ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿಪುರ ಮೇಲ್ಸೇತುವೆ: ಭೂಸ್ವಾಧೀನ ತೊಡಕು

ಬಿಬಿಎಂಪಿ ಯೋಜನೆ ವಿಭಾಗದ ಅಧಿಕಾರಿಗಳಿಂದ ವಿಳಂಬ
Published 13 ಮಾರ್ಚ್ 2024, 0:33 IST
Last Updated 13 ಮಾರ್ಚ್ 2024, 0:33 IST
ಅಕ್ಷರ ಗಾತ್ರ

ಬೆಂಗಳೂರು: ಮೂರು ವರ್ಷ ಸ್ಥಗಿತವಾಗಿದ್ಡು, ನಾಲ್ಕು ತಿಂಗಳ ಹಿಂದೆ ಪುನರ್‌ ಕಾಮಗಾರಿ ಆರಂಭಿಸಿರುವ ಈಜಿಪುರ ಎಲಿವೇಟೆಡ್‌ ಕಾರಿಡಾರ್‌ ಯೋಜನೆಗೆ ಭೂಸ್ವಾಧೀನ ತೊಡಕಾಗಿದೆ. 

ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸೇಂಟ್‌ ಜಾನ್ಸ್‌ ಆಸ್ಪತ್ರೆ ಸೇರಿದಂತೆ ಭೂಮಿ ಕಳೆದುಕೊಳ್ಳುವರೊಂದಿಗೆ ಬಿಬಿಎಂಪಿ ಅಧಿಕಾರಿಗಳು ಮಾತುಕತೆ ನಡೆಸಿದರು. ಭೂಮಿ ನೀಡಲು ಒಪ್ಪಿದ್ದು, ಪರ್ಯಾಯ ಭೂಮಿ ಅಥವಾ ಟಿಡಿಆರ್‌ ನೀಡಬೇಕೆಂದು ಕೇಳಿದ್ದಾರೆ. ಆದರೆ, ಬಿಬಿಎಂಪಿ ಯೋಜನೆ ವಿಭಾಗದ ಅಧಿಕಾರಿಗಳ ವಿಳಂಬದಿಂದ ಭೂಸ್ವಾಧೀನ ಪ್ರಕ್ರಿಯೆಗೆ ವೇಗ ದೊರೆತಿಲ್ಲ.

ಈಜಿಪುರ ಮೇಲ್ಸೇತುವೆ ರ‍್ಯಾಂಪ್‌ ಪ್ರದೇಶದಲ್ಲಿ ಭೂಸ್ವಾಧೀನವಾಗಬೇಕಿದೆ. ಈ ಬಗ್ಗೆ ನವೆಂಬರ್‌ನಿಂದ ಅಧಿಕಾರಿಗಳು ಮಾತುಕತೆ ನಡೆಸಿದ್ದರೂ ಪ್ರತಿಫಲ ಸಿಕ್ಕಿರಲಿಲ್ಲ. ಸಚಿವ ರಾಮಲಿಂಗಾರೆಡ್ಡಿ ಅವರು ಆಸಕ್ತಿ ವಹಿಸಿ ಸಭೆ ಕರೆದು ಚರ್ಚೆ ನಡೆಸಿದರು. ಎಲ್ಲರೂ ಭೂಮಿ ನೀಡಲು ಸಮ್ಮತಿಸಿದ್ದಾರೆ. ಟಿಡಿಆರ್‌ ಬದಲು ‘ಪರ್ಯಾಯ ಭೂಮಿ’ ನೀಡಿ ಎಂದು ಆಸ್ಪತ್ರೆಯವರು ಸೇರಿದಂತೆ ಕೆಲವರು ಕೇಳಿಕೊಂಡಿದ್ದಾರೆ. ಈ ಬಗ್ಗೆ, ಬಿಬಿಎಂಪಿ ಅಧಿಕಾರಿಗಳು ಒಂದು ತಿಂಗಳಿನಿಂದ ನಿರ್ಧಾರ ಕೈಗೊಂಡಿಲ್ಲ. ಹೀಗಾಗಿ, ಮೇಲ್ಸೇತುವೆ ಕಾಮಗಾರಿ ನಿಧಾನಗತಿಯಲ್ಲಿದೆ. ಈ ಬಗ್ಗೆ ಯೋಜನೆ ವಿಭಾಗದ ಎಂಜಿನಿಯರ್‌ಗಳು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

2017ರಲ್ಲಿ ರೂಪುಗೊಂಡಿದ್ದ ಈಜಿಪುರ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯ ಕಾಮಗಾರಿ 2021ರಲ್ಲಿ ಗುತ್ತಿಗೆ ರದ್ದಾಗಿದ್ದರಿಂದ ಸ್ಥಗಿತಗೊಂಡಿತ್ತು. ಮೂರು ಬಾರಿ ಟೆಂಡರ್‌ ಕರೆದರೂ ಒಬ್ಬರಿಗಿಂತ ಹೆಚ್ಚು ಗುತ್ತಿಗೆದಾರರು ಭಾಗವಹಿಸಿರಲಿಲ್ಲ. ಅಂತಿಮವಾಗಿ, ಕಾಮಗಾರಿ ಪುನರಾರಂಭದ ಟೆಂಡರ್‌ಗೆ ಸಚಿವ ಸಂಪುಟ 2023ರ ಸೆಪ್ಟೆಂಬರ್‌ 7ರಂದು ಅನುಮೋದನೆ ನೀಡಿತ್ತು. ₹176.11 ಕೋಟಿಗೆ ಬಿಎಸ್‌ಸಿಪಿಎಲ್‌ ಇನ್‌ಫ್ರಾಸ್ಟ್ರಕ್ಚರ್‌ ಸಂಸ್ಥೆಯೊಂದಿಗೆ ‘ಟರ್ನ್‌ ಕೀ ಲಂಪ್‌ಸಮ್‌’ ಗುತ್ತಿಗೆಯ ಒಪ್ಪಂದಕ್ಕೆ ಬಿಬಿಎಂಪಿ ನವೆಂಬರ್‌ 17ರಂದು ಕಾರ್ಯಾದೇಶ ನೀಡಿತ್ತು. 

ಶೇ 75ರಷ್ಟು ಪಾವತಿ: ನವೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿದ್ದರೂ, ಗುತ್ತಿಗೆದಾರರಿಗೆ ಮುಂಗಡ ಹಣವನ್ನು (ಮೊಬಿಲೈಸೇಷನ್‌ ಫಂಡ್‌) ಬಿಬಿಎಂಪಿ ಬಿಡುಗಡೆ ಮಾಡಿರಲಿಲ್ಲ. ಹೀಗಾಗಿ, ಮರ ಕಡಿಯುವುದು ಸೇರಿದಂತೆ ಪಿಲ್ಲರ್‌ಗಳನ್ನು ಅಳವಡಿಸುವ ಮೂಲ ಕಾಮಗಾರಿಗಳು ನಡೆಯುತ್ತಿದ್ದವು. ಮಾರ್ಚ್‌ 2 ಎರಡನೇ ವಾರದಲ್ಲಿ ₹8.10 ಕೋಟಿಯ ಮುಂಗಡ ಹಣದಲ್ಲಿ ಶೇ 75ರಷ್ಟು ಬಿಬಿಎಂಪಿ ಬಿಡುಗಡೆ ಮಾಡಿದೆ. ‘ಕಾಮಗಾರಿ ಮುಗಿದಿರುವ ಬಿಲ್‌ಗಳಿಗೆ ಶೇ 75ರಷ್ಟು ಬಿಲ್‌ ಪಾವತಿಸಿ’ ಎಂಬ ಸರ್ಕಾರದ ಆದೇಶವಿದೆ. ಅದನ್ನು ಮುಂಗಡ ನಿಧಿಗೂ ಬಿಬಿಎಂಪಿ ಅಳವಡಿಸಿಕೊಂಡಿರುವುದು, ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. 

‘ಮುಂಗಡ ಹಣ ಪಾವತಿಸಿಲ್ಲದಿದ್ದರೂ ನಾಲ್ಕು ತಿಂಗಳಿಂದ ಕೆಲಸ ಮಾಡುತ್ತಿದ್ದೇವೆ. ಒಂದು ಕಡೆ ರ‍್ಯಾಂಪ್‌ ಕೆಲಸವನ್ನೂ ನಡೆಸುತ್ತಿದ್ದೇವೆ. ಪಿಲ್ಲರ್‌ ಅಳವಡಿಸುವ ಕಾಮಗಾರಿಯೂ ನಡೆಯುತ್ತಿದೆ. ಭೂಸ್ವಾಧೀನವಾದರೆ ಕೆಲಸವನ್ನು ವೇಗಗೊಳಿಸಬಹುದು’ ಎಂದು ಗುತ್ತಿಗೆದಾರರು ತಿಳಿಸಿದರು.

ಶೀಘ್ರವೇ ಕಾಮಗಾರಿ ಚುರುಕು

ರಾಮಲಿಂಗಾರೆಡ್ಡಿ ‘ಭೂಮಿಯನ್ನು ನೀಡಲು ಸ್ಥಳೀಯರು ಒಪ್ಪಿದ್ದಾರೆ. ನಾನೇ ಖುದ್ದು ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಯೋಜನೆ ಶೀಘ್ರ ಮುಗಿಯಲಿ ಎಂಬ ಆಶಯ ಅವರಲ್ಲೂ ಇದೆ. ಕೆಲವರು ಪರ್ಯಾಯ ಭೂಮಿ ಕೇಳಿದ್ದಾರೆ. ಆದರ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡರೆ ಭೂ ಸ್ವಾಧೀನ ಪ್ರಕ್ರಿಯೆಗೆ ಅಡಚಣೆ ಇರುವುದಿಲ್ಲ. ಭೂಸ್ವಾಧೀನ ಪೂರ್ಣಗೊಂಡ ಕೂಡಲೇ ಈಜಿಪುರ ಮೇಲ್ಸೇತುವೆ ಕಾಮಗಾರಿ ವೇಗ ಪಡೆದುಕೊಳ್ಳಲಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT