹೊಡೆಯುವವರು ಅನುಭವಿಗಳು ಹಾಗೂ ಎತ್ತುಗಳು ದಷ್ಟ ಪುಷ್ಟವಾಗಿ ಇರಬೇಕಿತ್ತು. ಎರಡು ಬಾರಿ ಮೆರೆ ಕೊಡವಿ (ಹುಲ್ಲು ಒದರುವುದು) ಗುಂಡು ಓಡಾಡಿಸಿ ತೆನೆ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡು ಹುಲ್ಲು ತೆಗೆದು ಹೊರ ಹಾಕುತ್ತಿದ್ದರು. ಕಡೆ ಕಣದ ದಿನ ಅಂದರೆ ರಾಶಿ ಪೂಜೆ ದಿನ ಗುಂಡಿಗೆ ವಿಶೇಷ ಪೂಜೆ ಮಾಡಲಾಗುತ್ತಿತ್ತು.

ಕಾಣೆಯಾಗುತ್ತಿವೆ ಕೃಷಿ ಪರಿಕರ

‘ನಮ್ಮ ಕಾಲದಲ್ಲಿ ರೈತರು ಗುಂಡು ಹೂಡಿ ಹುಲ್ಲಿನಿಂದ ರಾಗಿ ಬೇರ್ಪಡಿಸುವುದಕ್ಕೆ ಹೆಚ್ಚು ದಿನ ಹಿಡಿಯುತ್ತಿತ್ತು. ಆದರೆ ಈಗ ಒಂದೇ ದಿನಕ್ಕೆ ರಾಗಿ ಮನೆಗೆ ಬರುತ್ತಿವೆ. ಕಾಲ ಬದಲಾದಂತೆ ನಮ್ಮ ಕೃಷಿ ಪರಿಕರಗಳು ಅಜ್ಞಾತವಾಗುತ್ತಿವೆ’ ಎನ್ನುತ್ತಾರೆ ಹಿರಿಯ ರೈತ ಹನುಮಂತರಾಯಪ್ಪ. ಚಿತ್ರದಲ್ಲಿ ತೋರಿಸಬೇಕು ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ರಾಗಿ ಕಣ ರಾಗಿ ಬೇರ್ಪಡಿಸಲು ಬೇಕಾದ ಗುಂಡು ಮೆರಗಡ್ಡಿ ಜರಡಿಯಂತಹ ಉಪಕರಣಗಳು ನಾವು ಚಿತ್ರಗಳಲ್ಲಿ ತೋರಿಸಬೇಕು. ಗ್ರಾಮೀಣ ಭಾಗದಲ್ಲಿ ಇವೆಲ್ಲ ನಶಿಸಿ ಹೋಗುತ್ತಿವೆ. ಅವುಗಳನ್ನು ಸಂರಕ್ಷಿಸಬೇಕಿದೆ ಎಂದು ಪ್ರಾಧ್ಯಾಪಕ ಶ್ಯಾಮ್ ಸುಂದರ್ ಶರ್ಮಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT