ದತ್ತಪೀಠ ವಿವಾದ: ನ್ಯಾ.ನಾಗಮೋಹನದಾಸ್ ಸಮಿತಿ ವರದಿಗೆ ಆಕ್ಷೇಪ

7

ದತ್ತಪೀಠ ವಿವಾದ: ನ್ಯಾ.ನಾಗಮೋಹನದಾಸ್ ಸಮಿತಿ ವರದಿಗೆ ಆಕ್ಷೇಪ

Published:
Updated:

ಬೆಂಗಳೂರು: ‘ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‌ಗಿರಿ ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗ
ಮೋಹನ ದಾಸ್ ನೇತೃತ್ವದ ಸಮಿತಿ ನೀಡಿರುವ ವರದಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಿದೆ’ ಎಂದು ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.

ನಾಗಮೋಹನ ದಾಸ್‌ ಸಮಿತಿ ವರದಿ ಅಂಗೀಕರಿಸಿ ರಾಜ್ಯ ಸರ್ಕಾರ 2018ರ ಮಾರ್ಚ್ 19ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ಸಂವರ್ಧನಾ ಸಮಿತಿಯ ಧರ್ಮಶ್ರೀ, ಕರ್ತಿಕೆರೆ ನಿವಾಸಿ ಯೋಗೀಶ್‌ ರಾಜ್‌ ಅರಸ್‌ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿವೇಕ್‌ ರೆಡ್ಡಿ ಅವರು, ‘ಹಿಂದೂಗಳ ಪೂಜಾ ಸ್ಥಳದ ಧಾರ್ಮಿಕ ಆಚರಣೆಗಳನ್ನು ಮುಜಾವರ್‌ಗಳು ನಡೆಸಿಕೊಡಬೇಕು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.‘ಈ ಹಿಂದಿನ ರಾಜ್ಯ ಸರ್ಕಾರವು ನಾಗಮೋಹನ ದಾಸ್ ಸಮಿತಿ ರಚನೆ ಮಾಡುವ ಮೂಲಕ ಸುಪ್ರೀಂ ಕೋರ್ಟ್‌ಗೆ ನೀಡಿದ ವಾಗ್ದಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದೆ. ಅಂತೆಯೇ ಸಮಿತಿಯು, ವ್ಯಾಜ್ಯದಲ್ಲಿ ಹಿತಾಸಕ್ತಿ ಹೊಂದಿರುವವರ ವಾದ, ಆಕ್ಷೇಪಣೆ ಅಭಿಪ್ರಾಯಗಳನ್ನು ಆಲಿಸದೆ ತೀರ್ಮಾನ ಕೈಗೊಂಡು ವ್ಯತಿರಿಕ್ತ ವರದಿ ಸಲ್ಲಿಸಿದೆ’ ಎಂದು ರೆಡ್ಡಿ ಆಕ್ಷೇಪಿಸಿದರು.

ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಲಾಗಿದ್ದು, ನಾಗಮೋಹನ ದಾಸ್ ಸಮಿತಿ ವರದಿ ಅನುಷ್ಠಾನಕ್ಕೆ ಈ ಹಿಂದೆ ನೀಡಲಾಗಿರುವ ಮಧ್ಯಂತರ ಆದೇಶವನ್ನು ಮುಂದುವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !