ಭಾನುವಾರ, ಸೆಪ್ಟೆಂಬರ್ 19, 2021
29 °C
ಪ್ರೊ.ಆಶಿಶ್‌ ವರ್ಮ ತಂಡದ ವರದಿಯಲ್ಲಿ ಬಹಿರಂಗ

2025ಕ್ಕೆ ನಿರರ್ಥಕವಾಗಲಿದೆ ಎಲಿವೇಟೆಡ್‌ ಕಾರಿಡಾರ್‌?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈಗಿನ ಪ್ರಮಾಣದಲ್ಲಿಯೇ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದ್ದರೆ ₹15,825 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿರುವ ಎಲಿವೇಟೆಡ್‌ ಕಾರಿಡಾರ್‌ ಯೋಜನೆ 2025ರ ವೇಳೆಗೆ ನಿರರ್ಥಕ ಎನಿಸಿಕೊಳ್ಳುತ್ತದೆ.

–ಹೀಗೆಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಾರಿಗೆ ತಜ್ಞ ಪ್ರೊ. ಆಶಿಶ್‌ ವರ್ಮ ನೇತೃತ್ವದ ತಂಡದ ಅಧ್ಯಯನ ವರದಿ ಎಚ್ಚರಿಸಿದೆ.

ಈ ಯೋಜನೆಯ ಅನುಷ್ಠಾನದ ಹೊಣೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ. ಸರ್ಕಾರ ಇದಕ್ಕೆ ಪ್ರಸಕ್ತ ಸಾಲಿನಲ್ಲಿ ₹ 1 ಸಾವಿರ ಕೋಟಿ ಮೀಸಲಿರಿಸಿದೆ.

ನಿರ್ಮಿಸಲು ಯೋಜಿಸಿರುವ ಎಲಿವೇಟೆಡ್‌ ರಸ್ತೆಗಳ ಸಾಮರ್ಥ್ಯ ಮತ್ತು ಅದರಲ್ಲಿ ವಾಹನಗಳ ಸಂಚಾರದ ಲೆಕ್ಕಾಚಾರವನ್ನು ಅಧ್ಯಯನದಲ್ಲಿ ವಿವರಿಸಲಾಗಿದೆ. ಸಂಚಾರ ದಟ್ಟಣೆ ಪ್ರಮಾಣ ಹೆಚ್ಚಳವನ್ನು ಸಾಂಪ್ರದಾಯಿಕ (ಶೇ 6.67ರಷ್ಟು ಸರಾಸರಿ ಹೆಚ್ಚಳ) ಮತ್ತು ವಾಸ್ತವಾಂಶಗಳ (ಸರಾಸರಿ ವಾಹನ ನೋಂದಣಿಯಲ್ಲಿ ಶೇ 10ರಷ್ಟು ಹೆಚ್ಚಳ) ದೃಷ್ಟಿಕೋನದಲ್ಲಿ ವಿಶ್ಲೇಷಿಸಲಾಗಿದೆ. ವಾಹನ ದಟ್ಟಣೆರಹಿತ ಸಂಚಾರ ವ್ಯವಸ್ಥೆ ರೂಪಿಸುವಲ್ಲಿ ಈ ಯೋಜನೆ ವಿಫಲವಾಗುತ್ತದೆ ಎನ್ನುವ ಅಂಶವನ್ನು ಈ ಅಧ್ಯಯನ ಪ್ರತಿಪಾದಿಸಿದೆ.

ಸುಸ್ಥಿರ ಸಾರಿಗೆ ವ್ಯವಸ್ಥೆಯಾದ ಮೆಟ್ರೊ, ಉಪನಗರ ರೈಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡುವುದು ಜಾಣತನ. ಈಗಿರುವ ರಸ್ತೆಯ ಜೊತೆಗೆ ಆರು ಪಥಗಳ ಎಲಿವೇಟೆಡ್‌ ರಸ್ತೆ ನಿರ್ಮಿಸಿದರೂ ಮುಂದಿನ ಐದು ವರ್ಷಗಳಲ್ಲಿ ಹೆಚ್ಚುವ ವಾಹನಗಳ ದಟ್ಟಣೆಗೆ ಅದು ಸಾಕಾಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.

ನಗರದಲ್ಲಿ ವಾಹನ ನೋಂದಣಿ ಪ್ರಮಾಣ ಸರಾಸರಿ ಶೇ 6.67ರಷ್ಟು ಪ್ರಮಾಣದಲ್ಲಿ ಹಾಗೂ ಸರಾಸರಿ ಶೇ 10ರಷ್ಟು ಪ್ರಮಾಣದಲ್ಲಿ ಬೆಳವಣಿಗೆ ಕಂಡರೆ ಪರಿಸ್ಥಿತಿ ಹೇಗಿರಲಿದೆ ಎಂಬುದನ್ನು ಆಧರಿಸಿ ಹಾಗೂ ಕಾರು ಹೊಂದಿರುವವರ ಸಂಖ್ಯೆ ಪ್ರತಿ ಐದು ವರ್ಷಗಳಲ್ಲಿ ದುಪ್ಪಟ್ಟು ಆಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಎಲಿವೇಟೆಡ್‌ ಕಾರಿಡಾರ್‌ ಯೋಜನೆಯಿಂದಾಗುವ ಪರಿಣಾಮಗಳನ್ನು ಈ ಅಧ್ಯಯನದಲ್ಲಿ
ವಿಶ್ಲೇಷಿಸಲಾಗಿದೆ.

* ಹಂತ 1,  ಕಾರಿಡಾರ್‌ 1:  ಉತ್ತರ – ದಕ್ಷಿಣ ಕಾರಿಡಾರ್‌: ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ವರೆಗೆ (ರಾಷ್ಟ್ರೀಯ ಹೆದ್ದಾರಿ –7) 23.03 ಕಿಲೊ ಮೀಟರ್‌

* ಹಂತ 2:  ಪೂರ್ವ–ಪಶ್ಚಿಮ ಕಾರಿಡಾರ್‌: ಕೆ.ಆರ್‌.ಪುರದಿಂದ ಗೊರಗುಂಟೆಪಾಳ್ಯದವರೆಗೆ (ರಾಮಮೂರ್ತಿ ನಗರದ ಬಳಿ ಹೊರವರ್ತುಲ ರಸ್ತೆ ಸೇರಿ (ಪೂರ್ವ ಪಶ್ಚಿಮ ಕಾರಿಡಾರ್‌ – 1, ಸಂಪರ್ಕ ಕಾರಿಡಾರ್‌ 2 ಮತ್ತು 3). ಒಟ್ಟು 36.70 ಕಿ.ಮೀ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು