ಗುರುವಾರ , ಸೆಪ್ಟೆಂಬರ್ 29, 2022
26 °C

ಅರೆನಗ್ನ ನೃತ್ಯ: ಹೆದರದ ಮಾಲೀಕರು, ಪಬ್‌ಗಳಿಗೆ ಗ್ರಾಹಕರ ಸೆಳೆಯಲು ‘ವಾಮ ಮಾರ್ಗ’

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿಯಲ್ಲಿ ಪಬ್‌ ಹಾಗೂ ಬಾರ್‌ಗಳ ಸಮಯ ವಿಸ್ತರಣೆ ಬಳಿಕ ಗ್ರಾಹಕರ ಸೆಳೆಯಲು ರಾತ್ರಿಯಿಡೀ ಅರೆನಗ್ನ ನೃತ್ಯ ಆಯೋಜಿಸಲಾಗುತ್ತಿದೆ.

ಕೋವಿಡ್‌ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಹೇರಿದ್ದ ಲಾಕ್‌ಡೌನ್‌ನಿಂದ ಬೆಂಗಳೂರಿನ ನೂರಾರು ಪಬ್‌ಗಳು ನಷ್ಟಕ್ಕೆ ತುತ್ತಾಗಿದ್ದವು. ಈಗ ಆ ನಷ್ಟ ತುಂಬಿಕೊಳ್ಳಲು ಪಬ್‌ಗಳು ‘ವಾಮ ಮಾರ್ಗ’ ಅನುಸರಿಸುತ್ತಿದ್ದು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿವೆ.

ಹೊರರಾಜ್ಯದ ಮಹಿಳೆಯರು, ಯುವತಿಯರನ್ನು ಕೆಲಸಕ್ಕೆ ನೇಮಿಸಿಕೊಂಡು ಅವರಿಂದ ಅರೆನಗ್ನ ನೃತ್ಯ ಮಾಡಿಸಿ, ಗ್ರಾಹಕರ ಸೆಳೆದು ಹಣ ಗಳಿಸುತ್ತಿದ್ದ ಪಬ್‌ಗಳ ವಿರುದ್ಧ ದೂರು ದಾಖಲಾಗಿದೆ. ‌

ಅಕ್ಕಪಕ್ಕದ ನಿವಾಸಿಗಳ ಒತ್ತಡ, ಆಗ್ರಹದ ಬಳಿಕ ನಗರ ಪೊಲೀಸರು ತಡರಾತ್ರಿ ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೇ ಇಂತಹ ಪ್ರಕರಣಗಳು ಹೆಚ್ಚು ಕಂಡುಬಂದಿವೆ.

‘ಆರ್‌ಎಚ್‌ಪಿ ರಸ್ತೆಯ ಡುಯೆಟ್‌ ಪಬ್‌, ಬ್ರಿಗೇಡ್‌ ರಸ್ತೆಯ ರೆಸ್ಟ್‌ ಹೌಸ್‌ ರಸ್ತೆಯ ನಂ.:27ರ ಮ್ಯಾಗೀ ಟ್ರೀ ಲಾಡ್ಜ್‌ನ 4ನೇ ಮಹಡಿಯಲ್ಲಿರುವ ‘ಎಕ್ಸ್‌ಕ್ಯೂಸ್‌ ಬಾರ್‌’ ಸೇರಿದಂತೆ 10 ಡಾನ್ಸ್‌ ಬಾರ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ’ ಎಂದು ಮೂಲಗಳು ಹೇಳಿವೆ.

ಬಾರ್‌ ವ್ಯವಸ್ಥಾಪಕ ನವೀನ್‌ಗೌಡ, ಕ್ಯಾಶಿಯರ್‌ ಕೆ.ಎಲ್‌.ಸೂರಿ, ಮದ್ಯ ಸರಬರಾಜು ಮಾಡುವ ಲೋಹಿತ್‌ಕುಮಾರ್, ಭರತ್‌, ಭಾಸ್ಕರ್‌, ಆಕಾಶ್‌, ‘ಡಿಜೆ’ ರವಿ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಎಕ್ಸ್‌ಕ್ಯೂಸ್‌ ಬಾರ್‌ನ ಮಾಲೀಕರ ಸತ್ಯನಾರಾಯಣ ತಲೆಮರೆಸಿಕೊಂಡಿದ್ದಾರೆ.

‘ಪಬ್‌ಗಳಿಗೆ ಹೊರರಾಜ್ಯದ ಯುವತಿಯರನ್ನೇ ಹೆಚ್ಚಾಗಿ ನೇಮಿಸಿಕೊಳ್ಳಲಾಗುತ್ತಿದೆ. ಗ್ರಾಹಕರಿಗೆ ಲೈಂಗಿಕ ಪ್ರಚೋದನೆ ನೀಡುವಂತಹ ಅಸಭ್ಯ ಉಡುಪನ್ನು ಮಹಿಳೆಯರಿಗೆ ತೊಡಿಸಿ ಅವರಿಂದ ಅಶ್ಲೀಲ ನೃತ್ಯ ಮಾಡಿಸಲಾಗುತ್ತಿದೆ. ಪ್ರತಿ ಗ್ರಾಹಕರಿಗೆ ಒಬ್ಬ ಯುವತಿ ನೇಮಿಸಿ, ಟೇಬಲ್‌ಗಳ ಮೂಲೆಯಲ್ಲಿ ಕೂರಿಸಲಾಗುತ್ತಿದೆ. ಲೈಟ್‌ ಆಫ್‌ ಮಾಡಿ ಚುಂಬಿಸುವುದಕ್ಕೆ ಮಾಲೀಕರು, ಪಬ್‌ ಸಿಬ್ಬಂದಿ ಅವಕಾಶ ಕಲ್ಪಿಸುತ್ತಿರುವುದು ದಾಳಿ ವೇಳೆ ಪತ್ತೆಯಾಗಿದ್ದು, ಈ ವಿಷಯವನ್ನು ಎಫ್‌ಐಆರ್‌ನಲ್ಲೂ ಉಲ್ಲೇಖಿಸಲಾಗಿದೆ‘ ಎಂದು ಮೂಲಗಳು ತಿಳಿಸಿವೆ.

‘ವಾರಾಂತ್ಯದಲ್ಲಿ ಬಹುತೇಕ ಪಬ್‌ಗಳಲ್ಲಿ ಅನೈತಿಕ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಅನಧಿಕೃತ ಬಾರ್‌ಗಳ ಹಾವಳಿ ಮಿತಿಮೀರಿದೆ. ಜತೆಗೆ ಗಾಂಜಾ ವ್ಯಸನಿಗಳ ತಾಣವಾಗಿ ಬದಲಾಗಿವೆ. ‘ಮಾಮೂಲಿ’ ನೀಡದ ಪಬ್‌ಗಳ ಮೇಲೆ ಮಾತ್ರ ದಾಳಿ ನಡೆಯುತ್ತಿದೆ. ಸರ್ಕಾರಕ್ಕೆ ಆದಾಯ ಬರುತ್ತಿದೆ ಎಂಬ ದೃಷ್ಟಿಕೋನದಿಂದಲೇ ಎಲ್ಲವನ್ನೂ ನೋಡುವುದನ್ನು ಬಿಡಬೇಕು. ಪಬ್‌ಗಳ ಮೇಲೆ ನಿರಂತರ ನಿಗಾ ವಹಿಸಬೇಕು’ ಎಂದು ಇಂದಿರಾನಗರದ ನಿವಾಸಿ ಲೋಕೇಶ್‌ ಆಗ್ರಹಿಸಿದರು. 

‘ಡಾನ್ಸ್‌ ಪ್ಲೀಸ್‌...’
ಶನಿವಾರ, ಭಾನುವಾರ ನಗರದ ಬ್ರಿಗೇಡ್‌ ರಸ್ತೆ, ಚರ್ಚ್‌ ಸ್ಟ್ರೀಟ್‌, ಕೋರಮಂಗಲದ ಕೆಲವು ರಸ್ತೆಗಳಲ್ಲಿ ಪಬ್‌ಗಳ ಸಿಬ್ಬಂದಿ ರಸ್ತೆಯ ಬದಿಯಲ್ಲಿ ನಿಂತು ‘ಡಾನ್ಸ್‌ ಪ್ಲೀಸ್‌... ಬನ್ನಿ ಸಾರ್‌’ ಎನ್ನುತ್ತಿದ್ದಾರೆ. ಇದು ಪಾದಚಾರಿಗಳು ಹಾಗೂ ಹಿರಿಯರಿಗೆ ಮುಜುಗರ ತರುತ್ತಿದೆ ಎಂದು ಎಂಜಿನಿಯರ್ ಲೋಕೇಶ್‌ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು