ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಒಂದೇ ದಿನ 23 ಮಂದಿಗೆ ಸೋಂಕು: ವಾರದಲ್ಲಿ 90 ಪ್ರಕರಣ

ಕೋವಿಡ್–19 ಪೀಡಿತರ ಸಂಖ್ಯೆ 475ಕ್ಕೆ ಏರಿಕೆ l
Last Updated 7 ಜೂನ್ 2020, 20:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ 23 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಭಾನುವಾರ ದೃಢಪಟ್ಟಿದ್ದು, ಕೋವಿಡ್ ಪೀಡಿತರ ಸಂಖ್ಯೆ 475ಕ್ಕೆ ಏರಿಕೆಯಾಗಿದೆ.

ಒಂದು ವಾರದಲ್ಲೇ 90 ಕೋವಿಡ್‌ ಪ್ರಕಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿದೆ. ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿ ಇಬ್ಬರು ವಿದೇಶ ಹಾಗೂ ನಾಲ್ವರು ಅನ್ಯರಾಜ್ಯಗಳಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ. ಬಹುತೇಕರು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್ಐ) ಬಳಲುತ್ತಿದ್ದವರು. ಜೆ.ಪಿ.ನಗರದ66 ವರ್ಷದ ಮಹಿಳೆ ತೀವ್ರ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಜಯನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ವೇಳೆ ಅವರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿತ್ತು. ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ದುಬೈನಿಂದ ವಾಪಸಾಗಿದ್ದ 67 ವರ್ಷದ ಮಹಿಳೆ ಹಾಗೂ 71 ವರ್ಷದ ಪುರುಷ ಕೆ.ಬಿ. ಹಳ್ಳಿಯಲ್ಲಿ ಹೋಟೆಲ್ ಕ್ವಾರಂಟೈನ್‌ಗೆ ಒಳಗಾಗಿದ್ದರು. ಮನೆಗೆ ಕಳುಹಿಸುವ ಮೊದಲು ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಎಚ್.ಬಿ.ಆರ್. ಬಡಾವಣೆಯ 48 ವರ್ಷದ ಮಹಿಳೆ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು. ಅವರಿಗೆ ಕೂಡ ಕೋವಿಡ್‌ ಕಾಯಿಲೆ ಬಂದಿದೆ. ದೆಹಲಿಯಿಂದ ಮರಳಿದ್ದ ಸರ್ಜಾಪುರದ 30 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ.

ದೆಹಲಿಯಿಂದ ವಾಪಸ್ ಆಗಿದ್ದ 20 ವರ್ಷದ ರೋಗಿಯ ಸಂಪರ್ಕದಿಂದ ಹರಳೂರಿನ 27 ವರ್ಷದ ವಕ್ತಿ ಕೋವಿಡ್ ಪೀಡಿತರಾಗಿದ್ದಾರೆ. ಇಬ್ಬರೂ ಒಂದೇ ಕೊಠಡಿಯಲ್ಲಿ ವಾಸವಿದ್ದರು. ಆಂಧ್ರಪ್ರದೇಶದಿಂದ ಬಂದಿದ್ದ 55 ವರ್ಷದ ಪುರುಷ, 42 ವರ್ಷದ ಮಹಿಳೆ ಹಾಗೂ 18 ವರ್ಷದ ವ್ಯಕ್ತಿ ಸೋಂಕಿತರಾಗಿದ್ದಾರೆ. ಅವರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದರು.

22 ಮಂದಿ ಗುಣಮುಖ: ನಗರದಲ್ಲಿ ಹೊಸದಾಗಿ 22 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ 298ಕ್ಕೆ ತಲುಪಿದೆ. 161 ಮಂದಿ ವಿವಿಧ ಆಸ್ಪ‍ತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 15 ಮಂದಿ ಮೃತಪಟ್ಟಿದ್ದಾರೆ.

