ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಿಹಾರ– ಬೆರಗಾದ ಜನರು

Last Updated 10 ಮಾರ್ಚ್ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ನಿತ್ಯವೂ ಒಂದಿಲ್ಲೊಂದು ಸಂಶೋಧನೆ ನಡೆಯುವ ವಿಜ್ಞಾನ ಲೋಕವದು. ಈ ಪ್ರಾಂಗಣಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿಲ್ಲ. ಆದರೆ, ಶನಿವಾರ ಹಾಗಾಗಲಿಲ್ಲ... ಇಲ್ಲಿನ ವೈಜ್ಞಾನಿಕ ಚಟುವಟಿಕೆಯನ್ನು ಜನ ಹತ್ತಿರದಿಂದ ಕಣ್ತುಂಬಿಕೊಂಡರು. ವಿಜ್ಞಾನದ ಕೌತುಕಗಳಿಗೆ ಬೆರಗಾದರು.

ನಗರದಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರಾಂಗಣಕ್ಕೆ ಶನಿವಾರ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿತ್ತು ವರ್ಷಪೂರ್ತಿ ಜನಜಂಗುಳಿ ಇಲ್ಲದೇ ಪ್ರಶಾಂತ ವಾತಾರಣವನ್ನು ಹೊಂದಿರುವ ಈ ಹಸಿರುಪ್ರಾಂಗಣ ಜನರಿಂದ ಗಿಜಿಗುಡುತ್ತಿತ್ತು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ವಯಸ್ಸಿನ ಭೇದವಿಲ್ಲದೇ ಜನ ಇಲ್ಲಿ ಮಾಹಿತಿ ಪಡೆದರು. ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಸಣ್ಣ ಪುಟ್ಟ ವಿಚಾರಗಳ ಹಿಂದಿರುವ ವೈಜ್ಞಾನಿಕ ಸಂಗತಿಗಳನ್ನು ತಿಳಿದುಕೊಂಡರು. ಅನೇಕ  ಉದ್ಯೋಗಸ್ಥರು ವಾರಾಂತ್ಯದ ಮೋಜನ್ನು ಬದಿಗಿಟ್ಟು, ಕುಟುಂಬ ಸಮೇತ ಬಂದಿದ್ದರು.

ವಿಜ್ಞಾನದ ಸ್ವಾರಸ್ಯಗಳ ಕುರಿತ ಪ್ರಾತ್ಯಕ್ಷಿಕೆಗಳು ಜನರ ಮನಸ್ಸಿನಲ್ಲಿದ್ದ ಅನೇಕ ಗೊಂದಲಗಳನ್ನು ತಣಿಸುವ ಯತ್ನ ಮಾಡಿತು.

ಮೋಡಗಳಲ್ಲಿ ತೇವಾಂಶದ ಪ್ರಮಾಣ ಹೆಚ್ಚಾದಾಗ ಅವು ಹೇಗೆ ಮಳೆಯ ರೂಪದಲ್ಲಿ ಭುವಿಯನ್ನು ಸೇರುತ್ತದೆ ಎಂಬುದನ್ನು  ಬಿಎಸ್ಸಿ ವಿದ್ಯಾರ್ಥಿಗಳು ವಿವರಿಸಿದರು. ಮೋಡಗಳ ಬದಲು ನೊರೆಯನ್ನು ಬಳಸಿಕೊಂಡು ಮಳೆಯ ವೈಜ್ಞಾನಿಕ ತರ್ಕವನ್ನು ಜನರ ಮುಂದೆ ಬಿಡಿಸಿಟ್ಟರು. ನೊರೆಗಳಿಗೆ ಬಣ್ಣದ ನೀರನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ ತೋರಿಸಿದರು. ಒಂದು ಹಂತದ ಬಳಿಕ ನೊರೆಗಳು ನೀರನ್ನು ಹಿಡಿದಿಟ್ಟುಕೊಳ್ಳಲಿಲ್ಲ.

‘ತೇವಾಂಶವನ್ನು ಹೀರಿಕೊಳ್ಳುವ ಮೋಡಗಳು ಸಂತೃಪ್ತ ಸ್ಥಿತಿ ತಲುಪಿದ ಬಳಿಕ ಇದೇ ರೀತಿ ನೀರಿನಂಶವನ್ನು ಬಿಟ್ಟುಕೊಡುತ್ತವೆ’ ಎಂದು ವಿದ್ಯಾರ್ಥಿನಿ ಅಲಕಾ ವಿವರಿಸಿದರು.

ದೇಹದಲ್ಲಿ ಪ್ರತಿಜೀವಕ ಔಷಧಿಗಳು (ಆ್ಯಂಟಿಬಯಾಟಿಕ್‌) ಹೇಗೆ ಪರಿಣಾಮ ಬೀರುತ್ತವೆ. ಅವುಗಳ ಅತಿ ಸೇವನೆಯಿಂದ ಯಾವ ರೀತಿ ಅಡ್ಡ ಪರಿಣಾಮ ಉಂಟಾಗುತ್ತದೆ ಎಂಬ ಬಗ್ಗೆ ಜೀವವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಬೆಂಕಿ ಬಿರುಗಾಳಿ: ಟಾರ್ನೆಡೊಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ವಿವರಿಸಲು ವಿದ್ಯಾರ್ಥಿಗಳು ಬೆಂಕಿಯ ಮೊರೆ ಹೋದರು. ಬೆಂಕಿಯ ಸುತ್ತ ಅರ್ಧ ಚಂದ್ರಾಕಾರದ ಗಾಜಿನ ಜಾಲರಿಗಳನ್ನಿಟ್ಟಾಗ ಅದರ ಜ್ವಾಲೆ ಸುರುಳಿ ಸುತ್ತಲಾರಂಭಿಸಿತು. ಅದು ಶಂಕುವಿನಾಕೃತಿ ತಳೆದು ಎತ್ತರೆತ್ತರಕ್ಕೆ ಹಬ್ಬಿತು.

ವಾತಾವರಣದಲ್ಲಿ ವಿಭಿನ್ನ ದಿಕ್ಕಿನಲ್ಲಿ ಚಲಿಸುವ ಗಾಳಿಗಳು ಪರಸ್ಪರ ಮುಖಾಮುಖಿಯಾದಾಗ, ಅವು ಖಾಲಿ ಜಾಗದತ್ತ ಮುನ್ನುಗ್ಗಲು ಪ್ರಯತ್ನಿಸುತ್ತವೆ. ಸುರುಳಿ ಸುತ್ತುವ ಗಾಳಿಗಳ ಒಳಗೆ ನಿರ್ವಾತ ಸೃಷ್ಟಿಯಾಗುತ್ತದೆ. ಈ ಪ್ರಕ್ರಿಯೆ ಟಾರ್ನೆಡೊವನ್ನು ಸೃಷ್ಟಿಸುತ್ತದೆ ಎಂದು ವಿದ್ಯಾರ್ಥಿ ದುರ್ಗಾ ಪ್ರಸಾದ್‌ ತಿಳಿಸಿದರು.

ವೈಮಾಂತರಿಕ್ಷ ವಿಭಾಗದ ಬಳಿಯಂತೂ ವಿಪರೀತ ಜಂಗುಳಿ ಇತ್ತು. ಇಲ್ಲಿ ಮಾನವರಹಿತ ವಿಮಾನ (ಯುಎವಿ) ಹಾಗೂ ಡ್ರೋನ್‌ಗಳು ಶರವೇಗದಲ್ಲಿ ಹಾರುತ್ತಾ ಬರುವ ದೃಶ್ಯ ಚಿಣ್ಣರು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು.

150 ಡಿಗ್ರಿ ಸೆಲ್ಸಿಯಸ್‌ನಲ್ಲೂ ಬದುಕುತ್ತದೆ ಈ ಜೀವಿ!: ನಗರದ ತಾಪಮಾನ 30 ಡಿಗ್ರಿ ದಾಟುತ್ತಿದ್ದಂತೆಯೇ ನಮಗೆ ಸೆಕೆ ತಾಳಿಕೊಳ್ಳಲಾಗದು. ಆದರೆ, ಬೆಂಗಳೂರಿನಲ್ಲೂ ಕಂಡುಬರುವ ಈ ಪುಟಾಣಿ ಜೀವಿ 150 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವನ್ನೂ ತಾಳಿಕೊಳ್ಳಬಲ್ಲುದು. ಐಐಎಸ್ಸಿ ಪ್ರಾಂಗಣದಲ್ಲೇ ಹೆಕ್ಕಿ ತಂದ ಈ ಪುಟ್ಟ ಪ್ರಾಣಿಯನ್ನು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು.

