ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಉಪನಗರ ರೈಲ್ವೆ ಕಾರಿಡಾರ್‌–1ಕ್ಕೆ ಗ್ರಹಣ

ಅಕ್ಟೋಬರ್‌ಗೆ ಮುಗಿಯಬೇಕಿದ್ದ ಕಾಮಗಾರಿಗೆ ಚಾಲನೆಯೇ ದೊರೆತಿಲ್ಲ
Published 19 ಆಗಸ್ಟ್ 2023, 23:20 IST
Last Updated 19 ಆಗಸ್ಟ್ 2023, 23:20 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಉಪನಗರ ರೈಲ್ವೆ ಕಾರಿಡಾರ್‌–1 ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲ.

ಈ ಮೊದಲಿನ ಯೋಜನೆ ಪ್ರಕಾರವೇ ನಡೆದಿದ್ದರೆ ಈ ವರ್ಷದ ಅಕ್ಟೋಬರ್‌ಗೆ ಪೂರ್ಣಗೊಳ್ಳಬೇಕಿತ್ತು. ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಶ್ರೀರಾಂಪುರ, ಮಲ್ಲೇಶ್ವರ, ಯಶವಂತಪುರ, ಮುತ್ಯಾಳ, ಲೊಟ್ಟೆಗೊಲ್ಲಹಳ್ಳಿ, ಕೊಡಿಗೆಹಳ್ಳಿ, ಜ್ಯುಡಿಶಿಯಲ್‌ ಲೇಔಟ್‌, ಯಲಹಂಕ, ನಿಟ್ಟೆ ಮೀನಾಕ್ಷಿ, ಬೆಟ್ಟಹಲಸೂರು, ದೊಡ್ಡಜಾಲ ಮೂಲಕ ವಿಮಾನ ನಿಲ್ದಾಣ ಟರ್ಮಿನಲ್‌ಗೆ ಕಾರಿಡಾರ್‌–1 ಸಂಪರ್ಕಿಸಲಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಮತ್ತು ಅಲ್ಲಿಂದ ಬರುವವರಿಗೆ ಅನುಕೂಲವಾಗಲಿದೆ.

2018ರಲ್ಲಿ ಘೋಷಣೆಯಾಗಿ, 2020ರಲ್ಲಿ ಮಂಜೂರಾಗಿದ್ದರೂ ಕೋವಿಡ್‌ ಇನ್ನಿತರ ಕಾರಣದಿಂದ ಎರಡು ವರ್ಷಗಳ ಕಾಲ ಕಾಮಗಾರಿಗೆ ಚಾಲನೆ ಸಿಕ್ಕಿರಲಿಲ್ಲ. 2022ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಮೂಲ ಯೋಜನೆಯ ಪ್ರಕಾರ ಮೊದಲು ಕಾರಿಡಾರ್‌–1 ಕಾಮಗಾರಿಯನ್ನು ಕೈಗೆತ್ತಿಕೊಂಡು 2023ರ ಅಕ್ಟೋಬರ್‌ಗೆ ಮುಕ್ತಾಯಗೊಳಿಸಬೇಕಿತ್ತು. ಎಲ್ಲ ನಾಲ್ಕು ಕಾರಿಡಾರ್‌ಗಳನ್ನು 40 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಪ್ರಧಾನಿ ತಿಳಿಸಿದ್ದರು. ಆದರೂ ನಾಲ್ಕು ಕಾರಿಡಾರ್‌ಗಳಲ್ಲಿ ಹೆಚ್ಚು ಅಗತ್ಯ ಇರುವ ಕಾರಿಡಾರ್‌–1 ಕಾಮಗಾರಿ ಶುರುವಾಗಿಲ್ಲ.

ಬಿಎಂಆರ್‌ಸಿಎಲ್‌ ನಿರ್ಮಾಣ ಮಾಡುತ್ತಿರುವ ನೀಲಿ ಮಾರ್ಗವು ದೇವನಹಳ್ಳಿಯನ್ನು ಸಂಪರ್ಕಿಸಲಿದೆ ಎಂಬ ಕಾರಣಕ್ಕೆ ಈ ಕಾರಿಡಾರ್‌–1 ಅನ್ನು ತಡಮಾಡಲಾಗುತ್ತಿದೆ. ಮೆಟ್ರೊ ಮಾರ್ಗ ಮತ್ತು ಉಪನಗರ ರೈಲು ಮಾರ್ಗವು ನಗರದ ಬೇರೆ ದಿಕ್ಕುಗಳಲ್ಲಿ ಸಾಗಲಿದ್ದರೂ ತಡಮಾಡಲಾಗುತ್ತಿದೆ.

ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಪ್ರಾರಂಭವಾಗುವ ಮೆಟ್ರೊ ನೀಲಿ ಮಾರ್ಗವು ಕೆ.ಆರ್‌.ಪುರ, ನಾಗವಾರ, ಯಲಹಂಕದ ಮೂಲಕ ದೇವನಹಳ್ಳಿ ಕಡೆಗೆ ಸಾಗುತ್ತದೆ. ಉಪನಗರ ರೈಲ್ವೆ ಯೋಜನೆಯ ಕಾರಿಡಾರ್‌–1 ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಮಲ್ಲೇಶ್ವರ, ಯಶವಂತಪುರ, ಯಲಹಂಕ ಮೂಲಕ ಸಾಗುತ್ತದೆ. ನಗರದ ದಕ್ಷಿಣ ಭಾಗದಿಂದ ಮೆಟ್ರೊ ರೈಲು, ಉತ್ತರ ಭಾಗದಿಂದ ಉಪನಗರ ಕಾರಿಡಾರ್‌–1 ಸಾಗುವುದರಿಂದ ಎರಡರಲ್ಲೂ ಬೇರೆಯೇ ಪ್ರಯಾಣಿಕರು ತೆರಳಲಿದ್ದಾರೆ. 

ಯೋಜನೆಯ ಮೂಲ ಅವಧಿಯಲ್ಲಿ ಅಲ್ಲದೇ ಇದ್ದರೂ ಪ್ರಧಾನಿ ಘೋಷಿಸಿರುವ ಸಮಯ 2025ರ ಅಕ್ಟೋಬರ್‌ಗೆ ಮುಗಿಸಲು ಪ್ರಯತ್ನಿಸಬೇಕು. ಇಲ್ಲದೇ ಇದ್ದರೆ ಈ ಯೋಜನೆಯನ್ನು ವಹಿಸಿಕೊಂಡಿರುವ ಕೆ–ರೈಡ್‌ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ) ಅಧಿಕಾರಿಗಳು ಈಗ ಪುನರ್‌ನಿಗದಿ ಮಾಡಿಕೊಂಡಿರುವ ಅವಧಿಯಂತೆ 2026ರ ಅಕ್ಟೋಬರ್‌ಗಾದರೂ ಕಾಮಗಾರಿ ಪೂರ್ಣಗೊಳಿಸಬೇಕು. ಈ ಗುರಿ ತಲುಪಬೇಕಿದ್ದರೆ ಕಾರಿಡಾರ್‌–1ನ್ನು ಮೂರನೇ ಆದ್ಯತೆಯಾಗಿ ಪರಿಗಣಿಸದೇ ಮೊದಲ ಆದ್ಯತೆ ನೀಡಿ ಕಾಮಗಾರಿ ಆರಂಭಿಸಬೇಕು ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್‌ ಸಂಸ್ಥಾಪಕ ರಾಜಕುಮಾರ್ ದುಗರ್ ಒತ್ತಾಯಿಸಿದರು.

ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ
ರಾಜಕುಮಾರ್ ದುಗರ್
ರಾಜಕುಮಾರ್ ದುಗರ್

ವೇಗವಾಗಿ ಸಾಗಲಿರುವ ಉಪನಗರ ರೈಲು

ಮೆಟ್ರೊ ಸರಾಸರಿ ಒಂದೂವರೆ ಕಿಲೋಮೀಟರ್‌ಗೆ ಒಂದು ನಿಲ್ದಾಣ ಇದ್ದರೆ ಉಪನಗರ ಯೋಜನೆಯಲ್ಲಿ ಸರಾಸರಿ ಎರಡೂವರೆ ಕಿಲೋಮೀಟರ್‌ಗೆ ಒಂದು ನಿಲ್ದಾಣ ಇರಲಿದೆ. ಅಲ್ಲದೇ ಮೆಟ್ರೊ 58 ಕಿಲೋಮೀಟರ್‌ ಕ್ರಮಿಸುವ ಹಾದಿಯಾದರೆ ಉಪನಗರ ರೈಲು 41 ಕಿಲೋಮೀಟರ್‌ ಕ್ರಮಿಸುವ ಹಾದಿ. ಹಾಗಾಗಿ ಕಾರಿಡಾರ್‌ ಕಾಮಗಾರಿಗಳು ಮುಗಿದು ಉಪನಗರ ರೈಲು ಆರಂಭಗೊಂಡರೆ ಮೆಟ್ರೊ ರೈಲಿಗಿಂತ ವೇಗವಾಗಿ ಸಾಗಲಿದೆ. ಕನಿಷ್ಠ ಅರ್ಧ ಗಂಟೆ ಮೊದಲು ದೇವನಹಳ್ಳಿಗೆ ತಲುಪಲಿದೆ.

ಆಡಳಿತಾತ್ಮಕ ತಾಂತ್ರಿಕ ಸಮಸ್ಯೆ ಕೋವಿಡ್‌ ಕಾರಣ’

ದೇಶದಲ್ಲಿಯೇ ರೈಲ್ವೆ ಇಲಾಖೆಯ ಮೊದಲ ಉಪನಗರ ಯೋಜನೆ ಇದಾಗಿರುವುದರಿಂದ ಆಡಳಿತಾತ್ಮಕ ತಾಂತ್ರಿಕ ಸಮಸ್ಯೆಗಳಿಂದ ಸ್ವಲ್ಪ ತಡವಾಯಿತು. ಕೋವಿಡ್‌ ಕೂಡಾ ಇದೇ ಸಮಯದಲ್ಲಿ ಬಂದಿದ್ದರಿಂದ ಸಮಸ್ಯೆಯಾಯಿತು. ರೈಲ್ವೆ ಅಧಿಕಾರಿಗಳು ಕೆ–ರೈಡ್‌ ಅಧಿಕಾರಿಗಳು ಬಹಳ ಮುತುವರ್ಜಿಯಿಂದ ಕೆಲಸ ಮಾಡುತ್ತಿದ್ದಾರೆ. 2026ರ ಒಳಗೆ ಕಾಮಗಾರಿ ಮುಗಿಯಲಿವೆ. ಕಾರಿಡಾರ್‌–1 ಆರಂಭಿಸಬೇಕಿತ್ತು. ಆದರೆ ಅದೇ ಸಮಯದಲ್ಲಿ ಮೆಟ್ರೊ ಸಂಪರ್ಕ ಮಾರ್ಗವೂ ಆಗುತ್ತಿರುವುದರಿಂದ ಕಾರಿಡಾರ್‌–2 (ಚಿಕ್ಕಬಾಣಾವರ–ಬೈಯಪ್ಪನಹಳ್ಳಿ) ಮೊದಲು ಆರಂಭಿಸಿದ್ದೇವೆ. ಕಾರಿಡಾರ್‌–3 (ಕೆಂಗೇರಿ–ಬೆಂಗಳೂರು ನಗರ) ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಶೀಘ್ರದಲ್ಲಿ ಈ ಕಾಮಗಾರಿ ಆರಂಭಗೊಳ್ಳಲಿದೆ. ಆನಂತರ ಕಾರಿಡಾರ್‌–1 ಆರಂಭಿಸುತ್ತೇವೆ. ಈ ಕಾಮಗಾರಿ ಮುಗಿದ ಮೇಲೆಯೇ ಇನ್ನೊಂದು ಕಾಮಗಾರಿ ಆರಂಭವಾಗುವುದಲ್ಲ. ಒಂದು ಕಾಮಗಾರಿ ನಡೆಯುತ್ತಿರುವಾಗಲೇ ಇನ್ನೊಂದು ಕಾರಿಡಾರ್‌ನ ಕಾಮಗಾರಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಆರಂಭಿಸುತ್ತೇವೆ.  ನಾಲ್ಕು ಕಾಮಗಾರಿಗಳು ಮುಗಿದಾಗ 10 ಲಕ್ಷ ಜನರು ನಿತ್ಯ ಈ ರೈಲುಗಳಲ್ಲಿ ಸಂಚರಿಸಲಿದ್ದಾರೆ. 
–ಎಂ.ಬಿ. ಪಾಟೀಲ ಮೂಲಸೌಕರ್ಯ ಅಭಿವೃದ್ಧಿ ಸಚಿವ

‘ಕೈ ಕಟ್ಟಿ ಹಾಕಲಾಗಿದೆ’

ಕಾರಿಡಾರ್‌–1 ಆರಂಭಿಸಬೇಕು ಎಂದು ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್‌ಟಿ) ವರದಿ ನೀಡಿತ್ತು. ಕೆ–ರೈಡ್‌ ಅಧಿಕಾರಿಗಳೂ ತಯಾರಿದ್ದರು. ಆದರೆ ರೈಲ್ವೆ ಕೇಂದ್ರ ರಾಜ್ಯ ಸರ್ಕಾರಗಳು ಅನುಮತಿ ನೀಡಿದಂತೆ ಕೆ–ರೈಡ್‌ ಕೆಲಸ ಮಾಡಬೇಕಾಗುತ್ತದೆ. ಕೆ–ರೈಡ್‌ ಅನ್ನು ಕೈಕಟ್ಟಿದಂತಾಗಿದೆ. ಕಾರಿಡಾರ್‌–1ಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಪ್ರಸ್ತಾವವನ್ನು ಕೂಡಲೇ ಅನುಮೋದನೆ ಮಾಡಿದರೆ ಕಾಮಗಾರಿಗಳು ಆರಂಭವಾಗುತ್ತವೆ. ಇಲಾಖೆಗಳ ನಡುವೆ ಸಂವಹನ ವೇಗವಾಗಬೇಕು. –ರಾಜಕುಮಾರ್ ದುಗರ್ ಸಿಟಿಜನ್ಸ್‌ ಫಾರ್‌ ಸಿಟಿಜನ್‌ ಸಂಸ್ಥಾಪಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT