ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿತರ ಸೇವೆಗೆ ಬಿಜೆಪಿ ಕಾರ್ಯಕರ್ತರ ದಂಡು: ಡಿಸಿಎಂ

Last Updated 5 ಜುಲೈ 2020, 13:24 IST
ಅಕ್ಷರ ಗಾತ್ರ

ಬೆಂಗಳೂರು: ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಕೋವಿಡ್ 19 ನಿಯಂತ್ರಣಕ್ಕೆ ಟೊಂಕಕಟ್ಟಿ ನಿಂತಿರುವ ಬಿಜೆಪಿ ಕಾರ್ಯಕರ್ತರು, ಇನ್ನೆರಡು ದಿನಗಳಲ್ಲಿ ಕೊರೊನಾ ವಾರಿಯರ್‌ಗಳಾಗಿ ನಗರದ ಪ್ರತಿ ವಾರ್ಡುಗಳಲ್ಲಿ ಜನ ಸೇವೆಗೆ ಮುಂದಾಗಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ಮಲ್ಲೇಶ್ವರ ಹಾಗೂ ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರ ವರ್ಚುವಲ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿವಾರ್ಡ್‌ನಲ್ಲಿಯೂ ಆರೋಗ್ಯವಂಥ 50 ಕಾರ್ಯಕರ್ತರು ಈ ಸೇವಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅವೆರಲ್ಲರಿಗೂ ಸೂಕ್ತ ತರಬೇತಿ ಹಾಗೂ ಹಾಫ್ ಪಿಪಿಎ ಕಿಟ್ಟುಗಳನ್ನು ನೀಡಿ ನಿಯೋಜಿಸಲಾಗುವುದು ಎಂದು ನುಡಿದರು.

ಈ ಮೊದಲಿನಿಂದಲೂ ಪಕ್ಷದ ಕಾರ್ಯಕರ್ತರು ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುತ್ತಲೇ ಇದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಈ ಪಡೆ ಜೀವದ ಹಂಗು ತೊರೆದು ಕೆಲಸ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಈ ಸೇವೆ ಇನ್ನೂ ಮುಂದುವರೆಯಬೇಕಾಗಿದ್ದು ನಮ್ಮ ಪಕ್ಷದ ಕಾರ್ಯಕರ್ತರು ಕೂಡಲೇ ಸನ್ನದ್ಧರಾಗಿ ಮುಂದೆ ಬರಬೇಕು ಎಂದು ಡಿಸಿಎಂ ಕರೆ ನೀಡಿದರು.

ಇನ್ನೆರಡು ದಿನಗಳಲ್ಲಿ ಬಿಬಿಎಂಪಿ ಕಾರ್ಯಕರ್ತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲಿದೆ. ಕಾರ್ಯಕರ್ತರು ಸ್ವ-ಇಚ್ಚೆಯಿಂದ ಹೆಸರು ನೋಂದಾಯಿಸಿಕೊಳ್ಳಬೇಕು. ಅವರವರ ವಾರ್ಡ್‌ನ ಪ್ರತಿ ಪ್ರದೇಶದ ಮಾಹಿತಿಯ ಜತೆಗೆ ಸೋಂಕಿತರನ್ನು ಗುರುತಿಸುವುದು, ಅವರನ್ನು ಪ್ರಾಥಮಿಕ ಹಂತದ ತಪಾಸಣೆಗೆ ಕಳಿಸುವುದು, ಆಸ್ಪತ್ರೆ ಇಲ್ಲವೇ ಹೋಮ್ ಕೇರ್‌ನಲ್ಲೇ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವುದೂ ಸೇರಿದಂತೆ ಅಗತ್ಯ ಎಲ್ಲ ಸೇವೆಗಳನ್ನು ಮಾಡಬೇಕಾಗುತ್ತದೆ ಎಂದು ಅಶ್ವತ್ಥನಾರಾಯಣ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.

ಎಲ್ಲಿ ಸೋಂಕು ಹೆಚ್ಚು ಹರಡುತ್ತಿದೆ ಎಂಬುದನ್ನು ಗುರುತಿಸಬೇಕು. ಪಾಲಿಕೆಗೆ ತಕ್ಷಣ ಮಾಹಿತಿ ನೀಡುವುದರ ಜತೆ, ಜನರು ಮತ್ತು ಪಾಲಿಕೆಯ ನಡುವೆ ಕೊಂಡಿಯಾಗಿ ಕೆಲಸ ಮಾಡಬೇಕು. ಜನಸಾಂದ್ರತೆ ಇರುವ ಪ್ರದೇಶಗಳಲ್ಲಿ ಸೋಂಕು ಸಹಜವಾಗಿಯೇ ಹೆಚ್ಚಾಗಿರುತ್ತದೆ. ಅದನ್ನು ಕಡಿಮೆ ಮಾಡಲು ನಮ್ಮ ಕಾರ್ಯಕರ್ತರ ಪಡೆ ಬಿಬಿಎಂಪಿಗೆ ಹೆಗಲು ಕೊಟ್ಟು ಕೆಲಸ ಮಾಡಬೇಕು. ಹೋಮ್ ಕೇರ್ ವ್ಯವಸ್ಥೆಯನ್ನು ಯಶಸ್ವಿಗೊಳಿಸಬೇಕು. ಇನ್ನು ಕನಿಷ್ಠ 4 ತಿಂಗಳಾದರೂ ಈ ಸಮಸ್ಯೆ ಇರುತ್ತದೆ. ಅಷ್ಟೂ ದಿನಗಳ ಕಾಲ ನಿಸ್ವಾರ್ಥವಾಗಿ ಜನಸೇವೆ ಮಾಡಬೇಕು ಎಂದು ಡಿಸಿಎಂ ಕಾರ್ಯಕರ್ತರಲ್ಲಿ ಹುರುಪು ತುಂಬಿದರು.

ಕೋವಿಡ್ ಸೋಂಕಿನ ಭೀಕರತೆ ಗೊತ್ತಾದ ಕೂಡಲೇ ಅನ್ಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಓಡಿಹೋಗಿ ಮನೆಗಳಲ್ಲಿ ಬಾಗಿಲು ಹಾಕಿಕೊಂಡರು. ಎಂಥ ಪರಸ್ಥಿತಿಯಲ್ಲೂ ಅವರು ಹೊರಬರಲೇ ಇಲ್ಲ. ಆದರೆ ಬಿಜೆಪಿ ಕಾರ್ಯಕರ್ತರು ಕೊರೋನಾ ವಾರಿಯರುಗಳಾಗಿ ಜೀವದ ಹಂಗು ತೊರೆದು ಕೆಲಸ ಮಾಡಿದರು ಎಂದು ಅವರು ಮಾಹಿತಿ ನೀಡಿದರು.

ಬೆಡ್‌ಗಳಿಗೆ ಕೊರತೆ ಇಲ್ಲ

ನಮ್ಮ ಪಕ್ಷದ ಜತೆಗೆ ನಮ್ಮ ಸರಕಾರವೂ ಸೋಂಕು ತಡೆಗಟ್ಟಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿದೆ. ಚಿಕಿತ್ಸೆ, ಬೆಡ್ಡುಗಳು, ವೈದ್ಯರು, ನರ್ಸ್ ಗಳು ಹಾಗೂ ಪೂರಕ ಸಿಬ್ಬಂದಿ ಕೊರತೆಯಾಗದಂತೆ ಸರಕಾರ ನೋಡಿಕೊಂಡಿದೆ. ಖಾಸಗಿ ಆಸ್ಪತ್ರೆಗಳು ಸರಕಾರದ ಜತೆ ಕೈಜೋಡಿಸಿವೆ. ಈಗಾಗಲೇ ಸರಕಾರದಿಂದ 1500 ಬೆಡ್ ಸಿದ್ಧವಾಗಿವೆ. ಖಾಸಗಿ ಆಸ್ಪತ್ರೆಗಳಿಂದ 7 ಸಾವಿರ ಬೆಡ್ ಸಿಕ್ಕಿವೆ. ಕೋವಿಡ್ ಕೇರಿನಲ್ಲಿ 15000 ಬೆಡ್ ಗಳಿವೆ. ಇನ್ನು ಒಂದೇ ಕಡೆ 10 ಸಾವಿರ ಬೆಡ್ ಗಳನ್ನು ಹಾಕಿ ಅದನ್ನು ಸುಸಜ್ಜಿತ ಚಿಕಿತ್ಸಾ ಕೇಂದ್ರವನ್ನಾಗಿ ಮಾಡುತ್ತಿದ್ದೇವೆ. ಅಗತ್ಯಬಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿನ ಮತ್ತಷ್ಟು ಬೆಡ್‌ಗಳನ್ನು ಸರಕಾರ ವಶಕ್ಕೆ ಪಡೆಯಲಿದೆ. ಈ ನಡುವೆ ಶೇ. 80ರಷ್ಟು ಜನರಿಗೆ ಕೆಲ ಪ್ರಾಥಮಿಕ ಲಕ್ಷಣಗಳಷ್ಠ ಕಾಣಿಸಿಕೊಂಡಿದ್ದು, ಅವರಿಗೆ ಅವರವರ ಮನೆಗಳಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಬಂದಾಗ ಬೆಂಗಳೂರಿನಲ್ಲಿ ಕೇವಲ ಎರಡು ಲ್ಯಾಬುಗಳಷ್ಟೇ ಇದ್ದವು. ಈಗ ನೂರಾರು ಲ್ಯಾಬುಗಳಿವೆ. ಹೀಗಾಗಿ ಯಾರು ಹೆದರಬೇಕಾಗಿಲ್ಲ. ಪ್ರತಿಯೊಬ್ಬರೂ ದೈರ್ಯವಾಗಿ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಡಿಸಿಎಂ ವಿವರ ನೀಡಿದರು.

ಹೆಬ್ಬಾಳದಿಂದ 300 ಕಾರ್ಯಕರ್ತರು

ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಬ್ಬಾಳದ ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ನಾರಾಯಣ ಸ್ವಾಮಿ, ಹೆಬ್ಬಾಳ ಕ್ಷೇತ್ರದಿಂದ ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡಲು 300ಕ್ಕೂ ಹೆಚ್ಚು ಕಾರ್ಯಕರ್ತರು ಸಿದ್ಧವಾಗಿದ್ದಾರೆ. ಅಗತ್ಯಬಿದ್ದರೆ ಮತ್ತಷ್ಟು ಕಾರ್ಯಕರ್ತರು ಈ ಮಹಾ ಕಾರ್ಯಕ್ಕೆ ಕೈಜೋಡಿಸಲಿದ್ದಾರೆ ಎಂದರು. ಇದೇ ವೇಳೆ ಜಿಕೆವಿಕೆಯಲ್ಲಿ ತೆರೆಯಲಾಗಿರುವ 700 ಬೆಡ್‌ಗಳ ಕೋವಿಡ್ ಚಿಕಿತ್ಸಾ ಕೇಂದ್ರದ ಉಸ್ತುವಾರಿಯನ್ನು ಡಿಸಿಎಂ ಅವರು ನಾರಾಯಣ ಸ್ವಾಮಿ ಅವರಿಗೆ ವಹಿಸಿದರು.

ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ಆಧ್ಯಕ್ಷ ನಾರಾಯಣಗೌಡ ಸೇರಿದಂತೆ ಅನೇಕ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT