ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದ್ವೇಷದ ಹಾವಿಗೆ ಆಹಾರವಾಗಬೇಡಿ: ಜಯಂತ ಕಾಯ್ಕಿಣಿ

Published 28 ಏಪ್ರಿಲ್ 2024, 15:36 IST
Last Updated 28 ಏಪ್ರಿಲ್ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ‘ಹಾವು ಏಣಿ ಆಟದಂತಾಗಿರುವ ಬದುಕಿನಲ್ಲಿ ದ್ವೇಷದ ಹಾವಿಗೆ ಆಹಾರವಾಗಬಾರದು. ಶಿಕ್ಷಣ, ದಾರ್ಶನಿಕರ ಮಾರ್ಗದರ್ಶನದಲ್ಲಿ ಏಣಿ ಹತ್ತಿ ಪ್ರತಿಯೊಂದನ್ನೂ ಪ್ರೀತಿಯಿಂದ ನೋಡಬೇಕು‘ ಎಂದು ಸಾಹಿತಿ ಜಯಂತ ಕಾಯ್ಕಿಣಿ ತಿಳಿಸಿದರು.

ಶಿವರಾಮ ಕಾರಂತ ವೇದಿಕೆ, ಪಾ.ವೆಂ. ಆಚಾರ್ಯ ಟ್ರಸ್ಟ್‌, ವಿನಾಯಕ ದೇವಸ್ಥಾನ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ‘ಪಾ.ವೆಂ. ಸ್ಮೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಾಟ್ಸ್‌ಆ್ಯಪ್‌ ಸಂದೇಶಗಳನ್ನು ನಂಬಿ ಯಾರನ್ನೋ ದ್ವೇಷ ಮಾಡಲು ಹೊರಡುವವರ ಸಂಖ್ಯೆ ಹೆಚ್ಚಾಗಿದೆ. ಮತೀಯವಾದ, ಅಟ್ಟಹಾಸ, ದೈಹಿಕ–ಐಹಿಕ ವಿಚಾರಗಳು ನಮ್ಮನ್ನು ನುಂಗುವ ಹಾವುಗಳು. ದ್ವೇಷ ಮೊದಲು ನಮ್ಮನ್ನೇ ಸುಡುತ್ತದೆ ಎಂಬುದನ್ನು ಅರಿಯದೆ ಅಮಾಯಕರು ಬಲಿಯಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪಾ.ವೆಂ. ಆಚಾರ್ಯರು ಪ್ರೀತಿಯನ್ನು ಹಂಚಿದರು. ಅವರೆಂದೂ ಹಣಕ್ಕೆ ಪ್ರಾಮುಖ್ಯ ನೀಡಿದವರಲ್ಲ. ವಿಡಂಬನೆ, ಹಾಸ್ಯ ಅವರ ಬರಹಗಳಲ್ಲಿದ್ದರೂ ಮನರಂಜನೆಯೊಂದೇ ಬದುಕು ಅಲ್ಲ ಎಂಬುದನ್ನು ಅವರು ತಿಳಿದಿದ್ದರು. ವಿಜ್ಞಾನ ಮತ್ತು ಸಮಾಜ ಬಹಳ ಅಗತ್ಯ ಎಂದರಿತು ಕೆಲಸ ಮಾಡಿದ್ದರು ಎಂದು ನೆನಪು ಮಾಡಿಕೊಂಡರು.

‘ನಾವು ಕಲಿತಿರುವುದನ್ನು ಹಂಚುವ ಮೂಲಕ ಒಟ್ಟಿಗೆ ಸಾಗುವುದು ಹಿಂದಿನವರ ಗುಣವಾಗಿತ್ತು. ವೈಚಾರಿಕ ಚಿಂತಕರು ಎಂದರೆ ನಗದೇ ಗಂಭೀರವಾಗಿರಬೇಕು ಎಂದು ಅವರೆಲ್ಲ ತಿಳಿದಿರಲಿಲ್ಲ. ಲವಲವಿಕೆ ಮತ್ತು ಜಿಜ್ಞಾಸೆ ಅವರಿಗೆ ಬೇರೆಯಾಗಿರಲಿಲ್ಲ. ಇದೇ ಸಾಲಿಗೆ ಸೇರಿದವರು ಪಾ.ವೆಂ.’ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕಿ ಎಚ್‌. ಶಶಿಕಲಾ ಮಾತನಾಡಿ, ‘ಪಾ.ವೆಂ. ಅವರ ‘ಪದಾರ್ಥ ಚಿಂತಾಮಣಿ’ ಕೃತಿ ನೋಡಿದರೆ ಇಷ್ಟೊಂದು ಪದಗಳನ್ನು ಎಲ್ಲಿಂದ ಹುಡುಕಿ ತಂದಿದ್ದಾರೆ ಎಂದು ಅಚ್ಚರಿಯಾಗುತ್ತದೆ. ಅವರು ಪ್ರತಿ ಪದದ ಮೂಲ ಹುಡುಕಿ ಓದುಗರ ಮುಂದೆ ಇಟ್ಟಿದ್ದಾರೆ’ ಎಂದು ಹೇಳಿದರು.

‘ಓದುಗರನ್ನು ಹಿಡಿದಿಟ್ಟುಕೊಳ್ಳುವ ಶೈಲಿಯಲ್ಲಿ ಪಾ.ವೆಂ. ಬರೆಯುತ್ತಿದ್ದರು. ತಮ್ಮ ಬರಹಗಳ ಮೂಲಕ ಹೊಸ ವಿಚಾರಗಳನ್ನು ತಿಳಿಸಿ, ಓದುಗರನ್ನು ಜಾಗೃತರನ್ನಾಗಿ ಮಾಡುತ್ತಿದ್ದರು. ಯಾವ ಸಂಶೋಧನೆಗೂ ಕಡಿಮೆ ಇಲ್ಲದಂತೆ ಬರೆಯುತ್ತಿದ್ದರು‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT