ಶನಿವಾರ, ಜುಲೈ 24, 2021
22 °C
ಮನೆ ಆರೈಕೆಗೆ ಒಳಗಾದ ಕೊರೊನಾ ಸೋಂಕಿತರ ಸಮಸ್ಯೆ

ಕೋವಿಡ್–19 | ಕೈಸೇರದ ವಿಟಮಿನ್ ಮಾತ್ರೆ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರೋಗನಿರೋಧಕ ಶಕ್ತಿ ವೃದ್ಧಿಗೆ ಪೂರಕವಾಗಿ ನೀಡಲಾಗುವ ವಿಟಮಿನ್ ಮಾತ್ರೆಗಳು ನಗರದಲ್ಲಿ ಮನೆ ಆರೈಕೆಗೆ ಒಳಗಾದ ಕೊರೊನಾ ಸೋಂಕಿತರ ಕೈಸೇರುತ್ತಿಲ್ಲ.

ಸೋಂಕು ಲಕ್ಷಣಗಳು ಬಹಿರಂಗವಾಗಿ ಗೋಚರಿಸದ ಹಾಗೂ ಪ್ರಾರಂಭಿಕ ಲಕ್ಷಣಗಳಿಂದ ಬಳಲುತ್ತಿರುವ 50 ವರ್ಷದೊಳಗಿನವರಿಗೆ ಮನೆ ಆರೈಕೆಗೆ ಅವಕಾಶ ನೀಡಲಾಗಿದೆ. ಈ ರೀತಿ ಆರೈಕೆಗೆ ಒಳಗಾದವರು ವೈದ್ಯರ ಸಲಹೆ ಸೂಚನೆಗಳನ್ನು ಪಾಲಿಸುವ ಜತೆಗೆ ವಿಟಮಿನ್‌ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ. ಇದೇ ಮಾತ್ರೆಗಳನ್ನು ಆಸ್ಪತ್ರೆಗಳಲ್ಲಿರುವ ಸೋಂಕಿತರಿಗೂ ನೀಡಲಾಗುತ್ತಿದೆ. ಆದರೆ, ಆಶಾ ಕಾರ್ಯಕರ್ತೆಯರು ಸೇವೆಗೆ ಗೈರಾಗಿ, ಮುಷ್ಕರ ನಡೆಸುತ್ತಿರುವ ಪರಿಣಾಮ ವಿಟಮಿನ್ ಮಾತ್ರೆಗಳು ಸರಿಯಾಗಿ ವಿತರಣೆಯಾಗುತ್ತಿಲ್ಲ. 

ಕೋವಿಡ್ ದೃಢಪಡುತ್ತಿದ್ದಂತೆಯೇ ಸ್ಥಳೀಯ ಅಧಿಕಾರಿಗಳು ಸೋಂಕಿತರ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಅಗತ್ಯ ಮಾತ್ರೆಗಳನ್ನು ಪೂರೈಕೆ ಮಾಡಲು ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಸಿಬ್ಬಂದಿಗೆ ಸೂಚಿಸಬೇಕು. ನಗರದಲ್ಲಿ ಸುಮಾರು 2 ಸಾವಿರ ಆಶಾ ಕಾರ್ಯಕರ್ತೆಯರು ಇದ್ದಾರೆ. ಈಗ ಅವರು ಮುಷ್ಕರ ನಡೆಸುತ್ತಿರುವುದರಿಂದ ಮಾತ್ರೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಉಳಿಯುತ್ತಿವೆ. ರೋಗಿಗಳು ಸ್ವಂತ ಖರ್ಚಿನಲ್ಲಿ ಮಾತ್ರೆಗಳನ್ನು ಖರೀದಿಸಬೇಕಿದೆ.

ವಾರ ಕಳೆದರೂ ಮಾತ್ರೆ ಬಂದಿಲ್ಲ: ‘ಮನೆ ಆರೈಕೆಗೆ ಒಳಗಾಗಿ ಒಂದು ವಾರವಾಯಿತು. ಆದರೆ, ಯಾರೂ ಬಂದು ಮಾತ್ರೆಗಳನ್ನು ನೀಡಿಲ್ಲ. ಆಶಾ ಕಾರ್ಯಕರ್ತೆಯರು ಮನೆಗೆ ಬಂದು ಮಾತ್ರೆಗಳನ್ನು ನೀಡುತ್ತಾರೆ ಎಂದು ಅಧಿಕಾರಿಗಳು ಆರಂಭದಲ್ಲಿ ತಿಳಿಸಿದ್ದರು. ನಿಮಗೆ ಮಾತ್ರೆಯ ಅಗತ್ಯ ಇಲ್ಲ ಎಂದು ಅಧಿಕಾರಿಗಳು ಈಗ ಸಬೂಬು ಹೇಳುತ್ತಿದ್ದಾರೆ. ಇದರಿಂದಾಗಿ ಸ್ನೇಹಿತರ ಬಳಿ ಔಷಧಿ ಮಳಿಗೆಯಿಂದ ವಿಟಮಿನ್ ಮಾತ್ರೆಗಳನ್ನು ತರೆಸಿಕೊಂಡೆ’ ಎಂದು ಕೆಂಗೇರಿಯ 38 ವರ್ಷದ ವ್ಯಕ್ತಿಯೊಬ್ಬರು ಬೇಸರ ವ್ಯಕ್ತಪಡಿಸಿದರು. 

‘ಮನೆ ಆರೈಕೆಗೆ ಒಳಗಾದವರು ಖನಿಜಾಂಶಗಳು ಹಾಗೂ ಎಲ್ಲ ರೀತಿಯ ವಿಟಮಿನ್ ಮಾತ್ರೆಗಳನ್ನು ನಿರಂತರವಾಗಿ 10ರಿಂದ 15 ದಿನಗಳು ಸೇವಿಸಬೇಕು. ಒಂದು ತಿಂಗಳವರೆಗೆ ತೆಗೆದುಕೊಂಡರೂ ಒಳ್ಳೆಯದು. ಆಸ್ಪತ್ರೆಗಳಲ್ಲಿ ಲಭ್ಯವಿದ್ದಲ್ಲಿ ನಾವೇ ಒದಗಿಸುತ್ತೇವೆ. ತರಕಾರಿಗಳನ್ನು ಒಳಗೊಂಡ ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅನ್ಸರ್ ಅಹಮದ್ ತಿಳಿಸಿದರು.

ಸಂಪರ್ಕ ಪತ್ತೆಗೂ ಹಿನ್ನಡೆ
ನಗರದಲ್ಲಿ ಕೆಲ ದಿನಗಳಿಂದ ಪ್ರತಿನಿತ್ಯ ಸರಾಸರಿ ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಅದರಲ್ಲಿ ಬಹುತೇಕರಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗುತ್ತಿಲ್ಲ. ಈಗ ಆಶಾ ಕಾರ್ಯಕರ್ತೆಯರು ಸೇವೆಗೆ ಗೈರಾದ ಪರಿಣಾಮ ಸಂಪರ್ಕ ಪತ್ತೆ ಕಾರ್ಯವನ್ನೂ ಬಿಬಿಎಂಪಿ ಸಂಪೂರ್ಣವಾಗಿ ಕೈಚೆಲ್ಲಿದೆ. ಈವರೆಗೆ ಕೇವಲ 3,100 ಮಂದಿಯನ್ನು ಪ್ರಾಥಮಿಕ ಸಂಪರ್ಕಿತರು ಎಂದು ಗುರುತಿಸಲಾಗಿದೆ. ಸೋಂಕಿತರಲ್ಲಿ 8,969 ಮಂದಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ತಿಳಿದಿಲ್ಲ.

‘ಸೋಂಕಿತರ ಸಂಪರ್ಕ ಪತ್ತೆ, ಸೋಂಕು ಶಂಕಿತರನ್ನು ಗುರುತಿಸುವುದು, ಮಾತ್ರೆಗಳ ವಿತರಣೆ ಸೇರಿದಂತೆ ವಿವಿಧ ಕೆಲಸಗಳಿಗೆ ಸರ್ಕಾರ ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿತ್ತು. ಜನರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ನಾವು ಇಷ್ಟು ದಿನಗಳು ಕಾದೆವು. ನಮ್ಮ ಸೇವೆಯನ್ನು ಸರ್ಕಾರ ಗುರುತಿಸದ ಕಾರಣಕ್ಕೆ ಮುಷ್ಕರ ನಡೆಸುತ್ತಿದ್ದೇವೆ’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ತಿಳಿಸಿದರು.

**

ಮನೆ ಆರೈಕೆಗೆ ಒಳಗಾದವರಿಗೆ ಮಾತ್ರೆಗಳನ್ನು ಒದಗಿಸುವ ಸಂಬಂಧ ನಗರದಲ್ಲಿ ಬಿಬಿಎಂಪಿ ಪ್ರತ್ಯೇಕ ತಂಡ ರಚಿಸಿ, ಕ್ರಮ ಕೈಗೊಳ್ಳುತ್ತಿದೆ.
-ಡಾ. ಓಂ ಪ್ರಕಾಶ್ ಪಾಟೀಲ, ಆರೋಗ್ಯ ಇಲಾಖೆ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು