ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 | ಎಂಟೇ ದಿನದಲ್ಲಿ ಕಾನ್‌ಸ್ಟೆಬಲ್ ಗುಣಮುಖ

ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಗೊಂಡ ಸಿಬ್ಬಂದಿಗೆ ಅದ್ಧೂರಿ ಸ್ವಾಗತ
Last Updated 31 ಮೇ 2020, 3:15 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ತಗುಲಿದ್ದ ನಗರದ ಸಂಚಾರ ಠಾಣೆ ಕಾನ್‌ಸ್ಟೆಬಲ್ ಕೇವಲ ಎಂಟೇ ದಿನದಲ್ಲಿ ಗುಣಮುಖವಾಗಿದ್ದು, ಶನಿವಾರ ಸಂಜೆ ವಿಕ್ಟೋರಿಯಾ ಆಸ್ಪತ್ರೆಯಿಂದ ಬಿಡುಗಡೆಯಾದರು.

ಪುಲಿಕೇಶಿನಗರ ಸಂಚಾರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 30 ವರ್ಷದ ಕಾನ್‌ಸ್ಟೆಬಲ್‌ಗೆ ಸೋಂಕು ಇರುವುದು ಮೇ 22ರಂದು ದೃಢಪಟ್ಟಿತ್ತು. ಅಂದೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರ ಗಂಟಲಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗೆ ಗುರುವಾರ ಕಳುಹಿಸಲಾಗಿತ್ತು. ಶುಕ್ರವಾರ ವರದಿ ನೆಗಟಿವ್ ಬಂದಿದ್ದು, ಹೀಗಾಗಿಯೇ ಅವರನ್ನು ಶನಿವಾರ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಯಿತು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಕಾನ್‌ಸ್ಟೆಬಲ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಹೂಹಾಸಿನ ಮೇಲೆ ನಡೆದುಕೊಂಡು ಬಂದ ಕಾನ್‌ಸ್ಟೆಬಲ್ ಅವರ ಮೇಲೆ ಕಮಿಷನರ್ ಭಾಸ್ಕರ್ ರಾವ್, ಜಂಟಿ ಕಮಿಷನರ್ (ಸಂಚಾರ) ಬಿ.ಆರ್.ರವಿಕಾಂತೇಗೌಡ, ಡಿಸಿಪಿ ನಾರಾಯಣ ಹೂ ಮಳೆಗೆರೆದರು. ಹೂಹಾರ ಹಾಕಿ, ಹೂಗುಚ್ಛ ಕೊಟ್ಟು ಅಭಿನಂದಿಸಿದರು. ಆಸ್ಪತ್ರೆ ಆವರಣದಿಂದ ರಸ್ತೆಯವರೆಗೂ ವಾದ್ಯ ಮೇಳದ ಜೊತೆಯಲ್ಲೇ ಅವರನ್ನು ಕರೆತರಲಾಯಿತು. ಸಹೋದ್ಯೋಗಿಗಳು ಶುಭ ಕೋರಿದರು.

ಕಡಿಮೆ ಅವಧಿಯಲ್ಲಿ ಗುಣಮುಖ: ‘ಕಾನ್‌ಸ್ಟೆಬಲ್ ಅವರಿಗೆ ಕೊರೊನಾ ಲಕ್ಷಣಗಳು ಇರಲಿಲ್ಲ. ವರದಿ ಮಾತ್ರ ಪಾಸಿಟಿವ್ ಬಂದಿತ್ತು. ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿತ್ತು. ಕಡಿಮೆ ಅವಧಿಯಲ್ಲಿ ಅವರು ಗುಣಮುಖವಾಗಿರುವುದಾಗಿ ವೈದ್ಯರು ಹೇಳಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಜನರಿಗಾಗಿ ಕೆಲಸ ಮಾಡುವಾಗ ಕಾನ್‌ಸ್ಟೆಬಲ್‌ಗೆ ಸೋಂಕು ತಗುಲಿದೆ. ನಿತ್ಯವೂ ಕರೆ ಮಾಡಿ ಕಾನ್‌ಸ್ಟೆಬಲ್ ಆರೋಗ್ಯ ವಿಚಾರಿಸುತ್ತಿದ್ದೆವು. ಅವರಿಗೆ ಭರ್ಜರಿ ಸ್ವಾಗತ ನೀಡುವ ಮೂಲಕ ಪೊಲೀಸರಲ್ಲಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT