ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯ ಹಾದಿಯಲ್ಲಿ ಪಕ್ಷ ರಾಜಕಾರಣವನ್ನು ಮರೆಯೋಣ: ಸಿಎಂ ಬೊಮ್ಮಾಯಿ

ಜಾಲಹಳ್ಳಿ ವೃತ್ತದ ‘ಗ್ರೇಡ್‌ ಸಪರೇಟರ್‌’ ಕಾಮಗಾರಿಗೆ ಚಾಲನೆ
Last Updated 3 ಅಕ್ಟೋಬರ್ 2021, 16:53 IST
ಅಕ್ಷರ ಗಾತ್ರ

ಬೆಂಗಳೂರು: ‘ಅಭಿವೃದ್ಧಿಯ ಹಾದಿಯಲ್ಲಿ ಪಕ್ಷ ರಾಜಕಾರಣವನ್ನು ಮರೆಯೋಣ. ಪಕ್ಷಾತೀತವಾಗಿ ಕೆಲಸ ಮಾಡಿ, ಕೊನೆಯ ತಿಂಗಳು ಚುನಾವಣೆಗಾಗಿ ಪಕ್ಷ ರಾಜಕಾರಣ ಮಾಡೋಣ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ಹಲವು ಕಾಮಗಾರಿಗಳಿಗೆ ಚಾಲನೆ ನೀಡಿ, ಕೋವಿಡ್‌ ಚಿಕಿತ್ಸಾ ಕೇಂದ್ರ, ಕ್ರೀಡಾಂಗಣ ಉದ್ಘಾಟಿಸಿದ ಅವರು, ಜಾಲಹಳ್ಳಿ ವೃತ್ತದಲ್ಲಿ ‘ಗ್ರೇಡ್‌ ಸಪರೇಟರ್‌’ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಅಭಿವೃದ್ಧಿ ಕಾಮಗಾರಿಗಳು ಬೇಗ ಪೂರ್ಣಗೊಳ್ಳುತ್ತವೆ. ಬೆಳೆಯುತ್ತಿರುವ ಬೆಂಗಳೂರಿನ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ರೂಪಿಸಬೇಕು. ಅದರಲ್ಲಿ ಪಕ್ಷ ರಾಜಕಾರಣ ಇರಕೂಡದು. ಯೋಜನಾಬದ್ಧವಾಗಿ ನಗರವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ನಗರದಲ್ಲಿ ಅತಿ ದಟ್ಟಣೆಯ 12 ಮಾರ್ಗಗಳಲ್ಲಿ ವಿಸ್ತರಣಾ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದರಿಂದ ರಾಜಧಾನಿಯ ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆ ಇದೆ. ₹ 450 ಕೋಟಿ ವೆಚ್ಚದ ಈ ಕಾಮಗಾರಿಗಳು ಪೂರ್ಣಗೊಂಡರೆ ನಗರವನ್ನು ಸಂಪರ್ಕಿಸುವ ಎಲ್ಲ ಪ್ರಮುಖ ಮಾರ್ಗಗಳೂ ದಟ್ಟಣೆಯಿಂದ ಮುಕ್ತಿ ಪಡೆಯಲಿವೆ ಎಂದರು.

ಜಾಲಹಳ್ಳಿ ವೃತ್ತದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದವು. ದುರ್ಘಟನೆಗಳನ್ನು ತಪ್ಪಿಸಲು ಇಲ್ಲಿ ‘ಗ್ರೇಡ್‌ ಸಪರೇಟರ್‌’ ನಿರ್ಮಾಣ ಅನಿವಾರ್ಯವಾಗಿತ್ತು. ಈ ಹಿಂದೆ ತೆಗೆದುಕೊಂಡಿದ್ದ ತೀರ್ಮಾನವನ್ನು ಈಗ ಅನುಷ್ಠಾನಕ್ಕೆ ತರಲಾಗುತ್ತಿದೆ. ನಿರ್ದಿಷ್ಟ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗೊರಗುಂಟೆ ಪಾಳ್ಯ ವೃತ್ತದಲ್ಲಿ ಸಂಚಾರ ದಟ್ಟಣೆ ಮತ್ತು ಅಪಘಾತ ತಪ್ಪಿಸಲು ಮತ್ತಷ್ಟು ಕ್ರಮಗಳ ಅಗತ್ಯವಿದೆ. ಸಚಿವ ಮುನಿರತ್ನ ಮತ್ತು ಸಂಸದ ಡಿ.ಕೆ. ಸುರೇಶ್‌ ಸೇರಿದಂತೆ ಹಲವರು ಈಗಾಗಲೇ ಗಮನಕ್ಕೆ ತಂದಿದ್ದಾರೆ. ಸಮಗ್ರ ಯೋಜನೆ ರೂಪಿಸಿ ತ್ವರಿತವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಚಿತ್ರಣ ಬದಲಾವಣೆಗೆ ಸಜ್ಜು: ಲಗ್ಗೆರೆಯ ರಾಕ್ಷಸಿ ಹಳ್ಳದಲ್ಲಿ ₹ 25 ಕೋಟಿ ವೆಚ್ಚದಲ್ಲಿ ಅಂಬರೀಷ್‌ ಈಜುಕೊಳ, ಡಾ. ರಾಜ್‌ಕುಮಾರ್‌ ಉದ್ಯಾನ ಮತ್ತು ವಿಷ್ಣುವರ್ಧನ್‌ ಆಟದ ಮೈದಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಬೊಮ್ಮಾಯಿ, ‘ಮುಖ್ಯಮಂತ್ರಿಯವರ ಅಮೃತ ನಗರೋತ್ಥಾನ ಯೋಜನೆಯನ್ನು ₹ 6,000 ಕೋಟಿ ವೆಚ್ಚದಲ್ಲಿ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆದಿದೆ. ಈ ಯೋಜನೆಯಡಿ ಬೆಂಗಳೂರಿಗೆ ಹೆಚ್ಚಿನ ಅನುದಾನ ಲಭಿಸಲಿದೆ. ರಾಜಧಾನಿಯ ಚಿತ್ರಣವನ್ನೇ ಬದಲಿಸಲು ಸರ್ಕಾರ ಸಜ್ಜಾಗಿದೆ’ ಎಂದು ಹೇಳಿದರು.

ಕುಡಿಯುವ ನೀರು ಪೂರೈಕೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಜನಸ್ನೇಹಿ ಆಡಳಿತವನ್ನು ನೀಡಲಾಗುವುದು. ಇದಕ್ಕಾಗಿ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಶಾಸಕರೂ ಆಗಿರುವ ಸಚಿವ ಮುನಿರತ್ನ, ಸಚಿವರಾದ ಆರ್‌. ಅಶೋಕ, ವಿ. ಸೋಮಣ್ಣ, ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಬೈರತಿ ಬಸವರಾಜ, ಕೆ. ಗೋಪಾಲಯ್ಯ, ಸಂಸದ ಡಿ.ಕೆ. ಸುರೇಶ್‌, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಉಪಸ್ಥತರಿದ್ದರು.

ಕೋವಿಡ್‌ ಚಿಕಿತ್ಸಾ ಕೇಂದ್ರ ಉದ್ಘಾಟನೆ

ಯಶವಂತಪುರದಲ್ಲಿ ₹ 36.91 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮಲ್ಟಿ ಸ್ಪೆಷಾಲಿಟಿ ಕೋವಿಡ್‌ ಚಿಕಿತ್ಸಾ ಕೇಂದ್ರವನ್ನು ಬಸವರಾಜ ಬೊಮ್ಮಾಯಿ ಭಾನುವಾರ ಉದ್ಘಾಟಿಸಿದರು.

ನಾಲ್ಕು ಮಹಡಿಯ ಈ ಚಿಕಿತ್ಸಾ ಕೇಂದ್ರದಲ್ಲಿ ಎಲ್ಲ ಹಾಸಿಗೆಗಳಿಗೂ ಆಮ್ಲಜನಕದ ಸೌಲಭ್ಯ ಕಲ್ಪಿಸಲಾಗಿದೆ. ಸ್ಥಳದಲ್ಲೇ 10 ಕಿಲೋ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಸಂಗ್ರಹಣಾ ಘಟಕವನ್ನು ಅಳವಡಿಸಲಾಗಿದೆ. ಒಂದು ತಿಂಗಳ ಅವಧಿಗೆ ದಿನದ 24 ಗಂಟೆಯೂ ಎಲ್ಲ ಹಾಸಿಗೆಗಳಿಗೆ ಆಮ್ಲಜನಕ ಒದಗಿಸುವ ಸಾಮರ್ಥ್ಯವನ್ನು ಈ ಕೇಂದ್ರ ಹೊಂದಿದೆ

ಷಟಲ್‌ ಬ್ಯಾಡ್ಮಿಂಟನ್‌ ಆಡಿದ ಸಿಎಂ

ಮತ್ತೀಕೆರೆಯ ಜೆ.ಪಿ. ಉದ್ಯಾನದಲ್ಲಿ ₹ 5.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಬ್ಯಾಡ್ಮಿಂಟನ್‌ ಕೋರ್ಟ್‌ ಉದ್ಘಾಟಿಸಿದ ಮುಖ್ಯಮಂತ್ರಿ, ಸಚಿವರ ಜತೆ ಷಟಲ್‌ ಬ್ಯಾಡ್ಮಿಂಟನ್‌ ಆಡಿದರು. ಈ ಒಳಾಂಗಣ ಕ್ರೀಡಾಂಗಣದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಆರು ಅಂಕಣಗಳನ್ನು ನಿರ್ಮಿಸಲಾಗಿದೆ.

₹ 361.81 ಕೋಟಿ ವೆಚ್ಚದ ಕಾಮಗಾರಿಗಳು

ತೋಟಗಾರಿಕಾ ಸಚಿವ ಮುನಿರತ್ನ ಪ್ರತಿನಿಧಿಸುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಭಾನುವಾರ ಐದು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಯವರು ಹಲವು ಕಾಮಗಾರಿಗಳಿಗೆ ಶಂಕುಸ್ಥಾನೆ ನೆರವೇರಿಸಿದರು. ಕೋವಿಡ್‌ ಚಿಕಿತ್ಸಾ ಕೇಂದ್ರ, ಕ್ರೀಡಾಂಗಣ ಸೇರಿದಂತೆ ಈಗಾಗಲೇ ಸಿದ್ಧವಾಗಿರುವ ಸೌಲಭ್ಯಗಳನ್ನು ಉದ್ಘಾಟಿಸಿದರು. ಈ ಎಲ್ಲವುಗಳ ಒಟ್ಟು ಮೊತ್ತ ₹ 361.81 ಕೋಟಿ ಆಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT