ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಅನುಕೂಲಕ್ಕೆ ‘ಚುನಾವಣಾ ಆ್ಯಪ್’ ಬಿಡುಗಡೆ

ಗಾಯಕ ವಿಜಯ್ ಪ್ರಕಾಶ್ ಸಂಗೀತ ಸಂಯೋಜನೆಯಲ್ಲಿ ಜಾಗೃತಿ ಗೀತೆ
Published 4 ಮೇ 2023, 21:05 IST
Last Updated 4 ಮೇ 2023, 21:16 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಮತಗಟ್ಟೆಯ ವಿವರ, ಅಭ್ಯರ್ಥಿಗಳ ವಿವರ, ಚುನಾವಣಾ ವೇಳಾ ಪಟ್ಟಿ ಸೇರಿ ಹಲವು ಮಾಹಿತಿಗಳನ್ನೊಳಗೊಂಡ ‘ಚುನಾವಣಾ ಆ್ಯಪ್’ ಅನ್ನು ಚುನಾವಣಾ ಆಯೋಗ ರೂಪಿಸಿದ್ದು, ಗುರುವಾರ ನಗರದಲ್ಲಿ ಅನಾವರಣ ಮಾಡಲಾಯಿತು.

ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಅಂಚೆ ಇಲಾಖೆ ಜಂಟಿಯಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿಶೇಷ ಅಂಚೆ ಲಕೋಟೆಯನ್ನು ಲೋಕಾರ್ಪಣೆ ಮಾಡಿ, ಗಾಯಕ ವಿಜಯ್ ಪ್ರಕಾಶ್ ಅವರು ಸಂಗೀತ ಸಂಯೋಜಿಸಿ ಹಾಡಿರುವ ಚುನಾವಣಾ ಜಾಗೃತಿ ಗೀತೆಯನ್ನು ಬಿಡುಗಡೆ ಮಾಡಲಾಯಿತು. ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಚುನಾವಣೆ ಜಾಗೃತಿ ಗೀತೆ ಮೂಡಿಬಂದಿದೆ.  

‘ಮತದಾನದ ದಿನದಂದು ಮತದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಮಾಹಿತಿಗಳುಳ್ಳ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಮತದಾರರು ಈ ಆ್ಯಪ್‌ನ ನೆರವಿನಿಂದ ಸುಲಭವಾಗಿ ಮತದಾನದಲ್ಲಿ ಭಾಗವಹಿಸಬಹುದು. ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಗಾಲಿಕುರ್ಚಿ ವ್ಯವಸ್ಥೆ, ಮತದಾನದ ಪ್ರಮಾಣ, ಮತಗಟ್ಟೆಯ ಸುತ್ತಮುತ್ತಲಿನ ಆಸ್ಪತ್ರೆ, ಪೊಲೀಸ್ ಠಾಣೆ ವಿವರ ಸೇರಿ ಎಲ್ಲ ಉಪಯುಕ್ತ ಮಾಹಿತಿಗಳು ಈ ಆ್ಯಪ್‌ನಲ್ಲಿ ದೊರೆಯಲಿವೆ. ಚುನಾವಣೆಯ ನಂತರವೂ ಹತ್ತಿರದ ಪೊಲೀಸ್ ಠಾಣೆ ಹಾಗೂ ಆರೋಗ್ಯ ಕೇಂದ್ರಗಳ ಮಾಹಿತಿ ಪಡೆಯಲು ಜನರು ಈ ಆ್ಯಪ್‌ ಬಳಸಬಹುದು’ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.

‘ಮೇ 10 ರಂದು ಬೆಳಿಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಿಗದಿಯಾಗಿದ್ದು, ಚುನಾವಣಾ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಪ್ರಜಾಪ್ರಭುತ್ವದ ಹಬ್ಬವಾದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಸಾರ್ವಜನಿಕರ ಸಹಕಾರವೂ ಅತ್ಯಗತ್ಯ. ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಿ, ನೈತಿಕ ಚುನಾವಣೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಹೊರತಂದಿರುವ ಸಿ-ವಿಜಿಲ್, ಸುವಿಧಾ ಆ್ಯಪ್‌ಗಳಿಗೆ ಉತ್ತಮ ಜನಸ್ಪಂದನೆ ದೊರೆತಿದೆ’ ಎಂದರು.

ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್, ‘ಯಾವುದೇ ಸಂದೇಶವನ್ನು ಪದೇ ಪದೇ ಹೇಳುವುದರಿಂದ ಅದು ಹೆಚ್ಚಿನ ಪರಿಣಾಮ ಬೀರುತ್ತದೆ. ಅಂಚೆ ಇಲಾಖೆಯ ಫ್ರಾಂಕಿಂಗ್ ಮಷಿನ್‌ಗಳಲ್ಲಿ ‘ಮೇ 10 ರಂದು ತಪ್ಪದೇ ಮತ ಚಲಾಯಿಸಬೇಕು’ ಎಂಬ ಸಂದೇಶವನ್ನು ಮುದ್ರಿಸಲಾಗುತ್ತಿದೆ’ ಎಂದು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT