ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಹೇಳನಕಾರಿ ಹೇಳಿಕೆ: ಸಂಪುಟದಿಂದ ಮಲ್ಲಿಕಾರ್ಜುನ್‌ ವಜಾಕ್ಕೆ ಆಗ್ರಹ

ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ: ಬಂಧಿಸಲು ಒತ್ತಾಯ
Published 24 ಆಗಸ್ಟ್ 2023, 15:20 IST
Last Updated 24 ಆಗಸ್ಟ್ 2023, 15:20 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ  ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ ಅವರನ್ನು ಬಂಧಿಸಬೇಕು’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಗುರುವಾರ ಅವರ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

‘ಮಲ್ಲಿಕಾರ್ಜುನ್‌ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಬೇಕು. ಪರಿಶಿಷ್ಟ ಜಾತಿ, ಪಂಗಡಗಳ ದೌರ್ಜನ್ಯ ಕಾಯ್ದೆ ಹಾಗೂ ಸಿಆರ್‌ಪಿಸಿ ನಿಯಮಗಳನ್ನು ಉಲ್ಲಂಘಿಸಿದ ವಿಧಾನಸೌಧ ಪೊಲೀಸ್‌ ಠಾಣೆಯ ಎಸಿಪಿ ಮತ್ತು ಡಿಸಿಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಎನ್. ಮೂರ್ತಿ ಆಗ್ರಹಿಸಿದರು.

ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಪದ ಬಳಕೆ ಮಾಡುವ ವೇಳೆ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಬೇಕು. ಜಾತಿ ವ್ಯವಸ್ಥೆ ಹಿನ್ನೆಲೆ ಇರುವ ಗಾದೆ ಮಾತುಗಳು, ನಾಣ್ನುಡಿಗಳಲ್ಲಿರುವ ಜಾತಿ ಆಧಾರಿತ ಪೂರ್ವಗ್ರಹಪೀಡಿತ ಪದಗಳನ್ನು ಸಾರ್ವಜನಿಕವಾಗಿ ಬಳಸದಂತೆ ನಿಷೇಧಿಸಬೇಕು ಎಂದು ಸಮತಾ ಸೈನಿಕ ದಳದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಒತ್ತಾಯಿಸಿದರು.

‘ನಟ ಉಪೇಂದ್ರ ಮತ್ತು ಸಚಿವರು ಜಾತಿ ವ್ಯವಸ್ಥೆಯನ್ನು ಪೋಷಿಸುವ ಮೇಲು–ಕೀಳು ಎಂಬ ಮನಸ್ಥಿತಿ ಹೊಂದಿದ್ದಾರೆ. ಇದರಿಂದ, ದಲಿತ ಸಮಾಜಕ್ಕೆ ನೋವಾಗಿದೆ. ಜತೆಗೆ ಸಂವಿಧಾನದ ಆಶಯಗಳಿಗೆ ಧಕ್ಕೆ ತಂದಿದ್ದಾರೆ. ಸಮಾಜದಲ್ಲಿ ಈ ರೀತಿಯ ಹೇಳಿಕೆಗಳು ಮತ್ತೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಕೂಡಲೇ ಅವರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ  ಸಮಾಜ ಕಲ್ಯಾಣ ಇಲಾಖೆಯ ಆಯಕ್ತ ರಾಕೇಶ್ ಕುಮಾರ್ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರ ಸಲ್ಲಿಸಿದರು.

ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ, ಚಿ.ನಾ. ರಾಮು, ಯಶೋಧಾ ಪಿ., ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT