ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈನಿಂದ ಗಡಿಪಾರು: ಬೆಂಗಳೂರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದವನ ಸೆರೆ

Last Updated 25 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಆನ್‌ಲೈನ್ ಆ್ಯಪ್‌ಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಡ್ರಗ್ಸ್ ಮಾರುತ್ತಿದ್ದ ಆರೋಪಿ ಕೆ.ಪಿ. ಮುನಾಫಿಸ್ ಅಲಿಯಾಸ್ ಟೋನಿ (26) ಎಂಬಾತನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ಮುನಾಫಿಸ್, ನಗರದ ಎಚ್‌ಬಿಆರ್ ಲೇಔಟ್‌ನ ಅಶ್ವಥ್ ನಗರದಲ್ಲಿ ವಾಸವಿದ್ದ. ಹಲವು ತಿಂಗಳಿನಿಂದ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ. ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದ್ದು, ₹ 35 ಲಕ್ಷ ಮೌಲ್ಯದ 700 ಗ್ರಾಂ ತೂಕದ ಎಂಡಿಎಂಎ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘2018ರಲ್ಲಿ ಕೇರಳದಿಂದ ದುಬೈಗೆ ಹೋಗಿದ್ದ ಮುನಾಫಿಸ್, ಅಲ್ಲಿಯ ಕಂಪನಿಯೊಂದರಲ್ಲಿ ಮಾರುಕಟ್ಟೆ ಪ್ರತಿನಿಧಿ ಆಗಿ ಕೆಲಸ ಆರಂಭಿಸಿದ್ದ. ಐಷಾರಾಮಿ ಜೀವನ ನಡೆಸುತ್ತಿದ್ದ ಈತನಿಗೆ ಸಂಬಳ ಸಾಲುತ್ತಿರಲಿಲ್ಲ. ಅವಾಗಲೇ ಡ್ರಗ್ಸ್ ಪೆಡ್ಲರ್ ಪರಿಚಯ ಮಾಡಿಕೊಂಡಿದ್ದ ಆರೋಪಿ, ಅವರ ಮೂಲಕ ಡ್ರಗ್ಸ್ ಖರೀದಿಸಿ ಮಾರಾಟ ಮಾಡಲಾರಂಭಿಸಿದ್ದ’ ಎಂದೂ ತಿಳಿಸಿವೆ.

‘ದುಬೈನ ಹಲವರಿಗೆ ಆರೋಪಿ ಡ್ರಗ್ಸ್ ಮಾರುತ್ತಿದ್ದ. ಈತನ ಕೃತ್ಯ ಪತ್ತೆ ಮಾಡಿದ್ದ ದುಬೈ ಪೊಲೀಸರು, ಬಂಧಿಸಿ ಜೈಲಿಗಟ್ಟಿದ್ದರು. 3 ವರ್ಷ 8 ತಿಂಗಳು ಜೈಲುವಾಸ ಅನುಭವಿಸಿದ್ದ ಆರೋಪಿ, ನಂತರ ಬಿಡುಗಡೆ ಆಗಿದ್ದ. ಬಳಿಕ ಈತನನ್ನು ದುಬೈನಿಂದ ಗಡಿಪಾರು ಮಾಡಲಾಗಿತ್ತು’ ಎಂದು ಹೇಳಿವೆ.

ಆ್ಯಪ್ ಮೂಲಕ ಸಂಪರ್ಕ: ‘ದುಬೈನಿಂದ ಬೆಂಗಳೂರಿಗೆ ಬಂದಿದ್ದ ಆರೋಪಿ ಇಲ್ಲಿಯೇ ನೆಲೆಸಿ ಡ್ರಗ್ಸ್ ಮಾರಾಟ ಮುಂದುವರಿಸಿದ್ದ. ದುಬೈನ ಪೆಡ್ಲರ್‌ಗಳ ಮೂಲಕ ನಗರಕ್ಕೆ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಕೆಲ ಆ್ಯಪ್‌ಗಳ ಮೂಲಕ ಗ್ರಾಹಕರಿಗೆ ಡ್ರಗ್ಸ್ ಮಾರುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಆರೋಪಿ ಬಳಿ ಡ್ರಗ್ಸ್ ಖರೀದಿಸುತ್ತಿದ್ದರು. ಎಚ್‌ಬಿಆರ್ ಬಡಾವಣೆಯ ಉದ್ಯಾನ ಬಳಿ ಡ್ರಗ್ಸ್ ಮಾರುತ್ತಿದ್ದಾಗಲೇ ಪುರಾವೆ ಸಮೇತ ಆರೋಪಿಯನ್ನು ಬಂಧಿಸಲಾಯಿತು’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT