ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜಪೇಟೆ ಆಸ್ಪತ್ರೆಯಲ್ಲಿ ‘ನೆಗಟಿವ್’ ನಕಲಿ ವರದಿ

ಸಂಬಂಧಿಕರ ವೇಷದಲ್ಲಿ ಪೊಲೀಸರ ಕಾರ್ಯಾಚರಣೆ; ವೈದ್ಯರು ಸೇರಿ ನಾಲ್ವರ ಬಂಧನ
Last Updated 20 ಮೇ 2021, 17:31 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್ ಇಲ್ಲವೆಂದು ನಕಲಿ ವರದಿ ನೀಡುತ್ತಿದ್ದ ಹಾಗೂ ರೆಮ್‌ಡಿಸಿವಿರ್ ಚುಚ್ಚುಮದ್ದು ಅಕ್ರಮವಾಗಿ ಮಾರುತ್ತಿದ್ದ ಆರೋಪದಡಿ ವೈದ್ಯರು ಸೇರಿ ನಾಲ್ವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಚಾಮರಾಜಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಪ್ರಜ್ವಲಾ, ಆರೋಗ್ಯ ಅಧಿಕಾರಿ ಡಾ. ಬಿ. ಶೇಖರ್ (25), ಮಂಜುನಾಥ್ ನಗರದ ಕಿಶೋರ್ (22) ಹಾಗೂ ಚಾಮರಾಜಪೇಟೆಯ ವೈ. ಮೋಹನ್ (29) ಬಂಧಿತರು. ಕೊರೊನಾ ಸೋಂಕಿತರ ಸಂಬಂಧಿಕರ ವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಗುತ್ತಿಗೆ ಆಧಾರದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದ ಪ್ರಜ್ವಲಾ ಹಾಗೂ ಶೇಖರ್, ತಮ್ಮದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇತರೆ ಆರೋಪಿಗಳ ಜೊತೆ ಸೇರಿಕೊಂಡು ಕೃತ್ಯ ಎಸಗುತ್ತಿದ್ದರು. ಇವರಿಂದ ರೆಮ್‌ಡಿಸಿವಿರ್ ಚುಚ್ಚುಮದ್ದಿನ 11 ಬಾಟಲಿಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ವ್ಯವಸ್ಥಿತ ಜಾಲ: ‘ಚಾಮರಾಜಪೇಟೆ ಆಸ್ಪತ್ರೆಗೆ ನಿತ್ಯವೂ ನೂರಾರು ಮಂದಿ ಬಂದು ಹೋಗುತ್ತಾರೆ. ಆ ಪೈಕಿ ಕೆಲವರು, ‘ನಮಗೆ ಕೋವಿಡ್ ನೆಗಟಿವ್ ವರದಿ ಬೇಕು’ ಎಂದು ಹೇಳಿ ಆರೋಪಿಗಳಿಂದ ಪಡೆಯುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಸಾರ್ವಜನಿಕರಿಂದ ಆಧಾರ್ ಕಾರ್ಡ್ ಹಾಗೂ ₹ 500 ಪಡೆಯುತ್ತಿದ್ದ ಆರೋಪಿಗಳು, ಅವರಿಗೆ ಕೋವಿಡ್ ನೆಗಟಿವ್ ನಕಲಿ ವರದಿ ನೀಡುತ್ತಿದ್ದರು. ಇದುವರೆಗೂ ಅವರು ಹಲವರಿಗೆ ವರಿದ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ. ಅವರೆಲ್ಲರನ್ನೂ ಪತ್ತೆ ಮಾಡಲಾಗುತ್ತಿದೆ’ ಎಂದೂ ವಿವರಿಸಿದರು.

’ಬಂಧಿತ ವೈದ್ಯರ ಬಗ್ಗೆ ಪುರಾವೆ ಸಮೇತ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT