ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗೂರು–ಸುಬ್ರಹ್ಮಣ್ಯಪುರ ಕೆರೆ ಒತ್ತುವರಿ ತೆರವಿಗೆ ಆದೇಶ

Last Updated 2 ಜೂನ್ 2022, 20:23 IST
ಅಕ್ಷರ ಗಾತ್ರ

ಬೆಂಗಳೂರು: ‘ಬೇಗೂರು ಕೆರೆ ಮತ್ತು ಸುಬ್ರಹ್ಮಣ್ಯಪುರ ಕೆರೆಗಳ ಒತ್ತುವರಿಯನ್ನು ಆರು ವಾರಗಳಲ್ಲಿ ತೆರವುಗೊಳಿಸಿ ವರದಿ ಸಲ್ಲಿಸಿ’ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಅರಣ್ಯ ಇಲಾಖೆಯ ನಿಯೋಜಿತ ಅಧಿಕಾರಿಗಳಿಗೆ ಹೈಕೋರ್ಟ್‌ ಆದೇಶಿಸಿದೆ.

ಕೆರೆ ಒತ್ತುವರಿ ತೆರವುಗೊಳಿಸಲು ಕೋರಿ ‘ಸಿಟಿಜನ್ಸ್‌ ಆಕ್ಷನ್‌ ಗ್ರೂಪ್‌’ ಕಾರ್ಯದರ್ಶಿ ನೊಮಿತಾ ಚಾಂಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

’ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಯ್ದೆ-2014ರ ಕಲಂ 22ರ ಅನುಸಾರ ಬೇಗೂರು ಮತ್ತು
ಸುಬ್ರಹ್ಮಣ್ಯಪುರ ಕೆರೆ ಪ್ರದೇಶದಲ್ಲಿನ ಅನಧಿಕೃತ ಒತ್ತುವರಿ ಮತ್ತು
ಒತ್ತುವರಿದಾರರನ್ನು ತೆರವುಗೊಳಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
ಆ ಕುರಿತು ವರದಿಯನ್ನು ಜುಲೈ 14ರೊಳಗೆ ಸಲ್ಲಿಸಬೇಕು’ ಎಂದು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠವು ಆದೇಶಿಸಿದೆ.

‘ಒಂದೊಮ್ಮೆ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಸಹಕಾರ ಕೋರಿದರೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಬೇಕು’ ಎಂದು ನಿರ್ದೇಶಿಸಿರುವ ನ್ಯಾಯಪೀಠ ವಿಚಾರಣೆಯನ್ನು ಜುಲೈ 20ಕ್ಕೆ ಮುಂದೂಡಿದೆ.

ಬೇಗೂರು ಮತ್ತು ಸುಬ್ರಹ್ಮಣ್ಯಪುರ ಕೆರೆ ಪ್ರದೇಶದಲ್ಲಿ ಆಗಿರುವ ಒತ್ತುವರಿಯ ಅಂಕಿ-ಅಂಶಗಳ ಕುರಿತು 2022ರ ಏಪ್ರಿಲ್‌ 11ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಅನುಪಾಲನಾ ವರದಿಯಲ್ಲಿ ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯನ್ನು ವಿಚಾರಣೆ ವೇಳೆ
ಉಲ್ಲೇಖಿಸಲಾಯಿತು.

ವರದಿಯ ಅಂಶಗಳು: ‘ಸುಬ್ರಹ್ಮಣ್ಯಪುರ ಕೆರೆ ಪ್ರದೇಶದಲ್ಲಿ 1 ಎಕರೆ 7 ಗುಂಟೆ ಜಾಗವನ್ನು ಸುಬ್ರಹ್ಮಣ್ಯಪುರ ಮತ್ತು ಉತ್ತರಹಳ್ಳಿ ನಡುವಿನ ಲಿಂಕ್ ರಸ್ತೆಗೆ ಬಳಕೆ ಮಾಡಿಕೊಳ್ಳಲಾಗಿದೆ.
ಈ ರಸ್ತೆಯನ್ನು ಸದ್ಯ
ಸಾರ್ವಜನಿಕರು ಬಳಕೆ ಮಾಡುತ್ತಿದ್ದಾರೆ. 3 ಎಕರೆ 39 ಗುಂಟೆ ಜಾಗವನ್ನು ಉತ್ತರಹಳ್ಳಿಯ ಭುವನೇಶ್ವರಿ ನಗರ ಕೊಳಚೆ ಪ್ರದೇಶದ ನಿವಾಸಿಗಳು ಒತ್ತುವರಿ ಮಾಡಿದ್ದಾರೆ. ಇದು ಘೋಷಿತ ಕೊಳಚೆ ಪ್ರದೇಶವಾಗಿರದ ಹಿನ್ನೆಲೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯು ತೆರವು ಕಾರ್ಯಾಚರಣೆ ಕೈಗೊಳ್ಳಬೇಕಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಬೇಗೂರು ಕೆರೆ ಪ್ರದೇಶದ ಪೈಕಿ 6 ಎಕರೆ 37 ಗುಂಟೆ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿದ್ದಾರೆ. ಅದರಲ್ಲಿ 1 ಎಕರೆ 36 ಗುಂಟೆಯನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ ಐದು ಎಕರೆ ಒಂದು ಗುಂಟೆ ಜಾಗದ ಒತ್ತುವರಿ ತೆರವುಗೊಳಿಸಬೇಕಿದೆ. ನೈಸ್ ರಸ್ತೆ ಮತ್ತು ಸಾರ್ವಜನಿಕ ರಸ್ತೆಗಾಗಿ 3 ಎಕರೆ 26 ಗುಂಟೆ ಜಾಗವನ್ನು ಸರ್ಕಾರವೇ ಒತ್ತುವರಿ ಮಾಡಿದೆ. ಇನ್ನೂ 11 ಗುಂಟೆ ಜಾಗವನ್ನು ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಕೆರೆಯ ನಡುವಿನಲ್ಲಿ ದ್ವೀಪವನ್ನು ಅಭಿವೃದ್ಧಿಪಡಿಸಲು ಬಳಸಿಕೊಳ್ಳಲಾಗಿದೆ’ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT