ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಿಗೆಮ್ಮ, ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿಗೆ ಪ್ರಾಧಿಕಾರ

₹ 25 ಲಕ್ಷಕ್ಕಿಂತ ಅಧಿಕ ಆದಾಯದ ದೇವಸ್ಥಾನಗಳಿಗೆ ಪ್ರಾಧಿಕಾರ ಮಾಡಲು ಸರ್ಕಾರ ಚಿಂತನೆ
Published 2 ಜನವರಿ 2024, 0:30 IST
Last Updated 2 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಕೊಪ್ಪಳ ಜಿಲ್ಲೆಯಲ್ಲಿರುವ ಹುಲಿಗೆಮ್ಮ ದೇವಸ್ಥಾನಗಳ ಅಭಿವೃದ್ಧಿಗೂ ಪ್ರಾಧಿಕಾರ ರಚಿಸಲು ಮುಜರಾಯಿ ಇಲಾಖೆ ಚಿಂತನೆ ನಡೆಸಿದೆ.

ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಲು ಮತ್ತು ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚಿಸುವುದಾಗಿ 2023–24 ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ವರ್ಷ ಮತ್ತೆರಡು ‘ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ’ಗಳು ಸೇರ್ಪಡೆಯಾಗಲಿವೆ.

ಶಕ್ತಿಪೀಠ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ವರ್ಷಕ್ಕೆ 80 ಲಕ್ಷದಿಂದ 1 ಕೋಟಿ ಭಕ್ತರು ಭೇಟಿ ನೀಡುತ್ತಾರೆ. ವಾರ್ಷಿಕ ಸರಾಸರಿ ₹ 12 ಕೋಟಿ ಆದಾಯವಿದೆ. ದೊಡ್ಡಬಳ್ಳಾಪುರದಿಂದ 12 ಕಿ.ಮೀ. ದೂರದಲ್ಲಿ ಇರುವ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 60 ಲಕ್ಷದಿಂದ 75 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ವಾರ್ಷಿಕ ಸರಾಸರಿ ಆದಾಯ ₹ 8 ಕೋಟಿ ಇದೆ. ಇಷ್ಟು ಆದಾಯ ಇದ್ದರೂ ದೇವಸ್ಥಾನಗಳ ಸುತ್ತಮುತ್ತ ಸರ್ವಾಂಗೀಣ ಅಭಿವೃದ್ಧಿಯಾಗಿಲ್ಲ. ಮೂಲಕ ಸೌಲಭ್ಯಗಳ ಕೊರತೆಗಳಿವೆ. 

ಈ ಬಗ್ಗೆ ‘ಪ್ರಜಾವಾಣಿ’ ಬೆಳಕು ಚೆಲ್ಲಿದ ಬಳಿಕ ಎಚ್ಚೆತ್ತುಕೊಂಡಿರುವ ಮುಜರಾಯಿ ಇಲಾಖೆಯು ಪ್ರಾಧಿಕಾರ ರಚಿಸಲು ಚಿಂತನೆ ನಡೆಸಿದೆ. 

‘800 ವರ್ಷಗಳ ಇತಿಹಾಸ ಇರುವ ಹುಲಿಗೆಮ್ಮ ದೇವಸ್ಥಾನಕ್ಕೆ ಹೊಸ್ತಿಲು ಹುಣ್ಣಿಮೆ ದಿನ 2 ಲಕ್ಷಕ್ಕೂ ಅಧಿಕ ಭಕ್ತರು ಬಂದಿದ್ದರು. ದೇವಸ್ಥಾನಕ್ಕೆ ಸೇರಿದ 30 ಎಕರೆ ಭೂಮಿ ಇದೆ. ಆದರೂ ಸರಿಯಾದ ವ್ಯವಸ್ಥೆ ಇಲ್ಲದೇ ಭಕ್ತರು ರಸ್ತೆಯಲ್ಲಿ ಮಲಗಿದ್ದರು. ಸರಿಯಾದ ಶೌಚಾಲಯದ ವ್ಯವಸ್ಥೆಗಳಿಲ್ಲ. ಇವೆಲ್ಲವನ್ನು ನೋಡಿದಾಗ ಬದಲಾವಣೆ ತರಬೇಕು ಎಂದು ಯೋಚನೆ ಮೂಡಿತು. ಈ ದೇವಸ್ಥಾನದಲ್ಲಿ ₹55 ಕೋಟಿ ಹಣ ಇದೆ. ಪ್ರಾಧಿಕಾರ ಮಾಡಿದರೆ ಸರ್ಕಾರದ ಅನುದಾನವಿಲ್ಲದೇ ಎಲ್ಲ ಅಭಿವೃದ್ಧಿಗಳನ್ನು ಮಾಡಲು ಸಾಧ್ಯವಿದೆ’ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಕೂಡ ರಾಜ್ಯದಲ್ಲಿ ಪ್ರಾಚೀನ ಮತ್ತು ಪ್ರಸಿದ್ಧವಾದುದು. ಇಲ್ಲಿ ಪಂಚಮಿ ಮತ್ತು ಜಾತ್ರೆಯ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಬರುತ್ತಾರೆ. ವರ್ಷಕ್ಕೆ ₹ 8 ಕೋಟಿಗೂ ಅಧಿಕ ಆದಾಯ ಇರುವ ಈ ದೇವಸ್ಥಾನದಲ್ಲಿ ಭಕ್ತರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಅದಕ್ಕಾಗಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನವನ್ನು ಕೂಡ ಪ್ರಾಧಿಕಾರ ರಚಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ವಿವರಿಸಿದರು.

ಹುಲಿಗಿಯ ಹುಲಿಗೆಮ್ಮ ದೇವಸ್ಥಾನ
ಹುಲಿಗಿಯ ಹುಲಿಗೆಮ್ಮ ದೇವಸ್ಥಾನ

₹ 25 ಲಕ್ಷ ಆದಾಯ ಇರುವ ದೇವಸ್ಥಾನಗಳಿಗೆ ಪ್ರಾಧಿಕಾರ

ರಾಜ್ಯದಲ್ಲಿ ಮುಜರಾಯಿ ಇಲಾಖೆಯಡಿ ಬರುವ ₹25 ಲಕ್ಷಕ್ಕಿಂತ ಅಧಿಕ ಆದಾಯ ಇರುವ ಎಲ್ಲ ದೇವಸ್ಥಾನಗಳನ್ನು ಆಮೂಲಾಗ್ರ ಬದಲಾವಣೆ ಮಾಡಿ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂಬ ಕನಸಿದೆ. ಆದ್ಯತೆಯ ಮೇರೆಗೆ ಒಂದಾದ ಮೇಲೆ ಒಂದು ದೇವಸ್ಥಾನಕ್ಕೆ ಪ್ರಾಧಿಕಾರ ರಚಿಸಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು. ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಮೇಲೆ ಮಲೆ ಮಹದೇಶ್ವರ ದೇವಸ್ಥಾನ ಹೇಗೆ ಅಭಿವೃದ್ಧಿಯಾಯಿತು ಎಂದು ಜನರು ನೋಡಿದ್ದಾರೆ. ಅದೇ ಮಾದರಿಯಲ್ಲಿ ಎಲ್ಲ ದೇವಸ್ಥಾನಗಳು ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT