ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ ಬಂಡಿಯೇರಿದ ಜಿಲ್ಲಾಧಿಕಾರಿ: ಸಮಸ್ಯೆ ಹೇಳಿಕೊಂಡ ಗ್ರಾಮಸ್ಥರು

ಡಿಸಿ ಮಂಜುನಾಥ್‌ಗೆ ‍ಪೂರ್ಣಕುಂಭ ಸ್ವಾಗತ
Last Updated 20 ಫೆಬ್ರುವರಿ 2021, 21:53 IST
ಅಕ್ಷರ ಗಾತ್ರ

ಹೆಸರಘಟ್ಟ: ಹಸಿರು ತೋರಣಗಳಿಂದ ಕಂಗೊಳಿಸಿದ ಗ್ರಾಮ, ಬಣ್ಣ ಬಣ್ಣದ ರಂಗೋಲಿಯಿಂದ ಮಿನುಗಿದ ಬೀದಿಗಳು,ಪೂರ್ಣ ಕುಂಭವನ್ನು ಹೊತ್ತು ಸಾಗಿದ ಮಹಿಳೆಯರು, ವಿವಿಧ ಹೂವುಗಳಿಂದ ಅಲಂಕೃತಗೊಂಡ ಎತ್ತಿನ ಬಂಡಿ...

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಹನಿಯೂರು ಗ್ರಾಮದಲ್ಲಿ ಶನಿವಾರ ಕಂಡುಬಂದ ದೃಶ್ಯಗಳಿವು. ಗ್ರಾಮದ ಹೆಬ್ಬಾಗಿಲಿನಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರಿಗೆ ಗ್ರಾಮದ ಮಹಿಳೆಯರು ಪೂರ್ಣಕುಂಭದ ಸ್ವಾಗತವನ್ನು ನೀಡಿದರು. ಬಳಿಕ ಎತ್ತಿನ ಬಂಡಿಯಲ್ಲಿ ಕೂರಿಸಿಕೊಂಡು ಗ್ರಾಮದಲ್ಲಿ ಮೆರವಣಿಗೆ ಬರಲಾಯಿತು.

ಗ್ರಾಮಸ್ಥರು ಎಳೆ ಎಳೆಯಾಗಿ ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಬಿಚ್ಚಿಟ್ಟರು. ‘ಯುವಕರಿಗೆ ಕಬಡ್ಡಿ ಆಡಲು ಆಟದ ಮೈದಾನವಿಲ್ಲ. ಮೈದಾನಕ್ಕೆ ಜಾಗವನ್ನು ಮಂಜೂರು ಮಾಡಿಕೊಡಬೇಕು’ ಎಂದು ಗ್ರಾಮಸ್ಥರು ಮನವಿ ಮಾಡಿದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಶೀಘ್ರದಲ್ಲಿಯೇ ಆಟದ ಮೈದಾನ ಮಂಜೂರು ಮಾಡಿ ಕೊಡಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಗ್ರಾಮದ ಕೆರೆ ಮತ್ತು ಸ್ಮಶಾನ ಜಾಗ ಒತ್ತುವರಿಯಾಗಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಆ ಜಾಗವನ್ನು ಪರಿಶೀಲನೆ ಮಾಡಿದರು. ನಂತರ ಒತ್ತುವರಿ ಮಾಡಿಕೊಂಡ ಗ್ರಾಮಸ್ಥರಿಗೆ ಒತ್ತುವರಿ ತೆರವುಗೊಳಿಸಲು ಹೇಳಿದರು.

ಸರ್ಕಾರದ ಬಹುತೇಕ ಇಲಾಖೆಗಳ ಅಧಿಕಾರಿಗಳು ಹಾಜರಿದ್ದು ಗ್ರಾಮಸ್ಥರ ಅಹವಾಲುಗಳನ್ನು ಸ್ವೀಕರಿಸಿದರು. ಸ್ಥಳದಲ್ಲಿಯೇ 190 ಅರ್ಜಿಗಳನ್ನು ಸ್ವೀಕರಿಸಲಾಯಿತು.

ಫೌತಿ ಖಾತೆ, ಪಹಣಿ ತಿದ್ದುಪಡಿ, ಸರ್ಕಾರಿ ಬಸ್ಸು ಸೌಲಭ್ಯ, ಪ್ರಾಥಮಿಕ ಶಾಲೆಯನ್ನು ಮೇಲ್ದರ್ಜೆಗೇರಿಸುವ ಕುರಿತು ಗ್ರಾಮಸ್ಥರು ಅರ್ಜಿಗಳನ್ನು ನೀಡಿದರು. ಪಿಂಚಣಿ, ಜಾತಿ ಆದಾಯ ಪ್ರಮಾಣ ಪತ್ರ, ಭೂ ಹಿಡುವಳಿ ಪ್ರಮಾಣ ಪತ್ರ, ಭಾಗ್ಯಲಕ್ಷ್ಮೀ ಬಾಂಡ್, ನರೇಗಾ ಮತ್ತು ಗ್ರಾಮದ ನಿವಾಸಿಯಾದ ರಾಮಕೃಷ್ಣಯ್ಯ ಅವರಿಗೆ ಪವರ್ ಗ್ರೀಡ್ ಪರಿಹಾರದ ಚೆಕ್‍ನ್ನು ವಿತರಿಸಲಾಯಿತು.

ಕಾಕೋಳು ಜನತಾ ಕಾಲೊನಿಗೆ ಭೇಟಿ:‘ಗ್ರಾಮದಲ್ಲಿ ಆಶ್ರಯ ಮನೆಗಳನ್ನು ಸರ್ಕಾರವು ಬಹಳ ಹಿಂದೆ ನೀಡಿದೆ. ಆದರೆ ನಮಗೆ ಇಲ್ಲಿಯ ತನಕ ಹಕ್ಕು ಪತ್ರಗಳನ್ನು ನೀಡಿಲ್ಲ. ತಾವು ದಯವಿಟ್ಟು ಸ್ಥಳ ಪರಿಶೀಲನೆ ಮಾಡಿ ಹಕ್ಕು ಪತ್ರ ನೀಡಿ’ ಎಂದು ಜಿಲ್ಲಾಧಿಕಾರಿಗೆ ಕಾಕೋಳು ಗ್ರಾಮದ ಜನತಾ ಕಾಲೊನಿ ನಿವಾಸಿಗಳು ಮನವಿ ಮಾಡಿದರು.

ಖುದ್ದು ಜಾಗವನ್ನು ಪರಿಶೀಲನೆ ಮಾಡಿ ಹಕ್ಕು ಪತ್ರ ಕೊಡಿಸುವುದಾಗಿ ಮಂಜುನಾಥ್ ಭರವಸೆ ನೀಡಿದರು.

ಯಲಹಂಕ ತಹಶೀಲ್ದಾರ್‌ ನರಸಿಂಹಮೂರ್ತಿ, ವಿಶೇಷ ತಹಶೀಲ್ದಾರ್‌ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿಶೋರ್ ಕುಮಾರ್, ಉಪವಿಭಾಗಾಧಿಕಾರಿ ರಂಗನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT