ಬೆಂಗಳೂರು: ಠೇವಣಿದಾರರಿಗೆ ₹ 199.54 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ಹಿಂದುಸ್ತಾನ್ ಇನ್‌ಫ್ರಾಕಾನ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ₹ 71.48 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮುಟ್ಟುಗೋಲು ಹಾಕಿಕೊಂಡಿದೆ.
2010ರಿಂದ 2015ರ ಅವಧಿಯಲ್ಲಿ ಹಿಂದುಸ್ತಾನ್ ಇನ್‌ಫ್ರಾಕಾನ್ ಕಂಪನಿಯು ಹೆಚ್ಚಿನ ಬಡ್ಡಿ ನೀಡುವ ಆಮಿಷವೊಡ್ಡಿ ಸಾರ್ವಜನಿಕರಿಂದ ₹ 389 ಕೋಟಿಯಷ್ಟು ಠೇವಣಿ ಸಂಗ್ರಹಿಸಿತ್ತು. ಈ ಪೈಕಿ ₹ 199.54 ಕೋಟಿಯನ್ನು ಠೇವಣಿದಾರರಿಗೆ ಹಿಂದಿರುಗಿಸದೇ ವಂಚಿಸಿತ್ತು. ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಂಪನಿ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಇ.ಡಿ ಪ್ರತ್ಯೇಕ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
ಮೈಸೂರು, ಬೆಂಗಳೂರು ಮತ್ತು ಆಂಧ್ರಪ್ರದೇಶದ ಅನಂತಪುರದಲ್ಲಿ ಹಿಂದುಸ್ತಾನ್ ಇನ್‌ಫ್ರಾಕಾನ್ ಕಂಪನಿಯು ಹೊಂದಿದ್ದ ₹ 71.48 ಕೋಟಿ ಮೌಲ್ಯದ ಕೃಷಿಯೇತರ ಜಮೀನು ಹಾಗೂ ವಸತಿ ಕಟ್ಟಡಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಠೇವಣಿದಾರರಿಂದ ಕಂಪನಿ ಸಂಗ್ರಹಿಸಿದ್ದ ಮೊತ್ತವನ್ನು ಭಾರತ್ ಬಿಲ್ಡರ್ಸ್, ಹಿಂದುಸ್ತಾನ್ ಮೆಗಾ ಶಾಫಿ ಇಂಡಿಯಾ ಲಿಮಿಟೆಡ್ (ಸಹವರ್ತಿ ಸಂಸ್ಥೆ), ವಜ್ರ ಪ್ರಾಪರ್ಟೀಸ್ ಮತ್ತು ಕೆ. ಲಲಿತಾ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು. ಆ ಮೊತ್ತವನ್ನು ಬಳಸಿಕೊಂಡು ಸ್ಥಿರಾಸ್ತಿ ಖರೀದಿಸಿದ್ದರು. ವೈಯಕ್ತಿಕ ಖರ್ಚಿಗೂ ಬಳಸಿಕೊಂಡಿದ್ದರು ಎಂದು ಇ.ಡಿ ಹೇಳಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.