ಯಲಚೇನಹಳ್ಳಿ, ಬಾಗಲಗುಂಟೆ ಸೇರ್ಪಡೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌–19 ಹಬ್ಬುವಿಕೆ ತಡೆಯಲು ಗುರುತಿಸಿರುವ ನಿಯಂತ್ರಿತ (ಕಂಟೈನ್‌ಮೆಂಟ್‌ ) ಪ್ರದೇಶಗಳ ಸಂಖ್ಯೆ 52ಕ್ಕೆ (47 ವಾರ್ಡ್‌) ಹೆಚ್ಚಳವಾಗಿದೆ. ಶನಿವಾರದವರೆಗೆ ಒಟ್ಟು 45 ವಾರ್ಡ್‌ಗಳಲ್ಲಿ 47 ಪ್ರದೇಶಗಳನ್ನು ಸಕ್ರಿಯ ಕಂಟೈನ್‌ಮೆಂಟ್‌ ಪ್ರದೇಶಗಳು ಎಂದು ಗುರುತಿಸಲಾಗಿತ್ತು.

ಈ ಪಟ್ಟಿಗೆ ಬೊಮ್ಮನಹಳ್ಳಿ ವಲಯದ ಯಲಚೇನಹಳ್ಳಿ ವಾರ್ಡ್‌ ಹಾಗೂ ದಾಸರಹಳ್ಳಿ ವಲಯದ ಬಾಗಲಗುಂಟೆ ವಾರ್ಡ್‌ಗಳು ಸೇರ್ಪಡೆಯಾಗಿವೆ.

ಹೊಯ್ಸಳ ಸಿಬ್ಬಂದಿಗೂ ಸೋಂಕು
ಹೆಸರಘಟ್ಟ: ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಹೊಯ್ಸಳ ಜೀಪ್‌ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

‘ಸೋಂಕಿತ ವ್ಯಕ್ತಿಯು ಅಬ್ಬಿಗೆರೆ ನಿವಾಸಿಯಾಗಿದ್ದು, ಇಲಾಖೆಯ ಪರೀಕ್ಷೆಗೆ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸಲು ತಪಾಸಣೆಗೆ ಒಳಗಾದಾಗ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತ ವ್ಯಕ್ತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವ್ಯಕ್ತಿಯ ಜೊತೆ 15 ಸಿಬ್ಬಂದಿ ಕೆಲಸ ಮಾಡಿದ್ದಾರೆ. ಅವರೆಲ್ಲರನ್ನೂ ಗುರುತಿಸಿ, ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್ ಮಾಡಲಾಗುವುದು’ ಎಂದು ಚಿಕ್ಕಬಾಣಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಜಯರಾಂ ತಿಳಿಸಿದರು.

‘ಸೋಂಕಿತ ವ್ಯಕ್ತಿಯು ಮೇ 23ರಿಂದ 28ರವರೆಗೆ ರಜೆಯಲ್ಲಿದ್ದರು. ಈ ವೇಳೆ ಗ್ರಾಮದಿಂದ ಹೊರಗೆ ಹೋದಾಗ ಸೋಂಕು ತಗುಲಿರುವ ಸಾಧ್ಯತೆ ಇದೆ. ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ’ ಎಂದರು.

ನಿಮ್ಹಾನ್ಸ್ ತುರ್ತು ಚಿಕಿತ್ಸಾ ಘಟಕಸ್ಥಳಾಂತರ
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 34 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದ್ದು, ಸಂಸ್ಥೆಯ ತುರ್ತು ಚಿಕಿತ್ಸಾ ಘಟಕವನ್ನು ಪಕ್ಕದ ಕಟ್ಟಡಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ರೋಗಿಗಳು ಹಾಗೂ ಸೋಂಕಿತ ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಶುಕ್ರವಾರ ದಾಖಲಾಗಿದ್ದ ಮಹಿಳೆಯಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಿರಲಿಲ್ಲ. ಆದರೆ, ಕಂಟೈನ್‌ಮೆಂ‌ಟ್‌ ವಲಯದಿಂದ ಬಂದಿದ್ದರಿಂದ ವೈದ್ಯರು ಕೋವಿಡ್ ಪರೀಕ್ಷೆ ಮಾಡಿದ್ದರು. ಮಹಿಳೆಯ ತಾಯಿಯನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT