ಶನಿವಾರ, ಮೇ 15, 2021
22 °C
ಪಿಎಚ್‌ಸಿಗಳ ಮುಂದೆ ‘ನೋ ಸ್ಟಾಕ್‌’ – ಚಿತಾಗಾರಗಳ ಎದುರು ‘ಹೌಸ್‌ ಫುಲ್‌’ ಫಲಕ !

ಇತ್ತ ಲಸಿಕೆಯಿಲ್ಲ–ಅತ್ತ ಸಾವು ನಿಲ್ಲುತ್ತಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ರೋಗಿಗಳ ಸಮಸ್ಯೆಗೆ ಪರಿಹಾರವೇ ಇಲ್ಲದಂತಾಗುತ್ತಿದೆ. ಆರ್‌ಟಿ ಪಿಸಿಆರ್‌ ಪರೀಕ್ಷೆ ಮಾಡಿಸಿಕೊಳ್ಳಲು, ಸಿಟಿ ಸ್ಕ್ಯಾನ್ ಮಾಡಿಸಿಕೊಳ್ಳಲು, ಲಸಿಕೆ ಹಾಕಿಸಿಕೊಳ್ಳಲು ಒಂದೆಡೆ ಜನ ಸರದಿಯಲ್ಲಿ ನಿಲ್ಲುತ್ತಿದ್ದರೆ, ಕೋವಿಡ್‌ನಿಂದ ಮೃತಪಟ್ಟ ಶವಗಳ ಸಂಸ್ಕಾರಕ್ಕೆ ಚಿತಾಗಾರದ ಮುಂದೆಯೂ ಸರದಿಯಲ್ಲಿ ನಿಲ್ಲಬೇಕಾಗಿದೆ.

ಪಿಎಚ್‌ಸಿ ಕೇಂದ್ರಗಳ ಎದುರು ‘ಲಸಿಕೆ ಇಲ್ಲ’ ಎಂಬ ಫಲಕಗಳು ಕಾಣಿಸುತ್ತಿದ್ದರೆ, ಚಿತಾಗಾರದ ಎದುರು ‘ಹೌಸ್‌ಫುಲ್’ ಎಂದು ಹಾಕಲಾಗಿರುವ ಬೋರ್ಡ್‌ಗಳು ಪರಿಸ್ಥಿತಿಯ ಗಂಭೀರತೆಯನ್ನು ಹೇಳುತ್ತಿವೆ.

ಎಲ್ಲರಿಗೂ ಲಸಿಕೆ ನೀಡಿ:

ಲಕ್ಷ್ಮಣನಗರದ ಹೆಗ್ಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಸಾರ್ವಜನಿಕರು ಸೋಮವಾರ ಗಲಾಟೆ ಮಾಡಿದ್ದು, ಎಲ್ಲರಿಗೂ ಲಸಿಕೆ ವಿತರಿಸಬೇಕು ಎಂದು ಒತ್ತಾಯಿಸಿದರು.

‘18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ಹಾಕಲಾಗುತ್ತದೆ ಎಂದು ಸರ್ಕಾರ ಹೇಳಿದೆ. ನಂತರ ಸದ್ಯಕ್ಕಿಲ್ಲ ಎಂದು ಹೇಳಿದ್ದಾರಂತೆ. ಹೀಗೆ ದಿನಕ್ಕೊಂದು ಆದೇಶ ನೀಡುತ್ತಿದ್ದರೆ, ಹೇಗೆ ತಿಳಿಯುತ್ತದೆ. ಲಸಿಕೆಗಾಗಿ ಈ ಕೇಂದ್ರದ ಮುಂದೆ ಎರಡು ತಾಸು ಸರದಿಯಲ್ಲಿ ನಿಂತಿದ್ದೆವು. ಈಗ ಲಸಿಕೆ ಖಾಲಿಯಾಗಿದೆ ಎಂದು ಹೇಳುತ್ತಿದ್ದಾರೆ’ ಎಂದು ಲೋಕೇಶ್ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.

