ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶ್ವಾರೂಢ ಬಸವೇಶ್ವರ ಪ್ರತಿಮೆ: ಅನುದಾನ ಒದಗಿಸಿದವರ ಕಡೆಗಣನೆ

ಮೇಯರ್‌ಗೆ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪತ್ರ
Last Updated 23 ಆಗಸ್ಟ್ 2020, 15:23 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಸವೇಶ್ವರ ವೃತ್ತದ ಬಳಿ ಮೇಯರ್‌ ಅನುದಾನದಲ್ಲಿ ಮರುವಿನ್ಯಾಸಗೊಳಿಸಲಾದ ಅಶ್ವಾರೂಢ ಬಸವೇಶ್ವರರ ಪ್ರತಿಮೆಯನ್ನು ಇದೇ 26ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.

‘ಈ ಪ್ರತಿಮೆ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದ ನಿಕಟಪೂರ್ವ ಮೇಯರ್ ಗಂಗಾಂಬಿಕೆ ಅವರ ಹೆಸರನ್ನು ಶಿಲಾಫಲಕದಲ್ಲಿ ಉಲ್ಲೇಖಿಸದೇ ಕಡೆಗಣಿಸಲಾಗಿದೆ’ ಎಂದು ಬಿಬಿಎಂಪಿ ವಿರೋಧ ಪಕ್ಷವಾದ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ.

ಈ ಕುರಿತು ಮೇಯರ್ ಎಂ.ಗೌತಮ್‌ ಕುಮಾರ್‌ ಅವರಿಗೆ ಪತ್ರ ಬರೆದಿರುವ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ‘ಅಶ್ವಾರೂಢ ಪ್ರತಿಮೆ ನಿರ್ಮಾಣಕ್ಕೆ 2019–20ನೇ ಸಾಲಿನಲ್ಲಿ ಮೇಯರ್‌ ನಿಧಿಯಿಂದ ₹ 1.5 ಕೋಟಿ ಅನುದಾನ ಒದಗಿಸಿದ್ದ ಗಂಗಾಂಬಿಕೆ ಅವರ ಹೆಸರನ್ನೂ ಶಿಲಾಫಲಕದಲ್ಲಿ ನಮೂದಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಈ ಯೋಜನೆಗೆ ಸಂಬಂಧವೇ ಇಲ್ಲದ ಹಾಗೂ ಇದಕ್ಕೆ ಯಾವುದೇ ಕೊಡುಗೆ ನೀಡದ ಜನಪ್ರತಿನಿಧಿಗಳ ಹೆಸರನ್ನು ಶಿಲಾಫಲಕದಲ್ಲಿ ದೊಡ್ಡ ಅಕ್ಷರದಲ್ಲಿ ಕೆತ್ತಲಾಗಿದೆ. ಭವಿಷ್ಯದಲ್ಲಿ ತಮಗೆ ಆಗಬೇಕಿರುವ ಕೆಲಸಗಳಿಗಾಗಿ ಇಂದು ಅಧಿಕಾರದಲ್ಲಿರುವವರು ಈ ರೀತಿ ಮಾಡಿದ್ದಾರೆ. ತಮ್ಮದಲ್ಲದ ಸಾಧನೆಯನ್ನು ತಮ್ಮದು ಎಂಬಂತೆ ಹೇಳಿಕೊಳ್ಳುವುದಕ್ಕೆ ಕೆಲವರಿಗೆ ಯಾವುದೇ ಸಂಕೋಚ ಇಲ್ಲ. ಬಸವಣ್ಣ ಅವರ ‘ಕಳಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನವನ್ನು ಅನುಸರಿಸದಿದ್ದರೆ ಮರುವಿನ್ಯಾಸಗೊಂಡ ಬಸವೇಶ್ವರರ ಪ್ರತಿಮೆಯನ್ನು ಉದ್ಘಾಟಿಸಿ ಸಂಭ್ರಮ ಪಡುವುದರಲ್ಲಿ ಅರ್ಥವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮೇಯರ್‌ ಎಂ.ಗೌತಮ್‌ ಕುಮಾರ್‌, ‘ಗಂಗಾಂಬಿಕೆ ಅವರು ಮೇಯರ್‌ ಆಗಿದ್ದ ಅವಧಿಯಲ್ಲಿ ಈ ಕಾಮಗಾರಿಗೆ ಅನುದಾನ ನೀಡಿರುವುದು ನಿಜ. ಆದರೆ, ನಮ್ಮ ಅವಧಿಯಲ್ಲೂ ಇದಕ್ಕೆ ಮತ್ತಷ್ಟು ಅನುದಾನ ಒದಗಿಸಿದ್ದೇವೆ. ಅಶ್ವಾರೂಢ ಬಸವೇಶ್ವರ ಪ್ರತಿಮೆಯ ವಿನ್ಯಾಸ ರೂಪಿಸಿ ಅದನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಿದ್ದೇವೆ. ಶಿಲಾಫಲಕದಲ್ಲಿ ಯಾರ ಹೆಸರು ಹಾಕಬೇಕು ಎಂಬುದನ್ನು ಅಧಿಕಾರಿಗಳು ನಿರ್ಣಯಿಸುತ್ತಾರೆ. ಅವರು ಶಿಷ್ಟಾಚಾರ ಪ್ರಕಾರ ಕ್ರಮಕೈಗೊಂಡಿರುತ್ತಾರೆ. ಈ ವಿಚಾರದಲ್ಲಿ ನನ್ನ ಪಾತ್ರ ಏನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT