ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಧಿ ಮೀರಿದ ಕೆರೆ ಒತ್ತುವರಿ ತೆರವು!

Published 5 ಡಿಸೆಂಬರ್ 2023, 23:55 IST
Last Updated 5 ಡಿಸೆಂಬರ್ 2023, 23:55 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಗಳ ಒತ್ತುವರಿ ತೆರವಿಗಾಗಿ ಬಿಬಿಎಂಪಿ ಕಡತ ಸಲ್ಲಿಸಿ 14 ವಾರಗಳು ಕಳೆದರೂ ತಹಶೀಲ್ದಾರ್‌ಗಳಿಂದ ತೆರವು ಕಾರ್ಯಾಚರಣೆಗೆ ಒಂದು ಆದೇಶವೂ ಆಗಿಲ್ಲ.

ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಕ್ರಿಯಾಯೋಜನೆಯಂತೆ ಸೆ.5ರಿಂದ ಬಿಬಿಎಂಪಿ ಕೆರೆಗಳ ಮಾಹಿತಿಯನ್ನು ತಹಶೀಲ್ದಾರ್‌ ಅವರಿಗೆ ಸಲ್ಲಿಸುತ್ತಿದೆ. ಪ್ರತಿ ವಾರ 10 ಕೆರೆಗಳ ಮಾಹಿತಿಯನ್ನು ಕೆರೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳು ಆಯಾ ತಹಶೀಲ್ದಾರ್‌ಗಳಿಗೆ ಸಲ್ಲಿಸುತ್ತಿದ್ದಾರೆ.

ಕ್ರಿಯಾಯೋಜನೆಯಂತೆ 16 ವಾರಗಳಲ್ಲಿ 159 ಕೆರೆಗಳ ಒತ್ತುವರಿ ತೆರವು ಪ್ರಕ್ರಿಯೆ ಆರಂಭವಾಗಬೇಕು. ಪ್ರತಿ ವಾರ 10 ಕೆರೆಗಳಂತೆ 16 ವಾರಗಳಲ್ಲಿ 159 ಕೆರೆಗಳ ಒತ್ತುವರಿ ಮಾಹಿತಿಯನ್ನು ಬಿಬಿಎಂಪಿ ಅಧಿಕಾರಿಗಳು ತಹಶೀಲ್ದಾರ್‌ಗಳಿಗೆ ಸಲ್ಲಿಸಬೇಕು. ಇದರಂತೆ ಈವರೆಗೆ 14 ವಾರಗಳ 140 ಕೆರೆಗಳ ಪಟ್ಟಿಯನ್ನು ಸಲ್ಲಿಸಲಾಗಿದೆ.

ಮೊದಲ ವಾರದ ಕೆರೆಗಳ ಒತ್ತುವರಿ ಮಾಹಿತಿ ಸಲ್ಲಿಸಿ 90 ದಿನಗಳಾಗಿವೆ. ಎರಡನೇ ವಾರ ಹಾಗೂ ಮೂರನೇ ವಾರದ ಮಾಹಿತಿ ಸಲ್ಲಿಸಿ 70 ದಿನಗಳಾಗಿವೆ. ಈ ವೇಳೆಗೆ ಎಲ್ಲ ಪ್ರಕ್ರಿಯೆ ಮುಗಿದು ಕನಿಷ್ಠ 30 ಕೆರೆಗಳಲ್ಲಿ ಒತ್ತುವರಿ ಪೂರ್ಣ ತೆರವಾಗಬೇಕಿತ್ತು. ಆದರೆ, ತಹಶೀಲ್ದಾರ್‌ಗಳು ಒತ್ತುವರಿ ತೆರವಿಗೆ ಆದೇಶ ನೀಡುವ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ.

‘ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಕ್ರಿಯಾಯೋಜನೆಯಂತೆ ಬಿಬಿಎಂಪಿ ವತಿಯಿಂದ ಪ್ರತಿ ವಾರವೂ 10 ಕೆರೆಗಳ ಮಾಹಿತಿಯನ್ನು ಒದಗಿಸಲಾಗಿದೆ. ಇನ್ನು ಎರಡು ವಾರದಲ್ಲಿ 16 ವಾರಗಳ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ, ಈವರೆಗೂ ಕೆರೆಗಳ ಒತ್ತುವರಿ ತೆರವಿಗೆ ತಹಶೀಲ್ದಾರ್‌ಗಳಿಂದ ನಮಗೆ ಯಾವುದೇ ಆದೇಶ ಬಂದಿಲ್ಲ’ ಎಂದು ಬಿಬಿಎಂಪಿ ಕೆರೆ ವಿಭಾಗದ ಅಧಿಕಾರಿಗಳು ತಿಳಿಸಿದರು.

‘ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಜಿಲ್ಲಾಧಿಕಾರಿ ದಯಾನಂದ್‌ ಹಾಗೂ ತಹಶೀಲ್ದಾರ್‌ಗಳೊಂದಿಗೆ ಸಭೆ ನಡೆಸಿ, ‘ಕೆರೆ ಹಾಗೂ ರಾಜಕಾಲುವೆ ಒತ್ತುವರಿ ತೆರವಿಗೆ ಆದೇಶ ಪ್ರಕ್ರಿಯೆಗಳನ್ನು ಅವಧಿಯೊಳಗೆ ಪೂರ್ಣಗೊಳಿಸಬೇಕು’ ಎಂದು ತಾಕೀತು ಮಾಡಿದ್ದರು. ಇದಾದ ನಂತರವೂ ತಹಶೀಲ್ದಾರ್‌ಗಳಿಂದ ವಿಚಾರಣೆ ಅಥವಾ ತೆರವು ಕಾರ್ಯಾಚರಣೆಗೆ ಆದೇಶ ನೀಡುವ ಪ್ರಕ್ರಿಯೆ ನಡೆದಿಲ್ಲ’ ಎಂದು ಅಧಿಕಾರಿಗಳು ಹೇಳಿದರು.

‘ಯಲಹಂಕ, ದಾಸರಹಳ್ಳಿ ವಲಯದ ಕೆಲವು ಕೆರೆಗಳ ಸರ್ವೆ ಕಾರ್ಯ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಧಿಕೃತವಾಗಿ ಯಾವುದೇ ಆದೇಶ ಅಥವಾ ಮಾಹಿತಿ ತಹಶೀಲ್ದಾರ್‌ ಕಚೇರಿಗಳಿಂದ ಬಿಬಿಎಂಪಿಗೆ ಬಂದಿಲ್ಲ’ ಎಂದು ಮಾಹಿತಿ ನೀಡಿದರು.

‘ಒತ್ತುವರಿ ಗುರುತು, ಸರ್ವೆಗೆ ಸಿಬ್ಬಂದಿ ಕೊರತೆ ಎಂದು ಹೇಳುತ್ತಾರೆ. ಎಲ್ಲ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದ್ದೇ ಇದೆ. ಸುಮಾರು 200 ಕೆರೆಗಳ ಜವಾಬ್ದಾರಿ ಹೊತ್ತಿರುವ ಬಿಬಿಎಂಪಿ ಕೆರೆಗಳ ವಿಭಾಗದಲ್ಲಿ 15 ಸಿಬ್ಬಂದಿ ಮಾತ್ರ ಇದ್ದಾರೆ. ನಾವೂ ಎಲ್ಲ ಕೆಲಸ ಮಾಡುತ್ತಿಲ್ಲವೇ? ಒತ್ತಡ ನಮಗಿಲ್ಲವೇ? ಕ್ರಿಯಾಯೋಜನೆಯಂತೆ ಕೆಲಸವಾಗದಿದ್ದರೆ ಹೈಕೋರ್ಟ್‌ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ನಮಗೂ ಒತ್ತಡ ಇದೆ ಅಲ್ಲವೇ’ ಎಂದು ಎಂಜಿನಿಯರ್‌ಗಳು ಪ್ರಶ್ನಿಸಿದರು.

ಭೂಗಳ್ಳರಿಗೆ ರಕ್ಷಣೆ: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆರೆಗಳ ಒತ್ತುವರಿ ತೆರವಿಗೆ ಹೈಕೋರ್ಟ್‌ ಸೂಚನೆ ಇದ್ದರೂ ತಹಶೀಲ್ದಾರ್‌ಗಳ ಮಟ್ಟದಲ್ಲಿ ಇದೀಗ ವಿಳಂಬ ಧೋರಣೆ ಇದೆ. ಭೂಗಳ್ಳರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ನಿಧಾನಗತಿ ಅನುಸರಿಸುತ್ತಿದ್ದಾರೆ’ ಎಂದು ಪರಿಸರ ಕಾರ್ಯಕರ್ತ ಟಿ.ಇ. ಶ್ರೀನಿವಾಸ್‌ ದೂರಿದರು.

ಗುರುತಿಸಬೇಕು: ಜಿಲ್ಲಾಧಿಕಾರಿ ‘ನಮ್ಮಲ್ಲಿ ಎಲ್ಲಾ ಕೆರೆಗಳ ಅಳತೆಯನ್ನು ಹಿಂದೆಯೇ ಮಾಡಿದ್ದೇವೆ. ಈಗ ಒತ್ತುವರಿ ತೆರವಿಗೆ ಗಡಿ ಗುರುತಿಸಿಕೊಡಬೇಕಷ್ಟೆ’ ಎಂದಷ್ಟೇ ಜಿಲ್ಲಾಧಿಕಾರಿ ದಯಾನಂದ್‌ ಪ್ರತಿಕ್ರಿಯಿಸಿದರು. ‘ಹೈಕೋರ್ಟ್‌ ಆದೇಶದಂತೆ ಕ್ರಿಯಾಯೋಜನೆಯಂತೆ ಪ್ರಕ್ರಿಯೆ ನಡೆಯುತ್ತಿಲ್ಲ. ಮೂರು ತಿಂಗಳಾದರೂ ತೆರವಿನ ಆದೇಶವಾಗಿಲ್ಲ ಏಕೆ’ ಎಂಬ ಪ್ರಶ್ನೆಗೆ ದಯಾನಂದ್‌ ಉತ್ತರಿಸಲಿಲ್ಲ.

‘ಎಲ್ಲ ಕೆರೆಗಳಿಗೂ ನೋಡಲ್‌ ಅಧಿಕಾರಿ ಬೇಕು’

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರ್ವಹಣೆ ಮೇಲುಸ್ತುವಾರಿ ಅಗತ್ಯವಿರುವ ಕೆರೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸದಿರುವ ಬಗ್ಗೆ ನಾಗರಿಕರಿಂದ ಆಕ್ಷೇಪ ವ್ಯಕ್ತವಾಗಿದೆ. ಕೆಲವು ಕೆರೆಗಳ ಒತ್ತುವರಿಗೆ ಅನುವಾಗಲೆಂದೇ ಅವುಗಳಿಗೆ ಅಧಿಕಾರಿಗಳನ್ನು ನೇಮಿಸಿಲ್ಲ ಎಂದು ದೂರಿದ್ದಾರೆ. ‘ನಗರದಲ್ಲಿರುವ 159 ಕೆರೆಗಳಲ್ಲಿ ಒತ್ತುವರಿ ಇದೆ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಸಲ್ಲಿಸಿರುವ ಕ್ರಿಯಾಯೋಜನೆಯಲ್ಲೇ ಅವುಗಳ ಪಟ್ಟಿ ಇದೆ. ಆದರೆ ಈ ಎಲ್ಲ ಕೆರೆಗಳಿಗೂ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿಲ್ಲ’ ಎಂದು ಪರಿಸರ ಕಾರ್ಯಕರ್ತ ಗೌಡಯ್ಯ ದೂರಿದರು. ಕೆರೆಯ ನಡುವೆಯೇ ರಸ್ತೆ ಮಾಡಿದ್ದ ಹೊಸಕೆರೆಹಳ್ಳಿ ಕೆರೆ ಕರಿಹೋಬನಹಳ್ಳಿ ಕನ್ನಲ್ಲಿ ಚಿಕ್ಕಬೆಳ್ಳಂದೂರು ದೊಡ್ಡ ಬಿದರಕಲ್ಲು ನರಸಪ್ಪನಹಳ್ಳಿ ನೆಲಗೆದರನಹಳ್ಳಿ ಲಕ್ಷ್ಮಿಪುರ ಸೇರಿದಂತೆ 19 ಕೆರೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಿಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಕೆರೆಗಳಿಗೂ ಮೇಲುಸ್ತುವಾರಿಗೆ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು. ‘ಕಾರ್ಯಪಾಲಕ ಎಂಜಿನಿಯರ್‌ಗಳ ಸಲಹೆ ಮೇರೆಗೆ 140 ಕೆರೆಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದು ಅಂತಿಮವಲ್ಲ ಪರಿಷ್ಕರಣೆಗೆ ಅವಕಾಶವಿದೆ. ಎಲ್ಲ ಕೆರೆಗಳಿಗೂ ನೋಡಲ್‌ ಅಧಿಕಾರಿಗಳನ್ನು ನೇಮಿಸಲು ಪ್ರಯತ್ನಿಸಲಾಗುತ್ತದೆ’ ಎಂದು ಕೆರೆಗಳ ವಿಭಾಗದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT