ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ:10 ಆರೋಪಿಗಳ ಬೆರಳಚ್ಚು ಹೊಂದಾಣಿಕೆ?

ರೇಣುಕಸ್ವಾಮಿ ಕೊಲೆ ಪ್ರಕರಣ: ಪೊಲೀಸ್‌ ತನಿಖೆ ಚುರುಕು
Published 7 ಜುಲೈ 2024, 20:35 IST
Last Updated 7 ಜುಲೈ 2024, 20:35 IST
ಅಕ್ಷರ ಗಾತ್ರ

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಂಗ್ರಹಿಸಿದ್ದ ಬೆರಳಚ್ಚು ಮಾದರಿ, ಬಂಧಿತ ಆರೋಪಿಗಳ ಪೈಕಿ ಕೆಲವರಿಗೆ ಹೊಂದಾಣಿಕೆ ಆಗಿರುವುದು ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.

‘ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಅವರ ಆಪ್ತೆ ಪವಿತ್ರಾಗೌಡ, ಪವನ್‌, ಪ್ರದೋಷ್ ಸೇರಿದಂತೆ 17 ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 14 ಮಂದಿ ಹಾಗೂ ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. 17 ಮಂದಿಯ ಪೈಕಿ 10 ಮಂದಿಯ ಬೆರಳಚ್ಚು ಹೊಂದಾಣಿಕೆ ಆಗಿದೆ’ ಎಂದು ಮೂಲಗಳು ಹೇಳಿವೆ.

ಜೂನ್‌ 9ರಂದು ಪಟ್ಟಣಗೆರೆಯ ಶೆಡ್‌ನಲ್ಲಿ ಕೊಲೆ ನಡೆದಿತ್ತು. ಕೃತ್ಯ ನಡೆದ ಮರುದಿನ ನಾಲ್ವರು ಪೊಲೀಸ್‌ ಠಾಣೆಗೆ  ಬಂದು ಶರಣಾಗಿದ್ದರು. ಜೂನ್‌ 11ರಂದು ದರ್ಶನ್‌ ಸೇರಿ 13 ಆರೋಪಿಗಳನ್ನು ವಿವಿಧೆಡೆ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದರು.

‘ಕೊಲೆ ನಡೆದ ಪಟ್ಟಣಗೆರೆ ಶೆಡ್‌, ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್‌ ಕೊಠಡಿ, ಮೃತದೇಹ ಸಾಗಿಸಲು ಬಳಸಿದ್ದ ವಾಹನ, ಶವ ಎಸೆದಿದ್ದ ಸ್ಥಳ, ಮೃತನ ಬಟ್ಟೆಗಳು, ಹಲ್ಲೆ ಮಾಡಲು ಬಳಸಿದ್ದ ವಸ್ತುಗಳು, ವಿದ್ಯುತ್‌ ಶಾಕ್‌ ನೀಡಲು ಬಳಸಿದ್ದ ಉಪಕರಣ, ಆರೋಪಿಗಳ ಬಟ್ಟೆಗಳ ಮೇಲಿದ್ದ ಬೆರಳಚ್ಚನ್ನು ಮಹಜರು ವೇಳೆ ತಜ್ಞರು ಸಂಗ್ರಹಿಸಿದ್ದರು. ಜತೆಗೆ, ಬಂಧಿತರ ಬೆರಳಚ್ಚು ಮಾದರಿ ಸಹ ಸಂಗ್ರಹಿಸಿ ಬೆಂಗಳೂರು ಹಾಗೂ ಹೈದರಾಬಾದ್‌ನ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ (ಎಫ್‌ಎಸ್‌ಎಲ್‌) ರವಾನೆ ಮಾಡಲಾಗಿತ್ತು. ಪರೀಕ್ಷೆಯ ಪ್ರಾಥಮಿಕ ಮಾಹಿತಿಗಳು ಹೊರಬಿದ್ದಿದ್ದು, ಕೆಲವು ಆರೋಪಿಗಳ ಬೆರಳಚ್ಚು ಹೊಂದಾಣಿಕೆ ಆಗುತ್ತಿದೆ. ಕೆಲವೇ ದಿನಗಳಲ್ಲಿ ಪೂರ್ಣ ವರದಿ ತನಿಖಾಧಿಕಾರಿಗಳ ಕೈಸೇರುವ ಸಾಧ್ಯತೆಯಿದೆ’ ಎಂದು ಮೂಲಗಳು ಹೇಳಿವೆ.

‘ಡಿಎನ್‌ಎ ಪರೀಕ್ಷೆಗಾಗಿ 10 ಮಂದಿಯ ರಕ್ತ ಹಾಗೂ ಕೂದಲು ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಅದರ ವರದಿಯೂ ಬರಬೇಕಿದೆ’ ಎಂದು ಪೊಲೀಸರು ಹೇಳಿದರು.

ಮತ್ತೆ ಕಾರ್ತಿಕ್‌ ವಿಚಾರಣೆ:
ಬಂಧಿತ ಆರೋಪಿ ಪ್ರದೋಷ್‌ ಸ್ನೇಹಿತ ಕಾರ್ತಿಕ್‌ ಪುರೋಹಿತ್‌ ಅವರಿಗೆ ಸೋಮವಾರ ಮತ್ತೆ ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ‌. ಶನಿವಾರವೂ ಕಾರ್ತಿಕ್‌ ವಿಚಾರಣೆ ನಡೆಸಲಾಗಿತ್ತು.

‘ಕೃತ್ಯ ನಡೆದ ದಿನ ಪಟ್ಟಣಗೆರೆಯ ಶೆಡ್‌ಗೆ ಪ್ರದೋಷ್‌ ಜತೆಗೆ ಕಾರ್ತಿಕ್‌ ಪುರೋಹಿತ್‌ ಬಂದಿದ್ದರು. ಇತರ ಆರೋಪಿಗಳ ಜತೆಗೂ ಕಾರ್ತಿಕ್‌ಗೆ ಒಡನಾಟವಿದ್ದ ಮಾಹಿತಿಯಿದೆ. ಈಗಾಗಲೇ ಕೆಲವು ಮಾಹಿತಿ ಪಡೆದುಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿ ಪಡೆದು ಹೇಳಿಕೆ ದಾಖಲು ಮಾಡಿಕೊಳ್ಳಲು ಮತ್ತೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಆರೋಪಿಗೆ ಹಣ ನೀಡಿದ್ದ ಪವಿತ್ರಾ ಸ್ನೇಹಿತೆ:
ಪ್ರಕರಣದ ಮೊದಲನೇ ಆರೋಪಿ ಪವಿತ್ರಾಗೌಡ ಅವರ ಸ್ನೇಹಿತೆ ಸಮತಾ ಅವರಿಗೂ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ. ಅವರೂ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. 

‘ಕೃತ್ಯ ನಡೆದ ಮರುದಿನ ಸಮತಾ ಅವರು ಪವಿತ್ರಾಗೌಡ ಅವರ ಮನೆಗೆ ಭೇಟಿ ನೀಡಿದ್ದರು. ಅಲ್ಲದೇ ಆರೋಪಿ ಧನರಾಜ್‌ಗೆ ಫೋನ್‌ ಪೇ ಮೂಲಕ ₹3 ಸಾವಿರದಷ್ಟು ಹಣ ಹಾಕಿದ್ದರು ಎನ್ನಲಾಗಿದೆ. ರೇಣುಕಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದ ಬಗ್ಗೆ ಪವಿತ್ರಾ ಅವರು ಸಮತಾ ಜತೆಗೆ ಹೇಳಿಕೊಂಡಿರುವ ಸಾಧ್ಯತೆಯಿದ್ದು ಅವರಿಗೂ ನೋಟಿಸ್‌ ನೀಡಲಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT