ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಸಾರಕ್ಕಿ ಉದ್ಯಾನದಲ್ಲಿ ಜೋಡಿ ಕೊಲೆ– ಸಿನಿಮೀಯ ರೀತಿಯಲ್ಲಿ ದುರಂತ!

ಪುತ್ರಿ ಕೊಲೆಗೆ ಪ್ರತೀಕಾರ ತೀರಿಸಿಕೊಂಡ ತಾಯಿ ಬಂಧನ
Published 18 ಏಪ್ರಿಲ್ 2024, 20:05 IST
Last Updated 18 ಏಪ್ರಿಲ್ 2024, 20:05 IST
ಅಕ್ಷರ ಗಾತ್ರ

ಬೆಂಗಳೂರು: ಸಾರಕ್ಕಿ ಉದ್ಯಾನದಲ್ಲಿ ಗುರುವಾರ ಸಂಜೆ ಜೋಡಿ ಕೊಲೆ ನಡೆದಿದ್ದು, ಈ ಸಂಬಂಧ ಜೆ.ಪಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೊರಗುಂಟೆಪಾಳ್ಯದ ಸುರೇಶ್‌ (46) ಹಾಗೂ ಶಾಕಾಂಬರಿ ನಗರದ (25) ಅನುಷಾ ಕೊಲೆಯಾದವರು.

ಪ್ರಕರಣ ಸಂಬಂಧ ಅನುಷಾ ಅವರ ತಾಯಿ ಗೀತಾ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

‘ಸುರೇಶ್ ಹಾಗೂ ಅನುಷಾ ನಡುವೆ ಸ್ನೇಹವಿತ್ತು. ಸ್ನೇಹವು ಪ್ರೇಮಕ್ಕೆ ತಿರುಗಿತ್ತು. ಇಬ್ಬರೂ ಆಗಾಗ್ಗೆ ಭೇಟಿ ಆಗುತ್ತಿದ್ದರು. ತಮ್ಮಿಬ್ಬರ ಸಂಬಂಧ ಮುಂದುವರಿಸುವುದು ಬೇಡವೆಂದು ಇತ್ತೀಚೆಗೆ ನಿರ್ಧರಿಸಿದ್ದ ಅನುಷಾ ಆತನಿಂದ ದೂರವಾಗಿದ್ದಳು. ಗುರುವಾರ ಸಂಜೆ ಸಾರಕ್ಕಿ ಉದ್ಯಾನದಲ್ಲಿ ಭೇಟಿಯಾದ ವೇಳೆ ಅನುಷಾಳನ್ನು ಸುರೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ಘಟನೆ ನಡೆದಾಗ ಅನುಷಾ ಅವರ ತಾಯಿ ಗೀತಾ ಸ್ಥಳದಲ್ಲೇ ಇದ್ದರು. ಮಗಳ ಕೊಲೆಗೆ ಪ್ರತೀಕಾರವಾಗಿ ಸುರೇಶ್‌ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಸುರೇಶ್ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಅದೇ ಸಂಸ್ಥೆಯಲ್ಲಿ ಅನುಷಾ ಕೂಡ ಕೆಲಸ ಮಾಡುತ್ತಿದ್ದರು. ಸುರೇಶ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಈ ನಡುವೆ ಅನುಷಾ ಜತೆ ಸುರೇಶ್‌ಗೆ ಪ್ರೇಮಾಂಕುರವಾಗಿತ್ತು’ ಎಂದು ಮೂಲಗಳು ಹೇಳಿವೆ.

‘ಇತ್ತೀಚೆಗೆ ಅನುಷಾ, ತನ್ನಿಂದ ಅಂತರ ಕಾಯ್ದುಕೊಳ್ಳುವಂತೆ ಸುರೇಶ್‌ಗೆ ಸೂಚಿಸಿ, ಕೆಲಸ ಬಿಟ್ಟಿದ್ದಳು. ಹೀಗಾಗಿ ಜೀವನ ನಿರ್ವಹಣೆಗಾಗಿ ಆಕೆ, ಮಕ್ಕಳ ಕೇರ್‌ಟೇಕರ್ ಆಗಿ ಕೆಲಸ ಮಾಡಿಕೊಂಡಿದ್ದಳು. ಆದರೂ ಸುರೇಶ್ ಆಗಾಗ್ಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ. ತೊಂದರೆ ನೀಡಿದರೆ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಳು’ ಎಂದು ಪೊಲೀಸರು ತಿಳಿಸಿದರು.

‘ಕಿರುಕುಳದಿಂದ ಬೇಸತ್ತಿದ್ದ ಅನುಷಾ ಜೆ.ಪಿ.ನಗರ ಠಾಣೆಗೆ ಸುರೇಶ್ ವಿರುದ್ಧ ದೂರು ನೀಡಿದ್ದಳು. ಗುರುವಾರ ಮಧ್ಯಾಹ್ನ ಸುರೇಶ್‌ನನ್ನು ಠಾಣೆಗೆ ಕರೆಸಿದ್ದ ಪೊಲೀಸರು ತೊಂದರೆ ಕೊಡದಂತೆ ಎಚ್ಚರಿಕೆ ನೀಡಿದ್ದರು. ಇದೇ ವರ್ತನೆ ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಕೊನೆಯದಾಗಿ ಮಾತನಾಡುವುದಾಗಿ ಹೇಳಿ ಅನುಷಾಳನ್ನು ಉದ್ಯಾನಕ್ಕೆ ಕರೆಸಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ’  ಎಂದು ಪೊಲೀಸರು ಹೇಳಿದರು.

‘ಉದ್ಯಾನದಲ್ಲಿ ಇಬ್ಬರ ನಡುವೆ ಗಲಾಟೆ ನಡೆದು ಆರೋಪಿ ಕೃತ್ಯ ಎಸಗಲೆಂದ ತಂದಿದ್ದ ಚಾಕುವಿನಿಂದ ಅನುಷಾಗೆ ಐದಾರು ಬಾರಿ ಇರಿದು ಕೊಲೆ ಮಾಡಿದ್ದಾನೆ. ಪುತ್ರಿ ರಕ್ಷಣೆಗೆ ಧಾವಿಸಿದ ಗೀತಾ ಅವರಿಗೂ ಆರೋಪಿ ಚಾಕುವಿನಿಂದ ಇರಿಯಲು ಯತ್ನಿಸಿದ. ಆಕೆ ತಪ್ಪಿಸಿಕೊಂಡು ಅಲ್ಲೇ ಇದ್ದ ಸಿಮೆಂಟ್‌ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT