ಸೋಮವಾರ, ಮೇ 25, 2020
27 °C

ಸೈಕಲ್‌ ಅಗರಬತ್ತೀಸ್‌ನಿಂದ ₹1.08 ಕೋಟಿ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಕೋವಿಡ್‌-19 ಪರಿಹಾರ ಕಾರ್ಯಗಳಿಗೆ ಸೈಕಲ್‌ ಪ್ಯೂರ್‌ ಅಗರಬತ್ತೀಸ್‌ ಕಂಪನಿಯು ಪಿಎಂ ಕೇರ್ಸ್‌ ಪರಿಹಾರ ನಿಧಿಗೆ ₹1.08ಕೋಟಿ ದೇಣಿಗೆ ನೀಡಿದೆ.

ಮೈಸೂರಿನಲ್ಲಿ ವಲಸೆ ಕಾರ್ಮಿಕರು, ನಿರ್ಗತಿಕರು ಹಾಗೂ ಪೊಲೀಸ್‌ ಸಿಬ್ಬಂದಿಗೆ ಆಹಾರ ಪೂರೈಕೆ ಮಾಡಲು ₹ 1 ಲಕ್ಷ ಕೊಟ್ಟಿದೆ. ಇದಲ್ಲದೇ, ಸರ್ಕಾರಿ ಆಸ್ಪತ್ರೆಗೆ ಐದು ವೆಂಟಿಲೇಟರ್‌ಗಳನ್ನು ಕೊಡುಗೆಯಾಗಿ ನೀಡಿದೆ.

‘ದೊಡ್ಡ ಸವಾಲು ಎದುರಾಗಿದೆ. ಈ ಸವಾಲು ಎದುರಿಸಲು ನಾವೆಲ್ಲರೂ ಸರ್ಕಾರದೊದಿಗೆ ಕೈ ಜೋಡಿಸಿ ಹೋರಾಡಬೇಕು’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ ರಂಗ ತಿಳಿಸಿದ್ದಾರೆ.

ಬ್ರಿಗೇಡ್: ಕಾರ್ಮಿಕರಿಗೆ ₹2.5 ಕೋಟಿ ನೆರವು
ಬೆಂಗಳೂರು:
ಬ್ರಿಗೇಡ್ ಪ್ರತಿಷ್ಠಾನವು ಹತ್ತು ಸಾವಿರ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ₹2.5 ಕೋಟಿ ನೆರವು ನೀಡಿದೆ. ಲಾಕ್‍ಡೌನ್ ಹಿನ್ನೆಲೆ ಕಾರ್ಮಿಕರಿಗೆ ದಿನಸಿ ಹಾಗೂ ಅಗತ್ಯ ವಸ್ತುಗಳ ನೆರವಿಗೂ ಸಂಸ್ಥೆ ಮುಂದಾಗಿದೆ. 60 ಸಾವಿರ ಕಾರ್ಮಿಕರಿಗೆ ನಿತ್ಯ ಆಹಾರ ವಿತರಣೆಗೆ ಅಕ್ಷಯಪಾತ್ರ ಪ್ರತಿಷ್ಠಾನದ ಜೊತೆಗೆ ಸಂಸ್ಥೆ ಕೈಜೋಡಿಸಿದೆ.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹10 ಲಕ್ಷ ದೇಣಿಗೆ ನೀಡಿದೆ.

ನೈರುತ್ಯ ರೈಲ್ವೆ ವರ್ಕ್‌ಶಾಪ್‌ಗಳಲ್ಲಿ ಮುಖಗವಸು ತಯಾರಿ
ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ರೈಲ್ವೆ ವರ್ಕ್‌ಶಾಪ್‌ಗಳಲ್ಲಿಯೇ ಸ್ಯಾನಿಟೈಸರ್ ಮತ್ತು ಮುಖಗವಸುಗಳನ್ನು ತಯಾರಿಸಲು ನೈರುತ್ಯ ರೈಲ್ವೆ ಮುಂದಾಗಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿರುವುದರಿಂದ, ರೈಲ್ವೆ ವರ್ಕ್‌ಶಾಪ್‌ಗಳಲ್ಲಿನ ಪ್ರಯೋಗಾಲಯಗಳಲ್ಲಿಯೇ ಸ್ಯಾನಿಟೈಸರ್‌ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಸರ್ಜಿಕಲ್‌ ಸ್ಪಿರಿಟ್‌, ಲೋಳೆಸರ (ಅಲೊವೆರಾ), ಗ್ಲಿಸರಾಲ್‌ ಹಾಗೂ ಸುಗಂಧ ದ್ರವ್ಯ ಬಳಸಿ ಸ್ಯಾನಿಟೈಸರ್‌ಗಳನ್ನು ಉತ್ಪಾದಿಸಲಾಗುತ್ತಿದೆ.

ಹತ್ತಿ ಬಟ್ಟೆಯಿಂದ ಮುಖಗವಸು ತಯಾರಿಸುವ ಕಾರ್ಯವೂ ನಡೆಯುತ್ತಿದೆ. ಈವರೆಗೆ ಒಟ್ಟು 7,295 ಮುಖಗವಸುಗಳನ್ನು ಹಾಗೂ 1,200 ಲೀಟರ್‌ನಷ್ಟು ಸ್ಯಾನಿಟೈಸರ್‌ ಅನ್ನು ತಯಾರಿಸಲಾಗಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ
ಬೆಂಗಳೂರು: ಇಡೀ ರಾಜ್ಯವೇ ಲಾಕ್‌ಡೌನ್‌ ಆಗಿದ್ದರೂ, ಸರ್ಕಾರದ ಆದೇಶ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿ 100 ಮದ್ಯದ ಬಾಟಲಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರಾದ ವಿಜಯನಗರದ ಧನಂಜಯ (29) ಮತ್ತು ಆರ್‌.ಟಿ. ನಗರದ ಸಂಜಯ್‌ (29) ಅವರು ಮದ್ಯದ ಬಾಟಲಿಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟುಕೊಂಡು ದುಬಾರಿ ಬೆಲೆಗೆ ಮಾರುತ್ತಿದ್ದರು. ಆರ್‌.ಟಿ. ನಗರದ ಅಪಾರ್ಟ್‌ಮೆಂಟಿನ ಮನೆಯೊಂದರಲ್ಲಿ ಮದ್ಯದ ಬಾಟಲಿಗಳನ್ನು ಆರೋಪಿಗಳು ಇಟ್ಟಿದ್ದರು. ಸಿಸಿಬಿ ಪೊಲೀಸರು ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು