ಬೆಂಗಳೂರು: ‘ನಾನೊಬ್ಬ ಪೊಲೀಸ್ ಮಾಹಿತಿದಾರ. ನಾನು ಹೇಳಿದಂತೆ ಪೊಲೀಸರು ಕೇಳುತ್ತಾರೆ’ ಎಂದು ಹೇಳಿಕೊಂಡು ನಗರದೆಲ್ಲೆಡೆ ಸುತ್ತಾಡಿ ಡ್ರಗ್ಸ್ ಮಾರುತ್ತಿದ್ದ ಆರೋಪದಡಿ ರತನ್ ಲಾಲ್ (53) ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
‘ರಾಜರಾಜೇಶ್ವರಿನಗರದಲ್ಲಿ ವಾಸವಿದ್ದ ರತನ್ ಲಾಲ್, ಎಂಟು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಇತ್ತೀಚೆಗೆ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ತನ್ನನ್ನು ಬಂಧಿಸಲು ಬಂದಿದ್ದಾಗ ನಾಟಕ ಮಾಡಿ, ಅವರನ್ನೇ ಅಪಹರಣಕಾರರೆಂದು ಸುಳ್ಳು ಸುದ್ದಿ ಹಬ್ಬಿಸಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಡ್ರಗ್ಸ್ ಮಾರುತ್ತಿದ್ದ ಸಂಗತಿ ಬಯಲಾಯಿತು’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಆರೋಪಿ ಬಳಿ ಗಾಂಜಾ, ಅಫೀಮು ಹಾಗೂ ಏರ್ ಗನ್ ಸಿಕ್ಕಿದೆ. ಆರೋಪಿ ಕೃತ್ಯದಲ್ಲಿ ಕೆಲ ಪೊಲೀಸರು ಶಾಮೀಲಾಗಿರುವ ಮಾಹಿತಿ ಇದೆ’ ಎಂದು ತಿಳಿಸಿವೆ.
ಪೆಡ್ಲರ್ ಜೊತೆ ಒಡನಾಟ: ‘ಹೊರ ರಾಜ್ಯದಿಂದ ಬಂದು ನಗರದಲ್ಲಿ ನೆಲೆಸಿರುವ ಡ್ರಗ್ಸ್ ಪೆಡ್ಲರ್‌ಗಳ ಜೊತೆ ಆರೋಪಿ ಒಡನಾಟ ಹೊಂದಿದ್ದ. ‘ನಾನು ಪೊಲೀಸ್ ಮಾಹಿತಿದಾರ. ನಾನು ಕೇಳಿದಷ್ಟು ಡ್ರಗ್ಸ್ ಹಾಗೂ ಹಣ ಕೊಡಬೇಕು. ಇಲ್ಲದಿದ್ದರೆ, ಪೊಲೀಸರಿಗೆ ಮಾಹಿತಿ ನೀಡುತ್ತೇನೆ’ ಎಂದು ಪೆಡ್ಲರ್‌ಗಳನ್ನು ಬೆದರಿಸುತ್ತಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ತನ್ನ ಮಾತು ಕೇಳದವರ ಬಗ್ಗೆ ಆರೋಪಿ, ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ. ಆತನ ಮಾತು ನಂಬುತ್ತಿದ್ದ ಪೊಲೀಸರು, ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸುತ್ತಿದ್ದರು. ಡ್ರಗ್ಸ್ ಸಹ ಜಪ್ತಿ ಮಾಡುತ್ತಿದ್ದರು. ‘ನಾನೇ ಬಂಧಿಸುವಂತೆ ಮಾಡಿದ್ದೇನೆ’ ಎಂದು ಬೇರೆ ಡ್ರಗ್ಸ್ ಪೆಡ್ಲರ್‌ಗಳಿಗೆ ಹೇಳುತ್ತಿದ್ದ ಆರೋಪಿ, ಅವರಿಂದ ಹಣ ಹಾಗೂ ಡ್ರಗ್ಸ್ ಪಡೆಯತ್ತಿದ್ದ. ಡ್ರಗ್ಸ್ ಅನ್ನು ಗ್ರಾಹಕರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ’ ಎಂದೂ ತಿಳಿಸಿವೆ.
ಆರೋಪಿ ಹಿಡಿದುಕೊಟ್ಟ ಕರೆ: ‘ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದ್ದ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಲು ಕಾಮಾಕ್ಷಿಪಾಳ್ಯಕ್ಕೆ ಇತ್ತೀಚೆಗೆ ಬಂದಿದ್ದರು. ಆರೋಪಿಗೆ ಆತ್ಮಿಯನಾಗಿದ್ದ ರತನ್‌ಲಾಲ್ ಸ್ಥಳಕ್ಕೆ ಬಂದು, ಪೊಲೀಸರನ್ನೇ ಅಪಹರಣಕಾರರೆಂದು ಸುಳ್ಳು ಸುದ್ದಿ ಹಬ್ಬಿಸಿದ್ದ’ ಎಂದೂ ಮೂಲಗಳು ಹೇಳಿವೆ.
‘ಆರೋಪಿ ಹಾಗೂ ಪೊಲೀಸರ ನಡುವಿನ ಗಲಾಟೆ ನೋಡಿದ್ದ ಸ್ಥಳೀಯರೊಬ್ಬರು ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಹೋಗಿದ್ದ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಆರೋಪಿ ರತನ್ ಲಾಲ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದೂ ತಿಳಿಸಿವೆ.
‘ಬಿಜೆಪಿ ಶಾಸಕನ ಪತ್ನಿ ತಮ್ಮ’
‘ಠಾಣೆಯಲ್ಲಿ ಕೂಗಾಡಿದ್ದ ರತನ್ ಲಾಲ್, ‘ನಾನು ಬಿಜೆಪಿ ಶಾಸಕರೊಬ್ಬರ ಪತ್ನಿಯ ತಮ್ಮ. ನನ್ನನ್ನು ಠಾಣೆಯಲ್ಲಿ ಕೂರಿಸಿದ್ದಕ್ಕೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಪೊಲೀಸರನ್ನು ಬೆದರಿಸಿದ್ದ’ ಎಂದೂ ಮೂಲಗಳು ಹೇಳಿವೆ.
ಪೌಡರ್ ಡಬ್ಬಿಯಲ್ಲಿ ಹೆರಾಯಿನ್: ಆರೋಪಿ ಬಂಧನ
ಡ್ರಗ್ಸ್ ಮಾರಾಟ ಆರೋಪದಡಿ ಸುಹೇಲ್ (34) ಎಂಬಾತನನ್ನು ಬಂಧಿಸಿರುವ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಠಾಣೆ ಪೊಲೀಸರು, ಪೌಡರ್ ಹಬ್ಬಿಯಲ್ಲಿ ಹೆರಾಯಿನ್ ಡ್ರಗ್ಸ್ ಬಚ್ಚಿಟ್ಟು ನಗರಕ್ಕೆ ತಂದು ಮಾರುತ್ತಿದ್ದನೆಂಬ ಸಂಗತಿಯನ್ನು ಪತ್ತೆ ಮಾಡಿದ್ದಾರೆ.
‘ಎಚ್‌ಬಿಆರ್ ಲೇಔಟ್‌ಗೆ ಬಂದಿದ್ದ ಆರೋಪಿ ಸುಹೇಲ್, ಹೆರಾಯಿನ್ ಪೊಟ್ಟಣಗಳನ್ನು ಗ್ರಾಹಕರಿಗೆ ಮಾರಲು ಯತ್ನಿಸುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆತನನ್ನು ಬಂಧಿಸಲಾಗಿದೆ. ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.
‘₹ 2 ಲಕ್ಷ ಮೌಲ್ಯದ ಹೆರಾಯಿನ್ ಹಾಗೂ ಪೌಡರ್ ಡಬ್ಬಿಯನ್ನು ಜಪ್ತಿ ಮಾಡಲಾಗಿದೆ. ಆರೋಪಿ ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ' ಎಂದೂ ತಿಳಿಸಿವೆ.
ವಿಮಾನದಲ್ಲಿ ಸಾಗಣೆ: ‘ಮಣಿಪುರದ ಬಿಷ್ಣುಪುರ ಜಿಲ್ಲೆಯ ಗ್ರಾಮದಲ್ಲಿ ಆರೋಪಿ ಹೆರಾಯಿನ್ ಖರೀದಿಸುತ್ತಿದ್ದ. ಅದನ್ನೇ ಪೌಡರ್ ಡಬ್ಬಿಯಲ್ಲಿ ತುಂಬಿ, ಯಾರಿಗೂ ಅನುಮಾನ ಬಾರದಂತೆ ನಗರಕ್ಕೆ ತರುತ್ತಿದ್ದ’ ಎಂದೂ ಮೂಲಗಳು ಹೇಳಿವೆ.
‘ಪ್ರತಿ ಬಾರಿಯೂ ಆರೋಪಿ ವಿಮಾನದಲ್ಲಿ ನಗರಕ್ಕೆ ಬರುತ್ತಿದ್ದ. ನಗರದಲ್ಲೇ ವಸತಿಗೃಹದಲ್ಲಿ ವಾಸವಿದ್ದುಕೊಂಡು, ಚಿಕ್ಕ ಪೊಟ್ಟಣಗಳಲ್ಲಿ ಹೆರಾಯಿನ್ ತುಂಬುತ್ತಿದ್ದ. ಅದೇ ಪೊಟ್ಟಣಗಳನ್ನು ಗ್ರಾಹಕರಿಗೆ ಮಾರುತ್ತಿದ್ದ’ ಎಂದೂ ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.