ಸೋಮವಾರ, ಸೆಪ್ಟೆಂಬರ್ 16, 2019
27 °C
ಮಾಲಿನ್ಯ ತಡೆಗೆ ತೋಟಗಾರಿಕೆ ಇಲಾಖೆ ಚಿಂತನೆ * ರಜಾ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ

ಕಬ್ಬನ್‌ ಉದ್ಯಾನದಲ್ಲಿ 4ನೇ ಶನಿವಾರವೂ ವಾಹನ ಸಂಚಾರ ನಿಷೇಧ?

Published:
Updated:
Prajavani

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ (ಶ್ರೀ ಚಾಮರಾಜೇಂದ್ರ ಉದ್ಯಾನ) ದಿನೇ ದಿನೇ ವಾಹನ ಸಂಚಾರ ಹೆಚ್ಚಾಗುತ್ತಿರುವುದು ತೋಟಗಾರಿಕೆ ಇಲಾಖೆಯ ಕಳವಳ ಹೆಚ್ಚಿಸಿದೆ. ವಾಹನ ಸಂಚಾರದಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು ತಿಂಗಳ ನಾಲ್ಕನೇ ಶನಿವಾರವೂ ಉದ್ಯಾನದಲ್ಲಿ ವಾಹನ ಸಂಚಾರ ನಿಷೇಧಿಸಲು ಇಲಾಖೆ ಚಿಂತನೆ ನಡೆಸಿದೆ.

ಸದ್ಯಕ್ಕೆ ಉದ್ಯಾನದಲ್ಲಿ ಎಲ್ಲಾ ಭಾನುವಾರ ಹಾಗೂ ತಿಂಗಳ ಎರಡನೇ ಶನಿವಾರ ವಾಹನ ಸಂಚಾರ ಸಂಪೂರ್ಣ ನಿಷೇಧ ಜಾರಿಯಲ್ಲಿದೆ. 

ರಜಾ ದಿನಗಳಂದು ನಗರವಾಸಿಗಳು ಹಾಗೂ ಪ್ರವಾಸಿಗರು ಕಬ್ಬನ್‌ ಉದ್ಯಾನಕ್ಕೆ ಭಾರಿ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಭಾನುವಾರವಂತೂ ಉದ್ಯಾನ ಜನರಿಂದ ತುಂಬಿರುತ್ತದೆ. ಇಲ್ಲಿಗೆ ಬರುವವರು ತಮ್ಮ ವಾಹನಗಳನ್ನು ಉದ್ಯಾನದ ಒಳಗೆ ತಂದು ನಿಲ್ಲಿಸುತ್ತಿದ್ದರು. ಇದರಿಂದ ಒಂದೆಡೆ ವಾಹನ ದಟ್ಟಣೆ ಸಮಸ್ಯೆಯಾದರೆ, ಮತ್ತೊಂದೆಡೆ ಉದ್ಯಾನದ ಹಸಿರು ಸಿರಿಗೂ ಧಕ್ಕೆ ಉಂಟಾಗುತ್ತಿತ್ತು. ಅಲ್ಲದೇ ವಾಯು ಮಾಲಿನ್ಯದ ಭೀತಿಯೂ ಹೆಚ್ಚಾಗಿತ್ತು.

ಈ ಸಮಸ್ಯೆಯ ತೀವ್ರತೆ ಕಡಿಮೆ ಮಾಡುವ ಉದ್ದೇಶದಿಂದ ಇಲಾಖೆಯು ಪ್ರತಿ ಭಾನುವಾರ ಹಾಗೂ ತಿಂಗಳ 2ನೇ ಶನಿವಾರ ಉದ್ಯಾನದ ಪ್ರವೇಶ ದ್ವಾರಗಳನ್ನು ಮುಚ್ಚುವ ಮೂಲಕ ವಾಹನ ಸಂಚಾರಕ್ಕೆ ತಡೆ ನೀಡಲಾಗಿತ್ತು. ನಾಲ್ಕನೇ ಶನಿವಾರವೂ ಸರ್ಕಾರಿ ರಜೆ ಎಂದು ಇತ್ತೀಚೆಗೆ ಅಧಿಕೃತವಾಗಿ ಘೋಷಣೆಯಾದ ಬಳಿಕ, ಆ ದಿನ ರಜೆ ಕಳೆಯಲು ಉದ್ಯಾನಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ ಅಂದೂ ವಾಹನ ಸಂಚಾರ ನಿಷೇಧಿಸಲು ಇಲಾಖೆ ಮುಂದಾಗಿದೆ. 

‘ರಜೆ ದಿನಗಳಲ್ಲಿ ಉದ್ಯಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಸ್ತುತ ಉದ್ಯಾನದಲ್ಲಿ ರಜೆಯೇತರ ದಿನಗಳಲ್ಲಿ ವಾಹನಗಳು ಸಂಚರಿಸಲು ಅನುವು ಮಾಡಿಕೊಡಲಾಗಿದೆ. ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಎರಡನೇ ಶನಿವಾರದಂತೆ ನಾಲ್ಕನೇ ಶನಿವಾರವೂ ವಾಹನ ಸಂಚಾರ ನಿಷೇಧಿಸುವ ಬಗ್ಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಜಿ.ಕುಸುಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಡ್ಸನ್‌ ವೃತ್ತದ ಪ್ರವೇಶ ದ್ವಾರ, ಹೈಕೋರ್ಟ್‌, ವಿಧಾನ ಸೌಧ ಹಾಗೂ ಕಸ್ತೂರಬಾ ರಸ್ತೆಗಳ ಕಡೆಗೆ ತೆರಳಲು ವಾಹನ ಸವಾರರು ಉದ್ಯಾನದ ಮಾರ್ಗವನ್ನೇ ಹೆಚ್ಚಾಗಿ ಬಳಸುತ್ತಾರೆ. ಉದ್ಯಾನದ ಒಳಗೆ ವಾಹನ ಸಂಚಾರ ಸಂಪೂರ್ಣ ನಿಷೇಧ ಮಾಡುವುದು ನಮ್ಮ ಉದ್ದೇಶ. ಆದರೆ, ವಾಹನದಟ್ಟಣೆ ಹೆಚ್ಚಾಗುವ ಕಾರಣ ಉದ್ಯಾನದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲೇಬೇಕಾದ ಅನಿವಾರ್ಯ ಇದೆ’ ಎಂದರು.

‘ಹಡ್ಸನ್‌ ವೃತ್ತ ಬಳಿಯ ಪ್ರವೇಶ ನಿರ್ಬಂಧಿಸಿ’

‘ಬಾಲಭವನದ ಬಳಿ ಇರುವ ಪ್ರವೇಶ ದ್ವಾರ ಮುಚ್ಚಲಾಗಿದೆ. ಅಂತೆಯೇ ಹಡ್ಸನ್ ವೃತ್ತದ ಬಳಿ ಇರುವ ಪ್ರವೇಶ ದ್ವಾರ ಮುಚ್ಚುವ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಪ್ರಸ್ತಾಪ ಸಲ್ಲಿಸಲಾಗಿದೆ. ‌ಹೈಕೋರ್ಟ್‌, ವಿಧಾನಸೌಧಕ್ಕೆ ತೆರಳಲು ಈ ರ್ಗದಲ್ಲೇ ವಾಹನಗಳು ಹೆಚ್ಚಾಗಿ ಸಂಚರಿಸುತ್ತಿದ್ದು, ಪ್ರವೇಶದ್ವಾರ ಮುಚ್ಚಿದರೆ ಉದ್ಯಾನದಲ್ಲಿ ವಾಹನ ಸಂಚಾರ ತನ್ನಿಂದ ತಾನೇ ಕಡಿಮೆಯಾಗಲಿದೆ’ ಎಂದು ಜಿ.ಕುಸುಮಾ ತಿಳಿಸಿದರು.

* ಎಲ್ಲ ರಜಾ ದಿನಗಳಲ್ಲಿ ವಾಹನ ಸಂಚಾರ ನಿಷೇಧಿಸಿದರೆ ಮಾಲಿನ್ಯ ಕಡಿಮೆಯಾಗಲಿದೆ. ಕಿರಿಕಿರಿ ಇಲ್ಲದೇ ಪ್ರವಾಸಿಗರು ಉದ್ಯಾನದಲ್ಲಿ ರಜೆ ಕಳೆಯಲು ಸಹಕಾರಿಯಾಗಲಿದೆ.

- ಜಿ.ಕುಸುಮಾ, ಉಪನಿರ್ದೇಶಕಿ, ತೋಟಗಾರಿಕೆ ಇಲಾಖೆ (ಕಬ್ಬನ್‌ ಉದ್ಯಾನ)

* ವಾಹನ ಸಂಚಾರ ನಿಷೇಧಿಸುವುದು ಮಾಲಿನ್ಯ ತಡೆಗೆ ಉತ್ತಮ ಪರಿಹಾರ. ಉದ್ಯಾನದೊಳಗೆ ವಾಹನ ನಿಲುಗಡೆಗೂ ಕಡಿವಾಣ ಹಾಕುವ ಅಗತ್ಯವಿದೆ.

- ಯೋಗೇಂದ್ರ, ಬೆಂಗಳೂರು ನಿವಾಸಿ

Post Comments (+)