ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳ: ಒಂದೇ ಸೂರಿನಡಿ ಸಮಗ್ರ ಶೈಕ್ಷಣಿಕ ಮಾಹಿತಿ

Published 23 ಏಪ್ರಿಲ್ 2023, 4:29 IST
Last Updated 23 ಏಪ್ರಿಲ್ 2023, 4:29 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್, ವೈದ್ಯಕೀಯ, ವಾಸ್ತುಶಿಲ್ಪ, ರೋಬೋಟಿಕ್ಸ್, ಪ್ರವಾಸೋದ್ಯಮ, ಎಂಬಿಎ, ಎಂಸಿಎ, ಫ್ಯಾಷನ್ ಡಿಸೈನ್, ಕಾನೂನು... ಹೀಗೆ ವಿವಿಧ ಕೋರ್ಸ್‌ಗಳ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ‘ಎಡ್ಯುವರ್ಸ್‌’ ಶೈಕ್ಷಣಿಕ ಮೇಳವು ಮಾಹಿತಿ ಒದಗಿಸಿತು. 

ಇಲ್ಲಿನ ತ್ರಿಪುರವಾಸಿನಿ, ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ 13ನೇ ಆವೃತ್ತಿಯ ಮೇಳಕ್ಕೆ ಶನಿವಾರ ಚಾಲನೆ ದೊರೆಯಿತು. ಮೇಳದಲ್ಲಿ 50ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ ಮಳಿಗೆಗಳಿವೆ. 16 ವಿಶ್ವವಿದ್ಯಾ
ಲಯಗಳು ಹಾಗೂ 34 ಕಾಲೇಜುಗಳು ಪಾಲ್ಗೊಂಡಿವೆ. ಕಾಲೇಜುಗಳಲ್ಲಿನ ಸೌಲಭ್ಯ, ನೂತನ ಕೋರ್ಸ್‌ಗಳು, ಪ್ರವೇಶ ಶುಲ್ಕ, ಉದ್ಯೋಗಾವಕಾಶ ಸೇರಿ ಹಲವು ಮಾಹಿತಿ ಗಳನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳಿಂದ ಪಡೆದುಕೊಂಡರು.    

‌ಬೆಳಿಗ್ಗೆ ನೋಂದಣಿ ಪ್ರಕ್ರಿಯೆಯೊಂದಿಗೆ ಮೇಳ ಆರಂಭವಾಯಿತು. ಉದ್ಘಾಟನೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರು ಎಂ.ಎಸ್. ರಾಮಯ್ಯ, ಪಿಇಎಸ್, ಆರ್‌.ವಿ ಸೇರಿ ವಿವಿಧ ಶಿಕ್ಷಣ ಸಂಸ್ಥೆಗಳು ತೆರೆದಿದ್ದ ಮಳಿಗೆಗಳತ್ತ ಹೆಜ್ಜೆ ಹಾಕಿದರು. ಅವರ ನಿರೀಕ್ಷೆಗಳನ್ನು ತಣಿಸಲೆಂದೇ ಕಾಯ್ದಿದ್ದ ಮಳಿಗೆಯ ಪ್ರತಿನಿಧಿಗಳು, ತಮ್ಮ ಕಾಲೇಜುಗಳಲ್ಲಿ ನೀಡುವ ಸೌಲಭ್ಯಗಳು, ಶೈಕ್ಷಣಿಕ ಗುಣಮಟ್ಟ, ಬೋಧಕರ ಬದ್ಧತೆ, ಕ್ಯಾಂಪಸ್‌ನ ವೈಶಿಷ್ಟ್ಯ, ಕ್ಯಾಂಪಸ್ ಸಂದರ್ಶನ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಿಳಿಸಿದರು. 

ಕುತೂಹಲ ತಣಿಸಿದ ಮೇಳ: ಮೇಳದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾಲೇಜುಗಳ ಬಗ್ಗೆ ವಿಚಾರಿಸಿ, ಶುಲ್ಕ ವಿವರ ತಿಳಿದುಕೊಳ್ಳುವ ಕುತೂಹಲವನ್ನು ತೋರಿದರು. ಕೋರ್ಸ್ ಮುಗಿದ ನಂತರ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ದೊರೆತರೆ ವೇತನ ಎಷ್ಟು ಸಿಗಬಹುದೆಂಬ ಲೆಕ್ಕಾಚಾರವೂ ಅವರ ಮಾತುಗಳಲ್ಲಿತ್ತು.

ಮೇಳದಲ್ಲಿ ಭಾಗವಹಿಸಿದ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನವು ಎಂಜಿನಿಯರಿಂಗ್ ಕಾಲೇಜುಗಳೇ ಆಗಿದ್ದವು. ಕಡಿಮೆ ಬಡ್ಡಿದರದಲ್ಲಿ ಸಿಗುವ ಸಾಲ ಸೌಲಭ್ಯಗಳ ಬಗ್ಗೆ ಬ್ಯಾಂಕ್‌ಗಳ ಪ್ರತಿನಿಧಿಗಳು ಮಾಹಿತಿ ನೀಡಿದರು. ಪ್ರದರ್ಶನ ಅಂಗಣದೊಳಗೆ ಹಲವಾರು ವಿದ್ಯಾಸಂಸ್ಥೆಗಳು, ವಿಶ್ವವಿದ್ಯಾಲಯಗಳು ಟಿ.ವಿ ಪರದೆ, ಕೈಪಿಡಿ, ಮಾಹಿತಿ ಪತ್ರ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸೆಳೆದರು. 

‘ಯಾವ ಕೋರ್ಸ್‌ ಹಾಗೂ ಯಾವ ಕಾಲೇಜ ಅನ್ನು ಆಯ್ಕೆ ಮಾಡಿಕೊಳ್ಳುವುದು ಒಳಿತು ಎಂಬ ನಿರ್ಧಾರಕ್ಕೆ ಬರಲು ಈ ಶಿಕ್ಷಣ ಮೇಳ ನೆರವಾಯಿತು’ ಎಂದು ಹಲವು ವಿದ್ಯಾರ್ಥಿಗಳು ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದರು.

ದಿನವಿಡೀ ಅಚ್ಚರಿ ಉಡುಗೊರೆ

ನೋಂದಾಯಿತರಿಗೆ ದಿನವಿಡೀ ಅಚ್ಚರಿ ಉಡುಗೊರೆ ಪಡೆಯುವ ಅವಕಾಶ ನೀಡಲಾಗಿತ್ತು. ನೀಟ್ ಅಣಕು
ಪರೀಕ್ಷೆ ನಡೆಸಲಾಯಿತು. ಭಾನುವಾರ ಸಿಇಟಿ ಅಣುಕು ಪರೀಕ್ಷೆ ನಡೆಸಲಾಗುತ್ತದೆ. ಟಾಪರ್ಸ್‌ಗಳಿಗೆ ಒಟ್ಟು ₹ 2 ಲಕ್ಷ ನಗದು ಗೆಲ್ಲುವ ಅವಕಾಶವಿದೆ. ಅಣಕು ‘ನೀಟ್‌’ ಮತ್ತು ‘ಸಿಇಟಿ’ನಲ್ಲಿ ಮೊದಲ ಸ್ಥಾನ ಪಡೆದವರಿಗೆ ತಲಾ ₹25 ಸಾವಿರ, ಎರಡನೇ ಸ್ಥಾನ ಪಡೆದವರಿಗೆ ತಲಾ ₹15 ಸಾವಿರ, ಮೂರನೇ ಸ್ಥಾನ ಪಡೆದವರಿಗೆ ತಲಾ ₹10 ಸಾವಿರ ಬಹುಮಾನ ನೀಡಲಾಗುತ್ತದೆ. ಜತೆಗೆ, ಅಧಿಕ ಅಂಕಗಳಿಸಿದ 25 ವಿದ್ಯಾರ್ಥಿಗಳಿಗೆ ತಲಾ ₹2 ಸಾವಿರ ನೀಡಲಾಗುತ್ತದೆ.

ಮೇಳಕ್ಕೆ ಇಂದು ತೆರೆ

‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಇಲ್ಲಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ 13ನೇ ಆವೃತ್ತಿಯ ‘ಎಡ್ಯುವರ್ಸ್‌: ವಿದ್ಯಾರ್ಥಿಗಳ ದಾರಿದೀಪ’ ಶೈಕ್ಷಣಿಕ ಮೇಳಕ್ಕೆ ಭಾನುವಾರ ತೆರೆ ಬೀಳಲಿದೆ. ಬೆಳಿಗ್ಗೆ 9 ಗಂಟೆಯಿಂದ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. 10.30ಕ್ಕೆ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಎ.ಎಸ್. ರವಿ ಅವರು ಸಿಇಟಿ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ. 11 ಗಂಟೆಗೆ ಚಲನಚಿತ್ರ ನಿರ್ಮಾಣ, ರಂಗಭೂಮಿ ಕಲೆಗಳು ಮತ್ತು ಭಾರತೀಯ ನಾಗರಿಕ ಸೇವೆಗಳ ಕುರಿತು ಚರ್ಚೆಗಳು ನಡೆಯಲಿದ್ದು, ಸಿನಿಮಾ ನಿರ್ದೇಶಕ ಟಿ.ಎಸ್. ನಾಗಾಭರಣ, ರಂಗಭೂಮಿ ಕಲಾವಿದೆ ಸುಷ್ಮಾ ಹಾಗೂ ಇನ್‌ಸೈಟ್ಸ್ ಐಎಎಸ್ ಅಕಾಡೆಮಿಯ ವಿನಯ್ ಅವರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12.15ಕ್ಕೆ ವೈದ್ಯಕೀಯ ಕೋರ್ಸ್‌ಗಳ ಬಗ್ಗೆ ಸಂವಾದಗಳು ಇರಲಿದ್ದು, ಮಣಿಪಾಲ್ ಆಸ್ಪತ್ರೆಯ ಡಾ. ರಾಜನ್ ಶೆಟ್ಟಿ ಹಾಗೂ ಅಕ್ಷರಾ ದಾಮ್ಲೆ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಅಣಕು ಪರೀಕ್ಷೆ ನಡೆಯಲಿದೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಲಕ್ಕಿ ಡ್ರಾ ಘೋಷಿಸಲಾಗುತ್ತದೆ. 

ಸಿಇಟಿ, ಕಾಮೆಡ್‌–ಕೆ, ವಿವಿಧ ಕಾಲೇಜುಗಳು, ಕೋರ್ಸ್‌ಗಳ ಬಗ್ಗೆ ತಿಳಿದುಕೊಳ್ಳಲು ‘ಎಡ್ಯುವರ್ಸ್‌’ ಉತ್ತಮ ವೇದಿಕೆ. ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ, ಸಲಹೆಗಳನ್ನು ಈ ವೇದಿಕೆ ಒದಗಿಸುತ್ತಿದೆ.
–ಡಾ.ಪಿ.ಶ್ಯಾಮರಾಜು, ರೇವಾ ವಿಶ್ವವಿದ್ಯಾಲಯದ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT