ಶುಕ್ರವಾರ, ಡಿಸೆಂಬರ್ 4, 2020
22 °C
ಪಾಸಿಟಿವ್‌ ಇರದಿದ್ದರೆ ವಾರವಾದರೂ ವರದಿ ನೀಡುವುದಿಲ್ಲ: ಆರೋಪ‍

ಕೋವಿಡ್‌ ಪರೀಕ್ಷೆ– ವರದಿ ವಿಳಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಪರೀಕ್ಷೆಗೆ ಗಂಟಲು ದ್ರವದ ಮಾದರಿ ನೀಡಿ ನಾಲ್ಕೈದು ದಿನಗಳ ಬಳಿಕವೂ ವರದಿ ಬಾರದಿರುವ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ಮತ್ತು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಾಲೇಜಿನಲ್ಲಿ ನೇರ ತರಗತಿಗೆ ಹಾಜರಾಗಲು ನಾವು ಕೋವಿಡ್ ಪರೀಕ್ಷೆ ಮಾಡಿಸಿ ಸೋಂಕು ಇಲ್ಲದ ಕುರಿತ ವರದಿಯನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಆದ್ದರಿಂದ ಶುಕ್ರವಾರವೇ ಗಂಟಲು ದ್ರವದ ಮಾದರಿ ನೀಡಿದ್ದೆ. ಬಿಬಿಎಂಪಿಯ ಕೋವಿಡ್‌ ಪರೀಕ್ಷಾ ಘಟಕದಲ್ಲಿ ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿದ್ದೆ. ಬುಧವಾರ ರಾತ್ರಿಯವರೆಗೂ ವರದಿ ಬಂದಿರಲಿಲ್ಲ’ ಎಂದು ಕಾಲೇಜು ವಿದ್ಯಾರ್ಥಿನಿಯೊಬ್ಬರು ಹೇಳಿದರು. 

‘ಮಂಗಳವಾರದಿಂದಲೇ ಕಾಲೇಜಿಗೆ ಹೋಗಬೇಕಾಗಿತ್ತು. ವರದಿ ಬರುವವರೆಗೆ ಹೋಗುವಂತಿಲ್ಲ. ಕೋವಿಡ್‌ ಪರೀಕ್ಷೆ  ಫಲಿತಾಂಶದ ಬಗ್ಗೆ ಕನಿಷ್ಠಪಕ್ಷ ಮೊಬೈಲ್‌ಗೆ ಸಂದೇಶವನ್ನೂ ನೀಡಿದರೂ ಸಾಕಿತ್ತು. ಅದನ್ನೂ ಕಳುಹಿಸಿಲ್ಲ. ಗಂಟಲ ದ್ರ ನೀಡಿದ ಬಳಿಕ ಕೋವಿಡ್‌ನದ್ದೇ ಚಿಂತೆ ಕಾಡುತ್ತಿರುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.

‘ವಿಜಯನಗರದ ಮೆಟ್ರೊ ನಿಲ್ದಾಣದ ಬಳಿ ಬಿಬಿಎಂಪಿ ತೆರೆದಿದ್ದ ಘಟಕದಲ್ಲಿ ನ.12ರಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದೆ. ಐದು ದಿನಗಳಾದರೂ ವರದಿ ಬಂದಿರಲಿಲ್ಲ. ವಿಚಾರಿಸಿದಾಗ ಕಿದ್ವಾಯಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಲಾಗಿದೆ ಎಂದು ಸಿಬ್ಬಂದಿ ಹೇಳಿದ್ದರು. ನ.17ರ ರಾತ್ರಿ ವರದಿ ಕೈ ಸೇರಿತು’ ಎಂದು ಹಿರಿಯ ನಾಗರಿಕ ನಾರಾಯಣ ರಾವ್ ಹೇಳಿದರು.

‘ಕೋವಿಡ್‌ ಸೊಂಕು ಪತ್ತೆಯಾಗದಿದ್ದವರಿಗೆ ವರದಿ ಕಳುಹಿಸಲು ವಿಳಂಬ ಮಾಡಲಾಗುತ್ತಿದೆ. ನಿಗದಿತ ವೆಬ್‌ಸೈಟ್‌ನಲ್ಲಿ ನೆಗೆಟಿವ್ ವರದಿಗಳನ್ನು ಅಪ್‌ಲೊಡ್ ಮಾಡುವುದು ವಿಳಂಬ ಮಾಡುತ್ತಾರೆ. ವರದಿ ಬರುವವರೆಗೆ ಆತಂಕದಲ್ಲಿಯೇ ಸಮಯ ಕಳೆಯ
ಬೇಕಾಗುತ್ತದೆ’ ಎಂದು ಅವರು ಹೇಳಿದರು.

‘ಬಿಬಿಎಂಪಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ವರದಿ ಕೊಡುವುದನ್ನು ವಿಳಂಬ ಮಾಡುವ ಮೂಲಕ ಖಾಸಗಿ ಆಸ್ಪತ್ರೆ ಅಥವಾ ಪ್ರಯೋಗಾಲಯಗಳಲ್ಲಿ ಹೆಚ್ಚು ದುಡ್ಡು ಕೊಟ್ಟು ಪರೀಕ್ಷೆ ಮಾಡಿಸಬೇಕಾದ ಅನಿವಾರ್ಯ ಸೃಷ್ಟಿಸಲಾಗುತ್ತಿದೆ’ ಎಂದು ಅವರು ದೂರಿದರು.

‘ವಿಳಂಬ ಮಾಡಿದರೆ ದಂಡ’

‘ಪ್ರಾರಂಭದಲ್ಲಿ ಕೋವಿಡ್‌ ಪರೀಕ್ಷೆಯ ವರದಿ ನೀಡುವಾಗ ವಿಳಂಬವಾಗುತ್ತಿದ್ದುದು ನಿಜ. ಆದರೆ, ಈಗ 24 ಗಂಟೆಯೊಳಗೆ ವರದಿಗಳನ್ನು ನೀಡಲಾಗುತ್ತಿದೆ. ಉದ್ದೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸಿದರೆ, ಅಂತಹ
ಪ್ರಯೋಗಾಲಯಗಳಿಗೆ ಪರೀಕ್ಷಾ ಶುಲ್ಕದ ಶೇ 10ರಷ್ಟು ದಂಡ ವಿಧಿಸಲಾಗುತ್ತಿದೆ. ತಡವಾಗಿ ವರದಿ ನೀಡುವವರ ವಿರುದ್ಧ ಕ್ರಮವನ್ನೂ ತೆಗದುಕೊಳ್ಳಲಾಗುತ್ತಿದೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜಯೇಂದ್ರ ತಿಳಿಸಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.