‘45 ವರ್ಷದೊಳಗಿನವರಿಗೆ ಲಸಿಕೆ ಹಾಕಲಾಗುವುದಿಲ್ಲ ಎನ್ನುತ್ತಾರೆ. ಸರದಿಯಲ್ಲಿ ನಿಂತಾಗಲೇ ಈ ರೀತಿ ಹೇಳಬೇಕಿತ್ತು. ಈ ಸಂದರ್ಭದಲ್ಲಿ ಇಷ್ಟು ಹೊತ್ತು ನಿಂತು ಹಾಗೆಯೇ ವಾಪಸ್ ಹೋಗಲು ಆಗುತ್ತದೆಯೇ’ ಎಂದು ಬಸವರಾಜ್‌ ಪ್ರಶ್ನಿಸಿದರು.

‘ಲಸಿಕೆ ಕೊರತೆ ಎಂದೇನೂ ಇಲ್ಲ. ಕೇಂದ್ರ ಕಚೇರಿಯಿಂದ ನಿತ್ಯ ಎಷ್ಟು ಲಸಿಕೆ ಬರುತ್ತವೆಯೋ ಅಷ್ಟನ್ನೂ ನೀಡಲಾಗುತ್ತಿದೆ. ಸೋಮವಾರ ಸರದಿಯಲ್ಲಿ ನಿಂತವರ ಪೈಕಿ ಹಿರಿಯ ನಾಗರಿಕರ ಸಂಖ್ಯೆಯೂ ಹೆಚ್ಚಿತ್ತು. ಹಿರಿಯರಿಗೆ ಮೊದಲ ಆದ್ಯತೆ ನೀಡಲಾಯಿತು’ ಎಂದು ಕೇಂದ್ರದ ವೈದ್ಯಾಧಿಕಾರಿ ಡಾ. ಅಂಬರೀಷ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಎರಡನೇ ಡೋಸ್‌ ಇಲ್ಲ:

ಲಸಿಕೆಯ ಮೊದಲ ಡೋಸ್ ಪಡೆದ ಹಿರಿಯ ನಾಗರಿಕರಿಗೆ ಎರಡನೇ ಡೋಸ್‌ ನೀಡುವಲ್ಲಿಯೂ ಸಮಸ್ಯೆಯಾಗುತ್ತಿದೆ. ಬೆಳ್ಳಂದೂರಿನಲ್ಲಿ ಅನೇಕರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಸರ್ಕಾರ ಸಮರ್ಪಕವಾಗಿ ಲಸಿಕೆ ವಿತರಿಸುತ್ತಿಲ್ಲ. ಆಯಾ ವಾರ್ಡ್‌ನಲ್ಲಿ ವರದಿಯಾಗಿರುವ ಪ್ರಕರಣಗಳ ಸಂಖ್ಯೆ, ಅಲ್ಲಿನ ಜನಸಂಖ್ಯೆ ಆಧಾರದ ಮೇಲೆ ಲಸಿಕೆ ನೀಡಲು ಆದ್ಯತೆ ನೀಡಬೇಕು. ಬೆಳ್ಳಂದೂರು ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಈ ಭಾಗಕ್ಕೆ ಹೆಚ್ಚು ಲಸಿಕೆಗಳನ್ನು ಪೂರೈಸಬೇಕು’ ಎಂದು ವಿಷ್ಣುಪ್ರಸಾದ್ ಒತ್ತಾಯಿಸಿದರು.

ಆಮ್ಲಜನಕಕ್ಕಾಗಿ ಅಲೆದಾಟ:

ಆಮ್ಲಜನಕ ಸಹಿತ ಹಾಸಿಗೆ ಸಿಗದೆ ಹಲವು ರೋಗಿಗಳು ಪರದಾಡಿದರು. ವೆಂಟಿಲೇಟರ್, ಆಮ್ಲಜನಕ ಸಹಿತ ಹಾಸಿಗೆಗಳಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾಯಿತು. ಆಮ್ಲಜನಕ ಸಿಲಿಂಡರ್‌ ಜೊತೆಗೇ ರೋಗಿಗಳು ಹಾಸಿಗೆಗಾಗಿ ಓಡಾಡುತ್ತಿದ್ದ ದೃಶ್ಯ ಕಂಡು ಬಂದಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು