ಹೊಸ ವರ್ಷಕ್ಕೆ ಬೆಂಗಳೂರಿಗೆ ಬಂದಿದ್ದ ₹80 ಲಕ್ಷದ ಡ್ರಗ್ಸ್ ಜಪ್ತಿ

ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ನಡೆಯುವ ಪಾರ್ಟಿಗಳಿಗೆ ಸರಬರಾಜು ಮಾಡಲು ಮಾದಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿದ್ದ ಮನೆಯೊಂದರ ಮೇಲೆ ಬಾಗಲೂರು ಪೊಲೀಸರು ದಾಳಿ ನಡೆಸಿದ್ದು, ನೈಜೀರಿಯಾದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಮನೆಯಲ್ಲಿ ಸಿಕ್ಕ ₹80 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
‘ಆರೋಪಿಗಳು ಬುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದರು. ಮುಂಬೈನಿಂದ ಮಾದಕ ವಸ್ತುಗಳನ್ನು ಖರೀದಿಸುತ್ತಿದ್ದರು. ಯಾರಿಗೂ ಅನುಮಾನ ಬರದಂತೆ ಸೋಪ್ ಬಾಕ್ಸ್‌ಗಳಲ್ಲಿ ಮಾದಕ ವಸ್ತುಗಳನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇದನ್ನೇ ವೃತ್ತಿಯಾಗಿ ಮಾಡಿಕೊಂಡು ಹಣ ಸಂಪಾದಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಮನೆಯ ಮೇಲೆ ಬುಧವಾರ ದಾಳಿ ನಡೆಸಲಾಯಿತು. ಈ ವೇಳೆ ಮನೆಯಲ್ಲಿ ಪತ್ತೆಯಾದ 400 ಗ್ರಾಂ. ಎಂಡಿಎಂಎ, 40 ಗ್ರಾಂ ಕೊಕೇನ್, 40 ಗ್ರಾಂ ಹ್ಯಾಶಿಶ್, ಡ್ರಗ್ಸ್ ತುಂಬಿಸಿದ್ದ ಐದು ಸೋಪ್ ಬಾಕ್ಸ್‌ಗಳು, ತೂಕದ ಯಂತ್ರ ಹಾಗೂ ಐದು ಮೊಬೈಲ್‌ಗಳನ್ನು ಜಪ್ತಿ ಮಾಡಲಾಯಿತು’ ಎಂದು ಮಾಹಿತಿ ನೀಡಿದರು.
‘ಆರೋಪಿಗಳು ಹೊಸ ವರ್ಷದ ಪಾರ್ಟಿಗಳಿಗೆ ಪೂರೈಸಲು ಮಾದಕ ವಸ್ತುಗಳನ್ನು ತರಿಸಿಕೊಂಡಿದ್ದರು. ಅವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಹಾಗೂ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.