ಅಂದ ಹಾಗೆ, ಇದರ ಹೆಸರು ‘ಟಾರ್ಡಿಗ್ರೇಡ್‌’. ಕರಡಿಯನ್ನು ಹೋಲುವ ಈ ಅಷ್ಟಪಾದಿಯನ್ನು ‘ಜಲ ಕರಡಿ’ (ವಾಟರ್‌ ಬಿಯರ್‌) ಎಂದೂ ಕರೆಯುತ್ತಾರೆ. ಇದರ ಗಾತ್ರ ಒಂದು ಅರ್ಧ ಮಿಲಿಮೀಟರ್‌ನಷ್ಟಿರಬಹುದು ಅಷ್ಟೇ.

‘ಪಾಚಿಗಳಿರುವಲ್ಲಿ, ತೇವಾಂಶಭರಿತ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ’ ಎಂದು ವಿದ್ಯಾರ್ಥಿ ಅಂಶು ತಿಳಿಸಿದರು.

**

150 ಡಿಗ್ರಿ ಸೆಲ್ಸಿಯಸ್‌ನಲ್ಲೂ ಬದುಕುತ್ತದೆ ಈ ಜೀವಿ!

ನಗರದ ತಾಪಮಾನ 30 ಡಿಗ್ರಿ ದಾಟುತ್ತಿದ್ದಂತೆಯೇ ನಮಗೆ ಸೆಕೆ ತಾಳಿಕೊಳ್ಳಲಾಗದು. ಆದರೆ, ಬೆಂಗಳೂರಿನಲ್ಲೂ ಕಂಡುಬರುವ ಈ ಪುಟಾಣಿ ಜೀವಿ 150 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವನ್ನೂ ತಾಳಿಕೊಳ್ಳಬಲ್ಲುದು. ಐಐಎಸ್ಸಿ ಪ್ರಾಂಗಣದಲ್ಲೇ ಹೆಕ್ಕಿ ತಂದ ಈ ಪುಟ್ಟ ಪ್ರಾಣಿಯನ್ನು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿತ್ತು.

ಅಂದ ಹಾಗೆ, ಇದರ ಹೆಸರು ‘ಟಾರ್ಡಿಗ್ರೇಡ್‌’. ಕರಡಿಯನ್ನು ಹೋಲುವ ಈ ಅಷ್ಟಪಾದಿಯನ್ನು ‘ಜಲ ಕರಡಿ’ (ವಾಟರ್‌ ಬಿಯರ್‌) ಎಂದೂ ಕರೆಯುತ್ತಾರೆ. ಇದರ ಗಾತ್ರ ಒಂದು ಅರ್ಧ ಮಿಲಿಮೀಟರ್‌ನಷ್ಟಿರಬಹುದು ಅಷ್ಟೇ.

‘ಪಾಚಿಗಳಿರುವಲ್ಲಿ, ತೇವಾಂಶಭರಿತ ಪ್ರದೇಶಗಳಲ್ಲಿ ಇವು ಹೆಚ್ಚಾಗಿ ಕಂಡು ಬರುತ್ತವೆ. ಮರದಲ್ಲಿ ಹಾವಸೆಗಳಿಂದ ಇದನ್ನು ಸಂಗ್ರಹಿಸಿದ್ದೇವೆ’ ಎಂದು ವಿದ್ಯಾರ್ಥಿ ಅಂಶು ತಿಳಿಸಿದರು.

**

‘ಮುಕ್ತ ದಿನ’ ಸಾಲದು, ಸಪ್ತಾಹ ಬೇಕು

ಇಲ್ಲಿ ಪ್ರದರ್ಶಿಸಿರುವ ಅಷ್ಟೂ ವಿಚಾರಗಳನ್ನು ತಲೆಗೆ ತುಂಬಿಸಿಕೊಳ್ಳಲು ಒಂದು ದಿನ ಸಾಲದು. ಕನಿಷ್ಠ ಒಂದು ವಾರ ಸಾರ್ವಜನಿಕರಿಗೆ ಇಲ್ಲಿಗೆ ಮುಕ್ತ ಪ್ರವೇಶ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

’ನಾನು ಮಕ್ಕಳ ಜೊತೆ ಇಲ್ಲಿಗೆ ಬಂದಿದ್ದೇನೆ. ಪ್ರತಿಯೊಂದು ವಿಭಾಗದಲ್ಲೂ  ತಿಳಿದುಕೊಳ್ಳುವುದಕ್ಕೆ ಬಹಳಷ್ಟು ವಿಚಾರಗಳಿವೆ. ಮುಂದಿನ ವರ್ಷದಿಂದಲಾದರೂ ಐಐಎಸ್ಸಿ ಒಂದು ದಿನದ ಬದಲು ಒಂದು ವಾರದ ಪ್ರದರ್ಶನ ಏರ್ಪಡಿಸಬೇಕು’ ಎಂದು ಜ್ಯೋತ್ಸಾ ಒತ್ತಾಯಿಸಿದರು.

**

ಜನರಿಗೆ ವಿಜ್ಞಾನದ ಕೌತುಕಗಳ ಬಗ್ಗೆ ವಿವರಿಸುವುದೆಂದರೆ ಏನೋ ಒಂಥರ ಖುಷಿ.  ಅನೇಕರು ಸೂಕ್ಷ್ಮದರ್ಶಕವನ್ನು ಮೊದಲ ಬಾರಿ ನೋಡಿದ್ದು ಇಲ್ಲಿಯೇ. ವಿಜ್ಞಾನವನ್ನು ಜನರಿಗೆ ತಲುಪಿಸುವ ಸಾರ್ಥಕ ಪ್ರಯತ್ನವಿದು 
–ಅಂಶು, ಐಐಎಸ್ಸಿಯ ಬಿಎಸ್ಸಿ ವಿದ್ಯಾರ್ಥಿ

**

ನಾನು ಬಾಲ್ಯದಲ್ಲಿ ಕಲಿತಿದ್ದ ಭೌತವಿಜ್ಞಾನದ ಅನೇಕ ವಿಚಾರಗಳು ಮರೆತೇ ಹೋಗಿದ್ದವು. ‘ಮುಕ್ತ ದಿನ’ ನನ್ನನ್ನು ಮತ್ತೆ ವಿಜ್ಞಾನ ಲೋಕಕ್ಕೆ ಕರೆದೊಯ್ಯಿತು
–ತುಷಾರಾ, ವೈದ್ಯ ವಿದ್ಯಾರ್ಥಿನಿ

**

ಇಲ್ಲಿನ ಪ್ರದರ್ಶನಗಳು ಮಾಹಿತಿ ಪೂರ್ಣವಾಗಿವೆ. ದೈನಂದಿನ ಬದುಕಿನಲ್ಲೂ ಇವು ಉಪಯೋಗಕ್ಕೆ ಬರುತ್ತವೆ
- ನೀತು, ಇಎಸ್‌ಐ, ರಾಜಾಜಿನಗರ

**

ಜೀವವಿಜ್ಞಾನಕ್ಕೆ ಸಂಬಂಧಿಸಿ ಅನೇಕ ವಿಚಾರಗಳನ್ನು ತಿಳಿದುಕೊಂಡೆ. ಈ ವಿಷಯದಲ್ಲೇ ಕಲಿಕೆ ಮುಂದುವರಿಸುವ ಆಸಕ್ತಿ ಮೂಡಿದೆ
– ಗಣೇಶ್‌,  ಪೊದ್ದಾರ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನ 4ನೇ ತರಗತಿ ವಿದ್ಯಾರ್ಥಿ

**

ಇಲ್ಲಿ ತಿಳಿಸಿದ ಕೆಲವು ವಿಷಯಗಳು ನನಗೆ ಅರ್ಥವೇ ಆಗಿಲ್ಲ. ಆದರೂ ಮುಂದಿನ ವರ್ಷ ಮತ್ತೆ ಬರುತ್ತೇನೆ
- ಚಿನ್ಮಯ್‌, ಬನ್ನೇರುಘಟ್ಟ ರಸ್ತೆ

**

ಇಲ್ಲಿಗೆ ಬಂದ ಬಳಿಕ ವಿಜ್ಞಾನ ಕ್ಷೇತ್ರದಲ್ಲಿ ತಿಳಿದುಕೊಳ್ಳಲು ಎಷ್ಟೊಂದು ವಿಚಾರಗಳಿವೆಯಲ್ಲಾ ಎಂದು ಭಾಸವಾಯಿತು
– ಅಭಿನವ್‌, ವಿದ್ಯಾರ್ಥಿ, ಲಕ್ಷ್ಮಿಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT