ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: 7.52 ಲಕ್ಷ ಕುಟುಂಬಗಳಿಗೆ ಅಪಾಯ

ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿದ ಸಾರ್ವತ್ರಿಕ ಆರೋಗ್ಯ ಸಮೀಕ್ಷೆಯಲ್ಲಿ ಉಲ್ಲೇಖ
Last Updated 27 ಜೂನ್ 2020, 19:18 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿದ ಸಾರ್ವತ್ರಿಕ ಆರೋಗ್ಯ ಸಮೀಕ್ಷೆ ಪೂರ್ಣಗೊಂಡಿದೆ. ನಗರದಲ್ಲಿ ಒಟ್ಟು 7.52 ಲಕ್ಷ ಕುಟುಂಬಗಳು ಸೋಂಕು ತಗಲುವ ಅಪಾಯ ಎದುರಿಸುತ್ತಿರುವುದು ಈ ಸಮೀಕ್ಷೆಯಲ್ಲಿ ಕಂಡುಬಂದಿದೆ.

ಮೇ 10ರಿಂದ ನಡೆದ ಸಮೀಕ್ಷೆಯಲ್ಲಿ ಶಿಕ್ಷಕರನ್ನೊಳಗೊಂಡ 7,340 ತಂಡಗಳು ಮನೆ ಮನೆಗೆ ತೆರಳಿ ಕುಟುಂಬದ ಸದಸ್ಯರ ಆರೋಗ್ಯ ಮಾಹಿತಿ ಸಂಗ್ರಹಿಸಿವೆ. ಕೆಮ್ಮು, ಶೀತ ಜ್ವರದ ಲಕ್ಷಣ (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಎಸ್‌ಎಆರ್‌ಐ) ಹೊಂದಿರುವವರು, ಗರ್ಭಿಣಿಯರು, ಇತರ ಕಾಯಿಲೆ ಹೊಂದಿರುವವರು, 65 ವರ್ಷ ಮೇಲ್ಪಟ್ಟವರು ಎಂದು ವರ್ಗೀಕರಿಸಿ ಅವರ ವಿವರವನ್ನು ಹಾಗೂ ಸಂಪರ್ಕ ಸಂಖ್ಯೆಯನ್ನು ಕಲೆ ಹಾಕಿವೆ.

‘ಐಎಲ್‌ಐ, ಎಸ್‌ಎಆರ್‌ಐ ಲಕ್ಷಣ ಇರುವವರು, ಹಿರಿಯ ನಾಗರಿಕರು, ಹೃದ್ರೋಗ, ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಅನ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಸೋಂಕು ತಗಲುವ ಅಪಾಯ ಹೆಚ್ಚು. ಇಂಥವರು ಇರುವ ಕುಟುಂಬಗಳ ಮೇಲೆ ಮುಂದೆಯೂ ಹೆಚ್ಚಿನ ನಿಗಾ ಇಡಲಿದ್ದೇವೆ. ವಯಸ್ಸಾದವರು, ಅನ್ಯರೋಗ ಹೊಂದಿರುವವರ ನಿಯಮಿತ ಆರೋಗ್ಯ ತಪಾಸಣೆಗೂ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ
ಡಾ.ಬಿ.ಕೆ.ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘1,92,077 ಮಂದಿ ಬೇರೆ ಬೇರೆ ರೀತಿಯ ಕಾಯಿಲೆಗಳನ್ನು ಹೊಂದಿರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ. ಇಂಥವರ ಬಗ್ಗೆ ವಿಶೇಷ ಗಮನ ವಹಿಸಲು ಪಾಲಿಕೆ ಕ್ರಮ ಕೈಗೊಂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್–‌ 19 ರೋಗ ನಿಯಂತ್ರಣಕ್ಕೆ ಇನ್ನಷ್ಟು ವ್ಯವಸ್ಥಿತವಾಗಿ ಸಜ್ಜಾಗುವುದಕ್ಕೆ ಆರೋಗ್ಯ ಸಮೀಕ್ಷೆಯಲ್ಲಿ ಕಲೆ ಹಾಕಿರುವ ಅಂಕಿ ಅಂಶಗಳು ನೆರವಾಗಲಿವೆ’ ಎಂದರು.

11,051 ಮಂದಿಗೆ ಸೋಂಕಿನ ಲಕ್ಷಣ

‘ಆರೋಗ್ಯ ಸಮೀಕ್ಷೆ ವೇಳೆ ಒಟ್ಟು 11,051 ಮಂದಿ ಕೆಮ್ಮು, ಶೀತ ಜ್ವರ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಮುಂತಾದ ಕೋವಿಡ್‌ ಲಕ್ಷಣಗಳನ್ನು ಹೊಂದಿರುವುದು ಕಂಡು ಬಂದಿದೆ. ಇಂಥವರನ್ನು ತಕ್ಷಣವೇ ಹೆಚ್ಚಿನ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದು ಡಾ.ಎಸ್‌.ಬಸವರಾಜು ತಿಳಿಸಿದರು.

ಆರೋಗ್ಯ ನೀತಿ ರೂಪಿಸಲು ಪ್ರಯೋಜನಕಾರಿ

‘ಸಾರ್ವತ್ರಿಕ ಆರೋಗ್ಯ ಸಮೀಕ್ಷೆಯಿಂದಾಗಿ ನಗರದ ಜನರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಸ್ಥೂಲ ಚಿತ್ರಣ ಲಭಿಸಿದೆ. ಇದು ಕೇವಲ ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾತ್ರವಲ್ಲ; ಪಾಲಿಕೆ ವ್ಯಾಪ್ತಿಯಲ್ಲಿ ಸಮಗ್ರ ಆರೋಗ್ಯ ನೀತಿ ರೂಪಿಸುವ ನಿಟ್ಟಿನಲ್ಲೂ ಇದು ಪ್ರಯೋಜನಕಾರಿ. ಆರೋಗ್ಯ ಮೂಲಸೌಕರ್ಯವನ್ನು ಒದಗಿಸಲೂ ಈ ದತ್ತಾಂಶವನ್ನು ಬಳಸಿಕೊಳ್ಳಬಹುದು’ ಎಂದು ಪಾಲಿಕೆ ವಿಶೇಷ ಆಯುಕ್ತ ಡಾ.ಎಸ್‌.ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಗ್ಯ ಸಮೀಕ್ಷೆ ವಿವರ

32.13 ಲಕ್ಷ

ಆರೋಗ್ಯ ಮಾಹಿತಿ ಪಡೆಯಲು ಸಮೀಕ್ಷಕರು ಭೇಟಿ ನೀಡಿದ ಮನೆಗಳು

30.18 ಲಕ್ಷ

ಆರೋಗ್ಯ ಮಾಹಿತಿ ನೀಡಿರುವ ಕುಟುಂಬಗಳು

1.99 ಲಕ್ಷ

ಮನೆಗಳಿಗೆ ಬಾಗಿಲು ಹಾಕಲಾಗಿತ್ತು

37,037

ನಗರದಲ್ಲಿರುವ ಗರ್ಭಿಣಿಯರು/ ಮಗುವಿಗೆ ಹಾಲುಣಿಸುವ ತಾಯಂದಿರು

7.44 ಲಕ್ಷ

ನಗರದಲ್ಲಿರುವ ಹಿರಿಯ ನಾಗರಿಕರು

1.92 ಲಕ್ಷ

ಅನ್ಯ ಕಾಯಿಲೆ ಹೊಂದಿರುವವರು

ಸೋಂಕಿನ ಅಪಾಯ ಎದುರಿಸುವ ಕುಟುಂಬಗಳು ಹೆಚ್ಚು ಇರುವ ಕ್ಷೇತ್ರಗಳು

ವಿಧಾನಸಭಾ ಕ್ಷೇತ್ರ; ಅಪಾಯ ಎದುರಿಸುತ್ತಿರುವ ಕುಟುಂಬಗಳು

ಬ್ಯಾಟರಾಯನಪುರ; 48,247

ಆರ್‌.ಆರ್.ನಗರ; 45,589

ಕೆ.ಆರ್‌.ಪುರ; 43,162

ಬೆಂಗಳೂರು ದಕ್ಷಿಣ; 42,597

ಮಹದೇವಪುರ; 41,457

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT