ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಖಾಘಾತ: ನಿರ್ವಹಣೆಗೆ ಸಿದ್ಧತೆ

ಚಿಕಿತ್ಸೆಗೆ ಜಿಲ್ಲಾ, ತಾಲ್ಲೂಕು ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮೀಸಲು
Published 5 ಏಪ್ರಿಲ್ 2024, 23:53 IST
Last Updated 5 ಏಪ್ರಿಲ್ 2024, 23:53 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ತಾಪಮಾನ ಹೆಚ್ಚುತ್ತಿದೆ. ಶಾಖಾಘಾತ ಸೇರಿದಂತೆ ಯಾವುದೇ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರಬೇಕು’ ಎಂದು ಆರೋಗ್ಯ ಇಲಾಖೆಯು ಅಧಿಕಾರಿಗಳಿಗೆ ಸೂಚಿಸಿದೆ.

ಬಿಸಿಲು ಹೆಚ್ಚಳಕ್ಕೆ ಸಂಬಂಧಿಸಿದ ಅನಾರೋಗ್ಯ ಪ್ರಕರಣ ನಿರ್ವಹಿಸಲು ‘ಶಾಖಾಘಾತ ನಿರ್ವಹಣಾ ಕೊಠಡಿ’ ಆರಂಭಿಸಲಾಗಿದೆ. ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ ಐದು, ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ ಎರಡು ಹಾಸಿಗೆಗಳನ್ನು ಮೀಸಲು ಇಡಲಾಗಿದೆ.

‘ಬಾಗಲಕೋಟೆ, ಕಲಬುರಗಿಯಲ್ಲಿ ತಲಾ ಒಬ್ಬರು ಶಾಖಾಘಾತದಿಂದ ಮೃತಪಟ್ಟಿದ್ದಾರೆಂದು ಶಂಕಿಸಲಾಗಿತ್ತು. ಅವರಿಬ್ಬರು ಬೇರೆ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಆಯಾ ಜಿಲ್ಲೆಯ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಶಾಖಾಘಾತದಿಂದ ಯಾವುದೇ ಸಾವು ಸಂಭವಿಸಿಲ್ಲ. ಶಾಖಾಘಾತಕ್ಕೆ ಸಂಬಂಧಿಸಿದ ಪ್ರಕರಣಗಳು ಕಂಡುಬಂದರೆ ಕೇಂದ್ರ ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲಿಸುವಂತೆ ತಿಳಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್‌ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಶಾಖಾಘಾತಕ್ಕೆ ಸಂಬಂಧಿಸಿದಂತೆ 521 ಪ್ರಕರಣಗಳು ಇದುವರೆಗೂ ವರದಿಯಾಗಿವೆ. ಈ ರೀತಿಯ ಪ್ರಕರಣಗಳಲ್ಲಿ ಹೆಚ್ಚಿನ ನಿಗಾ ವಹಿಸಲು ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಾಪಮಾನ ಹೆಚ್ಚಳದಿಂದ ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಅಗ್ನಿ ಅವಘಡಗಳಿಗೆ ಚಿಕಿತ್ಸೆ ನೀಡಲು ಸನ್ನದ್ಧವಾಗಿರುವಂತೆ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಏಪ್ರಿಲ್‌ 4ರ ವರೆಗೆ ಒಟ್ಟು ಆರು (ಬಿಬಿಎಂಪಿ ವ್ಯಾಪ್ತಿಯಲ್ಲಿ 3, ಬೆಂಗಳೂರು ನಗರ 1, ರಾಮನಗರ 1) ಕಾಲರಾ ಪ್ರಕರಣಗಳು ದೃಢಪಟ್ಟಿವೆ. ಮಾರ್ಚ್‌ನಲ್ಲೇ ಐದು ಪ್ರಕರಣಗಳು ವರದಿಯಾಗಿವೆ. ಹಿಂದಿನ ಮೂರು ವರ್ಷಗಳ ಮೊದಲ ತ್ರೈಮಾಸಿಕದ ಅಂಕಿ–ಅಂಶಗಳಿಗೆ ಹೋಲಿಸಿದರೆ ವಾಂತಿ–ಭೇದಿ, ಕಾಲರಾ ಪ್ರಕರಣಗಳಲ್ಲಿ ಯಾವುದೇ ಏರಿಕೆಯಾಗಿಲ್ಲ. ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಹಾಗೂ ತಾಪಮಾನ ಹೆಚ್ಚಳ ಕಾರಣದಿಂದ ಅತಿಸಾರ, ಕಾಲರಾ, ವಾಂತಿ– ಭೇದಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇಂತಹ ಪ್ರಕರಣಗಳು ವರದಿಯಾದರೆ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಅಗತ್ಯ ಔಷಧ ದಾಸ್ತಾನಿದೆ’ ಎಂದು ಮಾಹಿತಿ ನೀಡಿದರು.

*ಶಾಖಾಘಾತದಿಂದ ಯಾರೊಬ್ಬರೂ ಮೃತಪಟ್ಟಿಲ್ಲ *ಶಾಖಾಘಾತಕ್ಕೆ ಸಂಬಂಧಿಸಿ 521 ಪ್ರಕರಣ *ಕಾಲರಾ ‍ಪ್ರಕರಣ ಏರಿಕೆಯಾಗಿಲ್ಲ

ಗರಿಷ್ಠ ತಾಪಮಾನ (ಡಿಗ್ರಿ ಸೆಲ್ಸಿಯಸ್‌ನಲ್ಲಿ);ಜಿಲ್ಲೆಗಳು

42.1ಕ್ಕಿಂತ ಅಧಿಕ; ರಾಯಚೂರು, ಕಲಬುರಗಿ, ಯಾದಗಿರಿ, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೀದರ್‌, ಕೊಪ್ಪಳ, ಗದಗ, ತುಮಕೂರು, ಉತ್ತರ ಕನ್ನಡ ಮತ್ತು ಮೈಸೂರು

40.1ರಿಂದ 42; ವಿಜಯನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿತ್ರದುರ್ಗ, ಚಿಕ್ಕಮಗಳೂರು, ರಾಮನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾವೇರಿ, ಧಾರವಾಡ ಮತ್ತು ದಾವಣಗೆರೆ

38.1ರಿಂದ 40; ದಕ್ಷಿಣ ಕನ್ನಡ, ಹಾಸನ, ಉಡುಪಿ, ಕೋಲಾರ

36.1ರಿಂದ 38; ಕೊಡಗು

ಏ.5ರ ಬೆಳಿಗ್ಗೆ 8ರಿಂದ ಮಧ್ಯಾಹ್ನ 3.30ರ ವರೆಗಿನ ಉಷ್ಣಾಂಶ (ಆಧಾರ: ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT