ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೈತಿಕತೆ ಉಳಿಸುವ ನಡವಳಿಕೆ ಅಗತ್ಯ: ಜತಿನ್ ದಾಸ್

ಎಂ.ಎಸ್. ನಂಜುಂಡ ರಾವ್‌ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
Published 5 ಜುಲೈ 2024, 23:12 IST
Last Updated 5 ಜುಲೈ 2024, 23:12 IST
ಅಕ್ಷರ ಗಾತ್ರ

ಬೆಂಗಳೂರು: ನೈತಿಕತೆ, ಗೌರವದ ನಡವಳಿಕೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದೇ ದೇಶದ ಕಲೆ, ಸಂಸ್ಕೃತಿ ಉಳಿಸುವ ಕೆಲಸಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಕಲಾವಿದ ಜತಿನ್ ದಾಸ್‌ ತಿಳಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್ತು ನೀಡುವ ಎಂ.ಎಸ್. ನಂಜುಂಡ ರಾವ್‌ ರಾಷ್ಟ್ರೀಯ ಪ್ರಶಸ್ತಿಯನ್ನು ಶುಕ್ರವಾರ ಸ್ವೀಕರಿಸಿ ಅವರು ಮಾತನಾಡಿದರು.

‘ಕಲಾವಿದರು ಸೇರಿದಂತೆ ಎಲ್ಲರೂ ನಮ್ಮ ಮಣ್ಣಿನ ಗುಣಗಳಿಗೆ ಪೂರಕವಾಗಿ ಕೆಲಸ ಮಾಡಬೇಕು. ಹೂಗುಚ್ಛ ಕೊಡುವುದು ಪಾಶ್ಚಾತ್ಯ ಸಂಸ್ಕೃತಿ. ಅಷ್ಟು ಒಳ್ಳೆಯ ಹೂವುಗಳಿಗೆ ಬಣ್ಣದ ಪ್ಲಾಸ್ಟಿಕ್‌ ಯಾಕೆ ಸುತ್ತುತ್ತೀರಿ? ಹೂವುಗಳನ್ನು ನೀವೇ ಬೆಳೆಸಿ. ಅತಿಥಿಗಳಿಗೆ ನೀಡುವುದಿದ್ದರೆ ಒಂದು ಹೂವು ನೀಡಿ. ನೀರು, ಚಹಾ ಕುಡಿಯಲು ಪ್ಲಾಸ್ಟಿಕ್‌ ಲೋಟಗಳನ್ನು ಬಳಸಬೇಡಿ. ಊಟಕ್ಕೆ ಬಾಳೆ ಎಲೆಯ ಚಿತ್ರ ಇರುವ ತಟ್ಟೆ ಬಳಸುವ ಬದಲು ಬಾಳೆ ಎಲೆಯನ್ನೇ ಬಳಸಿ’ ಎಂದು ಸಲಹೆ ನೀಡಿದರು.

‘ನನಗೆ ಪ್ರಶಸ್ತಿ ಬಗ್ಗೆ ವ್ಯಾಮೋಹವಿಲ್ಲ. ನಂಜುಂಡ ರಾವ್‌ ನನ್ನ ಗೆಳೆಯರಾಗಿದ್ದರು. ಅದಕ್ಕಾಗಿ ಇಲ್ಲಿಗೆ ಬಂದೆ. 1996ರಲ್ಲಿ ನನ್ನ ಏಕವ್ಯಕ್ತಿ ಚಿತ್ರ ಪ್ರದರ್ಶನವನ್ನು ನಂಜುಂಡ ರಾವ್‌ ಇದೇ ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿದ್ದರು’ ಎಂದು ನೆನಪು ಮಾಡಿಕೊಂಡರು.

ಕಲಾವಿದೆ ಪುಷ್ಪಾ ದ್ರಾವಿಡ್ ಮಾತನಾಡಿ, ‘ನಂಜುಂಡ ರಾವ್‌ ಅವರು ಸಣ್ಣ ಕೊಠಡಿಯಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ ನಡೆಸುತ್ತಿದ್ದರು. ಇಲ್ಲಿ ಅದಕ್ಕೆ ಜಮೀನು ಕೊಡಿಸಲು ದಶಕಗಳ ಕಾಲ ಹೋರಾಟ ಮಾಡಿ ಯಶಸ್ವಿಯಾದರು. ಜಮೀನು ಸಿಕ್ಕಿದ ಮೇಲೆ ಪರಿಷತ್ತಿನ ಕಟ್ಟಡ ನಿರ್ಮಿಸಲು ನಿಧಿ ಸಂಗ್ರಹಕ್ಕೆ ಹೋರಾಟ ಮಾಡಿದರು. ಅವರ ಬದುಕೇ ಹೋರಾಟವಾಗಿತ್ತು’ ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌. ಶಂಕರ್‌ ಮಾತನಾಡಿ, ‘ನಂಜುಂಡರಾವ್‌ ಅವರ ಹೆಸರಲ್ಲಿ ಕಳೆದ ಎಂಟು ವರ್ಷಗಳಿಂದ ದೇಶದ ಅತ್ಯುನ್ನತ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದರು.

ಪ್ರಧಾನ ಕಾರ್ಯದರ್ಶಿ ಶಶಿಧರ್‌ ಎಸ್‌.ಎನ್‌. ಮಾತನಾಡಿ, ‘ನಂಜುಂಡರಾವ್‌ ಅವರು ಸ್ವಂತ ಚಿತ್ರಗಳ ಪ್ರದರ್ಶನಕ್ಕೆ ಗಮನ ನೀಡದೇ ಸಹ ಕಲಾವಿದರ, ಕಲಾ ಸಮೂಹದ ಪ್ರೋತ್ಸಾಹಕ್ಕೆ ನಿಂತವರು. ಅವರ ಹೆಸರಲ್ಲಿ ಈ ಬಾರಿ ದೇಶದ ಪ್ರಸಿದ್ಧ ಕಲಾವಿದ ಒಡಿಶಾದ ಜತಿನ್‌ ದಾಸ್‌ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಜತಿನ್‌ ದಾಸ್ ಈವರೆಗೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ  ಮಟ್ಟದಲ್ಲಿ 85 ಏಕವ್ಯಕ್ತಿ ಚಿತ್ರಕಲೆ ಪ್ರದರ್ಶನ ಮಾಡಿದ್ದಾರೆ’ ಎಂದು ಪರಿಚಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT