ಸಿ.ಎಂ ಆಪ್ತರಿಂದ ಕೊಠಡಿಗಾಗಿ ಕಿತ್ತಾಟ

ಬೆಂಗಳೂರು: ಮುಖ್ಯಮಂತ್ರಿ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಅಧಿಕಾರಿಗಳಿಬ್ಬರು ಕೊಠಡಿಗಾಗಿ ಕಿತ್ತಾಟ ನಡೆಸಿದ್ದಾರೆ.
ವಿಧಾನಸೌಧದಲ್ಲಿರುವ ಮುಖ್ಯಮಂತ್ರಿ ಕಚೇರಿಯ ಪಕ್ಕದ ಕೊಠಡಿಯನ್ನು (323 ಬಿ) ಮೂರು ತಿಂಗಳ ಹಿಂದೆಯೇ ಆಪ್ತ ಕಾರ್ಯದರ್ಶಿ ಜಿ. ಪ್ರಭು ಅವರಿಗೆ ಹಂಚಿಕೆ ಮಾಡಲಾಗಿತ್ತು. ಅದರ ಪಕ್ಕದ ಕೊಠಡಿಯನ್ನು (324) ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ. ಚನ್ನಬಸವೇಶ ಅವರಿಗೆ ನೀಡಲಾಗಿತ್ತು.
‘ಕಚೇರಿಗೆ ನಿತ್ಯ ನೂರಾರು ಮಂದಿ ಬರುತ್ತಾರೆ. ಕೊಠಡಿಯಲ್ಲಿ ಜನರಿಗೆ ಉಸಿರು ಕಟ್ಟುವಂತಹ ವಾತಾವರಣ ಇದೆ. ಇದನ್ನು ವಿಸ್ತರಿಸಿದರೆ ಕೆಲಸ ಮಾಡಲು ಅನುಕೂಲವಾಗುತ್ತದೆ’ ಎಂದು ಪ್ರಭು ಅವರು ಒತ್ತಡ ತಂದು ಚನ್ನಬಸವೇಶ ಅವರನ್ನು ಕೊಠಡಿ ಸಂಖ್ಯೆ 318ಕ್ಕೆ ಎತ್ತಂಗಡಿ ಮಾಡಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಅವರ ಉಪ ಕಾರ್ಯದರ್ಶಿ (ಆಡಳಿತ) ಇದೇ 1ರಂದು ಆದೇಶ ಹೊರಡಿಸಿದ್ದರು’ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
‘ಈಗ ಹಂಚಿಕೆಯಾಗಿರುವ ಕೊಠಡಿ ತುಂಬಾ ಚಿಕ್ಕದಾಗಿದೆ. ನನ್ನ ಕಚೇರಿಯಲ್ಲಿ ಆರು ಸಿಬ್ಬಂದಿ ಇದ್ದಾರೆ. ಆ ಕೊಠಡಿಯಲ್ಲಿ ಕಾರ್ಯನಿರ್ವಹಣೆ ಕಷ್ಟ’ ಎಂದು ಚನ್ನಬಸವೇಶ ಅವರು ಮುಖ್ಯಮಂತ್ರಿ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ (ಎಸಿಎಸ್) ಪತ್ರ ಬರೆದರು.
ಎಸಿಎಸ್ ಅವರು ಮಧ್ಯಪ್ರವೇಶಿಸಿ ವಿವಾದ ಇತ್ಯರ್ಥಪಡಿಸಿದರು. ‘318 ಕೊಠಡಿಯಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ ಎಂದು ಮನವಿ ಸಲ್ಲಿಸಿದ್ದೆ. ಈ ಹಿಂದಿನ ಕಚೇರಿಯನ್ನೇ ಮತ್ತೆ ಹಂಚಿಕೆ ಮಾಡಿ ಕೊಟ್ಟಿದ್ದಾರೆ. ಈಗ ಯಾವ ಸಮಸ್ಯೆಗಳು ಇಲ್ಲ’ ಎಂದು ಚನ್ನಬಸವೇಶ ಪ್ರತಿಕ್ರಿಯಿಸಿದರು. ಜಿ.ಪ್ರಭು ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.