ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜೆ ಹಳ್ಳಿ ಕೆಜಿ ಹಳ್ಳಿ ಪ್ರಕರಣ ಭಯೋತ್ಪಾದನಾ ಕೃತ್ಯ: ಹೈಕೋರ್ಟ್‌

Last Updated 12 ಏಪ್ರಿಲ್ 2023, 5:36 IST
ಅಕ್ಷರ ಗಾತ್ರ

ಬೆಂಗಳೂರು: ದೇವರಜೀವನಹಳ್ಳಿ (ಡಿಜೆ ಹಳ್ಳಿ) ಮತ್ತು ಕಾಡುಗೊಂಡನಹಳ್ಳಿ (ಕೆಜಿ ಹಳ್ಳಿ) ಗಲಭೆ ಪ್ರಕರಣವನ್ನು, ‘ದೇಶದ ಭದ್ರತೆಗೆ ಭಂಗ ಉಂಟು ಮಾಡಿರುವ ಭಯೋತ್ಪಾದನಾ ಕೃತ್ಯ’ ಎಂದು ಬಣ್ಣಿಸಿರುವ ಹೈಕೋರ್ಟ್‌, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ವಿಶೇಷ ನ್ಯಾಯಾಲಯದ ಆರೋಪ ಪರಿಗಣನೆ (ಸಂಜ್ಞೇಯ ಅಪರಾಧ) ಕ್ರಮವನ್ನು ಪ್ರಶ್ನಿಸಲಾಗಿದ್ದ ಅರ್ಜಿಯೊಂದನ್ನು ವಜಾಗೊಳಿಸಿದೆ.

ಈ ಸಂಬಂಧ ಪ್ರಕರಣದ 25ನೇ ಆರೋಪಿಯಾದ ಎಂ.ಎಸ್‌.ಪಾಳ್ಯ ನಿವಾಸಿ ಮೊಹಮ್ಮದ್ ಶರೀಫ್ ಪರವಾಗಿ ಪತ್ನಿ ಸಲ್ಮಾ ಖಾತೂನ್‌ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರ ವಿರುದ್ಧದ ಆರೋಪಗಳು ಯುಎಪಿಎ ಕಾಯ್ದೆ–1967ರ (ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ) ಕಲಂ 15ಕ್ಕೆ ಪೂರಕವಾಗಿರುವುದು ಮೇಲ್ನೋಟಕ್ಕೇ ಕಂಡುಬಂದಿವೆ’ ಎಂದು ಹೇಳಿದೆ.

‘ಅರ್ಜಿದಾರರ ವಿರುದ್ಧ ಹೊರಿಸಲಾಗಿರುವ ಯುಎಪಿಎ ಮತ್ತು ಸಾರ್ವಜನಿಕ ಆಸ್ತಿಯ ಹಾನಿ ತಡೆ ಕಾಯ್ದೆ–1984 ಹಾಗೂ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ವಿವಿಧ ಕಲಂಗಳ ಅಡಿಯ ಆರೋಪಗಳನ್ನು ಗಮನಿಸಿದಾಗ ಮೊಹಮ್ಮದ್ ಶರೀಫ್‌, ಪ್ರಕರಣದ ಇತರ ಆರೋಪಿಗಳ ಜೊತೆಗೆ ಒಡನಾಟ ಹೊಂದಿರುವುದು, ಫೋನ್ ಮೂಲಕ ಸಾಧಿಸಿರುವ ಸಂಪರ್ಕ ಸಾಧಿಸಿರುವುದು ಮತ್ತು ಗಲಭೆಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ತಾಹಿರ್ ಮೊಹಮ್ಮದ್‌, ’ಅರ್ಜಿದಾರರ ವಿರುದ್ಧ ಎನ್ಐಎ ಕಾಯ್ದೆ ಅಡಿಯಲ್ಲಿನ ಯಾವುದೇ ಆರೋಪಗಳಿಲ್ಲ. ಕೇವಲ ಐಪಿಸಿ ಅಡಿಯ ಆರೋಪಗಳನ್ನು ಅದರ ವ್ಯಾಪ್ತಿ ಹೊಂದಿದ ಮ್ಯಾಜಿಸ್ಟ್ರೇಟ್‌ ಅಥವಾ ಸೆಷನ್ಸ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬಹುದು. ಈ ಕುರಿತು ಎನ್ಐಎ ನ್ಯಾಯಾಲಯ ವಿಚಾರಣೆ ನಡೆಸುವುದು ಕಾನೂನಿಗೆ ವಿರುದ್ಧವಾಗಿದೆ. ಆದ್ದರಿಂದ, ಎನ್ಐಎ ನ್ಯಾಯಾಲಯದಲ್ಲಿನ ಪ್ರಕ್ರಿಯೆ ವಜಾ ಮಾಡಬೇಕು’ ಎಂದು ಕೋರಿದ್ದರು.

ಇದನ್ನು ಬಲವಾಗಿ ಆಕ್ಷೇಪಿಸಿದ್ದ ಎನ್‌ಐಎ ಪರ ವಿಶೇಷ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನಕುಮಾರ್, ‘ಅರ್ಜಿದಾರರೂ ಸೇರಿದಂತೆ ಇತರೆ ಆರೋಪಿಗಳ ವಿರುದ್ಧದ ಆರೋಪಗಳು ಭಯೋತ್ಪಾದನಾ ಕೃತ್ಯ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುತ್ತವೆ. ಅರ್ಜಿದಾರರು ಯಾವ ಪಾತ್ರ ನಿಭಾಯಿಸಿದ್ದಾರೆ ಎಂಬುದು ದೋಷಾರೋಪ ಪಟ್ಟಿಯಲ್ಲಿ ಸ್ಪಷ್ಟವಾಗಿದ್ದು, ಆ ಕಾರಣಕ್ಕಾಗಿಯೇ ಅವರ ವಿರುದ್ಧ ವಿಶೇಷ ನ್ಯಾಯಾಲಯ ಸಂಜ್ಞೇಯ ಅಪರಾಧ ಎಂದು ಪರಿಗಣಿಸಿದೆ. ಅಂತೆಯೇ ಅರ್ಜಿದಾರರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 2022ರ ಮಾರ್ಚ್ 30ರಂದು ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ನಿರಾಕರಿಸಿದೆ. ಆದ್ದರಿಂದ ಈ ಅರ್ಜಿ ವಜಾಗೊಳಿಸಬೇಕು’ ಎಂ‌ದು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT