ಶನಿವಾರ, ಮೇ 28, 2022
31 °C
ವಿ.ವಿಗಳಲ್ಲಿ ಸುಗಮ ಪರೀಕ್ಷಾ ವ್ಯವಸ್ಥೆಗೆ ಹೊಸ ತಂತ್ರಾಂಶ

ಅಂಕಪಟ್ಟಿ, ಪ್ರಮಾಣಪತ್ರಕ್ಕೆ ‘ಇ-ಸಹಮತಿ’ – ಸಚಿವ ಅಶ್ವತ್ಥನಾರಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಸುಗಮಗೊಳಿಸಲು ‘ಇ-ಸಹಮತಿ’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಇದರಿಂದ  ನಕಲಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳ ದಂಧೆಗೆ ಕಡಿವಾಣ ಬೀಳಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸೌಧದಲ್ಲಿ ಹೊಸ ತಂತ್ರಾಂಶಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಈ ವ್ಯವಸ್ಥೆಯಿಂದ ವಿಶ್ವವಿದ್ಯಾಲಯಗಳು ಪರೀಕ್ಷೆ ಮತ್ತು ಅಂಕಪಟ್ಟಿಗಳಿಗಾಗಿ ಖರ್ಚು ಮಾಡುತ್ತಿದ್ದ ಸುಮಾರು ₹ 60 ಕೋಟಿ ಉಳಿತಾಯ ಆಗಲಿದೆ. ಮಾನ್ಯತೆ ಹೊಂದಿರುವ 3,400ಕ್ಕೂ ಹೆಚ್ಚು ಕಾಲೇಜುಗಳ 16 ಲಕ್ಷ ವಿದ್ಯಾರ್ಥಿಗಳಿಗೆ ಲಾಭ ಆಗಲಿದೆ’ ಎಂದರು.

‘ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ತಂತ್ರಾಂಶ ಯೋಜನೆಯಡಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. 10 ಮಾಡ್ಯೂಲ್‌ಗಳನ್ನು ಒಳಗೊಂಡಿರುವ ಈ ಯೋಜನೆಯಡಿ 2021ರ ಆಗಸ್ಟ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರವೇಶಾತಿ, ಶೈಕ್ಷಣಿಕ ಹಾಗೂ ತರಗತಿ ನಿರ್ವಹಣೆ ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಉಳಿದವುಗಳನ್ನು ಜೂನ್ ವೇಳೆಗೆ ಅಳವಡಿಸಲಾಗುವುದು. ಇದರ ಅನುಷ್ಠಾನಕ್ಕೆ ಸಹಾಯವಾಣಿ ವ್ಯವಸ್ಥೆಯೂ ಇರಲಿದೆ. ಇಂಥ ವ್ಯವಸ್ಥೆ ಬೇರೆ ಯಾವ ರಾಜ್ಯದಲ್ಲೂ ಇಲ್ಲ’ ಎಂದರು.

‘ವಿದ್ಯಾರ್ಥಿಗಳು ಪದವಿ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದರೆ ಅಥವಾ ಮರುಪ್ರವೇಶ ಬಯಸಿದರೆ ಅದಕ್ಕೂ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಅಗತ್ಯವೆನಿಸಿದಾಗ ಪ್ರಮಾಣಪತ್ರಗಳನ್ನು ಪಡೆಯಬಹುದು. ಅಲ್ಲದೆ, ಪರೀಕ್ಷೆಗೆ ಸಂಬಂಧಿಸಿದ ದತ್ತಾಂಶಗಳನ್ನು ರಾಷ್ಟ್ರೀಯ ಶೈಕ್ಷಣಿಕ ಸಾಧನಾ ಭಂಡಾರಕ್ಕೆ (ನ್ಯಾಷನಲ್ ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್- ಎನ್ಎಬಿಸಿ) ಸೇರಿಸಲು ಹಾಗೂ ಉದ್ಯೋಗದಾತರ ಜತೆಗೆ ಅಂಕಪಟ್ಟಿ ಹಂಚಿಕೊಳ್ಳಲು ಅವಕಾಶವಿದೆ. ಇವೆಲ್ಲವೂ ಎನ್ಕ್ರಿಪ್ಟೆಡ್ ರೂಪದಲ್ಲಿ ಇರಲಿದ್ದು, ಪ್ರತೀ ಸೆಮಿಸ್ಟರಿನ ಅಂಕಪಟ್ಟಿಗಳನ್ನು ನೇರವಾಗಿ ‘ಡಿಜಿಲಾಕರ್-ಎನ್ಎಡಿ’ಗೆ ವರ್ಗಾಯಿಸಬಹುದು. ಈ ಪ್ರಕ್ರಿಯೆಯಲ್ಲಿ ಭದ್ರತೆ ಮತ್ತು ಗೌಪ್ಯತೆ ಕಾಯ್ದುಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಇ-ಆಡಳಿತ ಕೇಂದ್ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ತಿಮ್ಮೇಗೌಡ ಮತ್ತು ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು, ಕುಲಸಚಿವರು ಇದ್ದರು. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪಿ. ಪ್ರದೀಪ್ ವರ್ಚುವಲ್ ಮೂಲಕ ಹಾಜರಾದರು.

ಪರೀಕ್ಷಾ ಶುಲ್ಕದ ಹೊರೆ ಇಳಿಕೆ

‘ಸರ್ಕಾರಿ ಸ್ವಾಮ್ಯದ 24 ವಿಶ್ವವಿದ್ಯಾಲಯಗಳ ಪೈಕಿ ಎರಡು ವಿಶ್ವವಿದ್ಯಾಲಯಗಳು ಪರೀಕ್ಷಾ ನಿರ್ವಹಣೆಯ ತಂತ್ರಾಂಶಗಳನ್ನು ಹೊಂದಿದ್ದರೆ, ಎಂಟು ವಿಶ್ವವಿದ್ಯಾಲಯಗಳಲ್ಲಿ ಈ ತಂತ್ರಾಂಶಗಳಿಲ್ಲ. ಇವುಗಳು ಹೊರಗುತ್ತಿಗೆಯನ್ನು ನೆಚ್ಚಿಕೊಂಡಿವೆ. ‘ಇ-ಸಹಮತಿ’ ಮೂಲಕ ಡಿಜಿಟಲ್ ಮೌಲ್ಯಮಾಪನ, ಆನ್‌ಲೈನ್‌ ಮೂಲಕ ಪ್ರಶ್ನೆಪತ್ರಿಕೆ, ಪ್ರವೇಶಪತ್ರ, ವೇಳಾಪಟ್ಟಿ, ಪರೀಕ್ಷಾ ಶುಲ್ಕ ಪಾವತಿ, ಪ್ರಯೋಗಾಲಯಗಳ ತಂಡಗಳ ನಿರ್ವಹಣೆ, ಅಂಕಪಟ್ಟಿ ಪೂರೈಕೆ ಸಾಧ್ಯವಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದ ಹೊರೆ ಕಡಿಮೆ ಆಗಲಿದೆ’ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು