ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಲಕನ ಕೊಂದಿದ್ದವರಿಗೆ ಜೀವಾವಧಿ ಶಿಕ್ಷೆ

9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ
Published 15 ಫೆಬ್ರುವರಿ 2024, 0:04 IST
Last Updated 15 ಫೆಬ್ರುವರಿ 2024, 0:04 IST
ಅಕ್ಷರ ಗಾತ್ರ

ಬೆಂಗಳೂರು: ಕ್ಯಾಬ್ ಸುಲಿಗೆ ಮಾಡುವ ಉದ್ದೇಶದಿಂದ ಚಾಲಕನನ್ನು ಕೊಂದು ಬೆಂಕಿ ಹಚ್ಚಿ ಮೃತದೇಹ ಸುಟ್ಟು ಹಾಕಿದ್ದ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ 9ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಅತ್ತಿಬೆಲೆ ಬಳಿಯ ಕಿತ್ತಗಾನಹಳ್ಳಿಯ ಪಿ.ಎನ್. ಹೇಮಂತ್‌ ಸಾಗರ್ (24) ಹಾಗೂ ನೆಲಮಂಗಲ ತಾಲ್ಲೂಕಿನ ಜಕ್ಕಸಂದ್ರದ ಎಚ್‌. ವಿನೋದ್‌ಕುಮಾರ್ (26) ಶಿಕ್ಷೆಗೆ ಗುರಿಯಾದ ಅಪರಾಧಿಗಳು. ಇಬ್ಬರೂ ಸೇರಿಕೊಂಡು ಕ್ಯಾಬ್ ಚಾಲಕ ಕೆ.ಎನ್. ಕೆಂಪೇಗೌಡ ಅವರನ್ನು ಕೊಂದಿದ್ದರು.

ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ 2019ರ ಮೇ 19ರಂದು ದಾಖಲಾಗಿದ್ದ ಕೊಲೆ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಎಸ್‌. ಶ್ರೀಧರ್ ನಡೆಸಿದ್ದರು.

ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ರಾಜ ಹಾಗೂ ಮಹಾದೇವ ಗಡಾದ ವಾದಿಸಿದ್ದರು.

ಕ್ಯಾಬ್ ಕದ್ದು ಮಾರಲು ಸಂಚು:

‘ಚಾಲಕನನ್ನು ಅಪಹರಿಸಿ ಕೊಂದು ಕ್ಯಾಬ್ ಕದ್ದೊಯ್ದು ಮಾರಾಟ ಮಾಡಿ ಹಣ ಸಂಪಾದಿಸಲು ಅಪರಾಧಿಗಳು ಸಂಚು ರೂಪಿಸಿದ್ದರು. ಅದರಂತೆ, ಊಟಿಗೆ ಹೋಗಬೇಕೆಂದು ಕೆಂಪೇಗೌಡ ಅವರ ಇನ್ನೋವಾ ಕ್ರಿಸ್ಟಾ (ಕೆಎ 01 ಎಎಚ್ 6012) ಕಾರು ಕಾಯ್ದಿರಿಸಿದ್ದರು. ಕ್ಯಾಬ್ ಮಾಲೀಕತ್ವ ವರ್ಗಾವಣೆ ಪತ್ರಗಳನ್ನೂ ಅಪರಾಧಿಗಳು ಖರೀದಿಸಿಟ್ಟುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘2019ರ ಮೇ 16ರಂದು ಬಿಟಿಎಲ್ ಕಾಲೇಜು ಮುಂಭಾಗಕ್ಕೆ ಬಂದಿದ್ದ ಕೆಂಪೇಗೌಡ, ತನ್ನ ಕಾರಿನಲ್ಲಿ ಅಪರಾಧಿಗಳನ್ನು ಹತ್ತಿಸಿಕೊಂಡು ಹೊರಟಿದ್ದರು. ಮಂಡ್ಯ ತಾಲ್ಲೂಕಿನ ಕರಂಗದೂರು ಸಮೀಪ ಮೂತ್ರ ವಿಸರ್ಜನೆಗೆಂದು ಅಪರಾಧಿಗಳು ಕಾರು ನಿಲ್ಲಿಸಿದ್ದರು. ಚಾಲಕ ಕೆಂಪೇಗೌಡ ಸಹ ಕಾರಿನಿಂದ ಇಳಿದಿದ್ದರು.’

‘ಕೆಂಪೇಗೌಡನನ್ನು ಹಿಡಿದುಕೊಂಡಿದ್ದ ಅಪರಾಧಿಗಳು, ಬಾಯಿಗೆ ಬಟ್ಟೆ ತುರುಕಿದ್ದರು. ಕೈ–ಕಾಲುಗಳನ್ನು ಬಟ್ಟೆಯಿಂದ ಕಟ್ಟಿದ್ದರು. ಅದೇ ಸ್ಥಿತಿಯಲ್ಲಿ ಕೆಂಪೇಗೌಡ ಅವರನ್ನು ಕಾರಿನ ಹಿಂಭಾಗದ ಸೀಟಿನಲ್ಲಿ ಮಲಗಿಸಿದ್ದರು. ನಂತರ, ಅಪರಾಧಿಗಳೇ ಕಾರು ಚಲಾಯಿಸಿಕೊಂಡು ಹೆಬ್ಬಗೋಡಿಗೆ ಬಂದಿದ್ದರು’ ಎಂದು ಪೊಲೀಸರು ತಿಳಿಸಿದರು.

ದಾಖಲಾತಿ ಮೇಲೆ ಸಹಿ ಪಡೆದು ಹತ್ಯೆ

‘ಹೆಬ್ಬಗೋಡಿಯಿಂದ ಕಾರು ಚಲಾಯಿಸಿಕೊಂಡು ಸುತ್ತಾಡಿಸಿ ನೆಲಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಲ್ಲರ ಬಾಣವಾಡಿ ಸಮೀಪಕ್ಕೆ ಹೋಗಿದ್ದರು. ಅಲ್ಲಿಯೇ ಕೆಂಪೇಗೌಡ ಅವರಿಂದ ವಾಹನ ಮಾಲೀಕತ್ವ ವರ್ಗಾವಣೆ ದಾಖಲಾತಿ ಮೇಲೆ ಅಪರಾಧಿಗಳು ಸಹಿ ಪಡೆದಿದ್ದರು. ನಂತರ, ಪಂಚೆಯಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿದ್ದರು. ಕೆಳಗೆ ಬಿದ್ದ ಕೆಂಪೇಗೌಡ ಅವರ ತಲೆಗೆ ಕಟ್ಟಿಗೆಯಿಂದ ಹೊಡೆದಿದ್ದರು. ಬಳಿಕ, ಚಾಕುವಿನಿಂದ ಬೆನ್ನಿಗೆ ತಿವಿದು ಕೊಂದಿದ್ದರು’ ಎಂದು ಪೊಲೀಸರು ಹೇಳಿದರು.

‘ನೆಲಮಂಗಲ ಕುಣಿಗಲ್ ರಸ್ತೆಯಲ್ಲಿರುವ ಬಂಕ್‌ವೊಂದರಲ್ಲಿ ಪೆಟ್ರೋಲ್ ಖರೀದಿಸಿ ತಂದಿದ್ದ ಅಪರಾಧಿಗಳು, ಅದನ್ನೇ ಕೆಂಪೇಗೌಡ ಮೃತದೇಹದ ಮೇಲೆ ಎರಚಿದ್ದರು. ನಂತರ, ಬೆಂಕಿ ಹಚ್ಚಿ ಮೃತದೇಹ ಸುಟ್ಟು ಕಾರಿನ ಸಮೇತ ಪರಾರಿಯಾಗಿದ್ದರು’ ಎಂದರು.

‘ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಇನ್‌ಸ್ಪೆಕ್ಟರ್ ಎಚ್‌.ಆರ್. ಅನಿಲ್‌ಕುಮಾರ್ ಅವರು ಅಪರಾಧಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅಪರಾಧಿಗಳಿಂದ ಕಾರು ಜಪ್ತಿ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT