ಗುರುವಾರ , ಆಗಸ್ಟ್ 5, 2021
26 °C
ಕುಟುಂಬದ ನಾಲ್ವರಿಗೆ ಸೋಂಕು

ದಿನಕ್ಕೆ ಹಾಸಿಗೆ ಶುಲ್ಕವೇ ₹20 ಸಾವಿರ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಕುಟುಂಬವೊಂದರ ನಾಲ್ವರಿಗೆ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯ ಚಿಕಿತ್ಸಾ ವೆಚ್ಚ ನೋಡಿ ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ. 

‘ತಂದೆ ಪ್ರಾವಿಜನ್‌ ಸ್ಟೋರ್‌ ಇಟ್ಟುಕೊಂಡಿದ್ದಾರೆ. ತೀವ್ರ ಜ್ವರ ಕಾಣಿಸಿಕೊಂಡಿದ್ದರಿಂದ ಪರೀಕ್ಷೆ ಮಾಡಿಸಿದರು. ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತು. ನಾನು, ಅಮ್ಮ, ಅಕ್ಕ ಎಲ್ಲರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಂಟಲು ದ್ರವ ನೀಡಿದ್ದೆವು. ಎಲ್ಲರಿಗೂ ಕೊರೊನಾ ಪಾಸಿಟಿವ್‌ ಬಂದಿದೆ. ಅತ್ತಿಬೆಲೆಯ ಆಕ್ಸ್‌ಫರ್ಡ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಮ್ಮನ್ನು ಇರಿಸಿದ್ದಾರೆ. ನಾಲ್ಕು ಜನಕ್ಕೆ ದಿನಕ್ಕೆ ಹಾಸಿಗೆ ಶುಲ್ಕವೇ ₹20 ಸಾವಿರ ಕೊಡಬೇಕು ಎಂದು ಹೇಳುತ್ತಿದ್ದಾರೆ. ಇಷ್ಟೊಂದು ಹಣ ಎಲ್ಲಿಂದ ತರುವುದು’ ಎಂದು ಕಾಯಿಲೆಯಿಂದ ಬಳಲುತ್ತಿರುವ ಪುತ್ರಿ ಪ್ರಶ್ನಿಸಿದರು.  

‘ಪಾಸಿಟಿವ್‌ ಬಂದ ಕೂಡಲೇ ವಿಕ್ಟೋರಿಯಾ ಆಸ್ಪತ್ರೆಯವರು ಬಿಬಿಎಂಪಿಗೆ ಮಾಹಿತಿ ನೀಡಿದರು. ಬಿಬಿಎಂಪಿಯಿಂದ ನಮಗೆ ಕರೆ ಬಂದಿತು. ಸರ್ಕಾರಿ ಆಸ್ಪತ್ರೆ ಬೇಕೋ, ಖಾಸಗಿ ಆಸ್ಪತ್ರೆ ಬೇಕೋ ಎಂದು ಕೇಳಿದರು. ನಾವು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಎಂದು ಕೇಳಿಕೊಂಡೆವು. ಆದರೂ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ’ ಎಂದು ಅವರು ಹೇಳಿದರು. 

‘ತಂದೆಗೆ ತೀವ್ರ ಜ್ವರ ಇದೆ. ದಿನಕ್ಕೆ ಒಂದು ಮಾತ್ರೆ ಕೊಡುತ್ತಾರೆ. ವೈದ್ಯರು ದೂರದಿಂದಲೇ ನೋಡಿಕೊಂಡು ಹೋಗುತ್ತಾರೆ. ಆರೋಗ್ಯ ಸ್ಥಿತಿ ಹೇಗಿದೆ ಎಂಬುದರ ಬಗ್ಗೆಯೂ ಸರಿಯಾದ ಮಾಹಿತಿ ಕೊಡುವುದಿಲ್ಲ’ ಎಂದು ಅವರು ಹೇಳಿದರು.

‘ದಪ್ಪ ಚಪಾತಿ ಕೊಡುತ್ತಾರೆ. ಅನ್ನ ರಬ್ಬರ್‌ ಇದ್ದಂತಿದೆ. ತಿನ್ನುವುದಕ್ಕೂ ಕಷ್ಟವಾಗುತ್ತಿದೆ. ಪುರುಷರು ಮತ್ತು ಸ್ತ್ರೀಯರಿಗೆ ಒಂದೇ ಶೌಚಾಲಯವಿದೆ. ಸ್ವಚ್ಛತೆ ಇಲ್ಲ’ ಎಂದು ಮತ್ತೊಬ್ಬ ರೋಗಿ ಅಳಲು ತೋಡಿಕೊಂಡರು. 

‘ಬಿಬಿಎಂಪಿಯಿಂದ ಕಳುಹಿಸಿದ ರೋಗಿಗಳನ್ನು ಮಾತ್ರ ದಾಖಲು ಮಾಡಿಕೊಳ್ಳುತ್ತಿದ್ದೇವೆ. ದಿನಕ್ಕೆ ₹5,000 ಹಾಸಿಗೆ ಶುಲ್ಕವನ್ನು ಸರ್ಕಾರವೇ ನಿಗದಿ ಮಾಡಿದೆ. ರೋಗಿಗಳಿಂದ ಮತ್ತೆ ಯಾವ ಶುಲ್ಕ ಪಡೆಯುತ್ತಿಲ್ಲ‘ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಜಿ. ಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ರೋಗಿಗಳ ಸ್ಥಿತಿ ಗಂಭೀರವಾದರೆ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುವುದು. ಸರ್ಕಾರ ಪಟ್ಟಿ ಮಾಡಿರುವ ಆಹಾರವನ್ನೇ ರೋಗಿಗಳಿಗೆ ನೀಡಲಾಗುತ್ತಿದೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು