ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕ್ಸ್‌ಪ್ರೆಸ್ ವೇ: 60 ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆ

ರಸ್ತೆ ಸುರಕ್ಷತೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆಗೆ ಸಭೆ
Published 29 ಮಾರ್ಚ್ 2024, 22:29 IST
Last Updated 29 ಮಾರ್ಚ್ 2024, 22:29 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಏಪ್ರಿಲ್‌ ಅಂತ್ಯಕ್ಕೆ ವಾಹನಗಳ ನೋಂದಣಿ ಫಲಕಗಳನ್ನು ಪತ್ತೆಹಚ್ಚಲು 60 ಸ್ವಯಂ ಚಾಲಿತ ಕ್ಯಾಮೆರಾಗಳು (ಎಎನ್‌ಪಿಆರ್‌) ಕಾರ್ಯ ನಿರ್ವಹಿಸಲಿವೆ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು, ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣ ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೇ ಮಿತಿಮೀರಿ ವೇಗವಾಗಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

‘ಸದ್ಯ ಕೆಲವೇ ಸ್ವಯಂ ಚಾಲಿತ ಕ್ಯಾಮೆರಾಗಳಿದ್ದು, ಅವುಗಳ ಸಂಖ್ಯೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಹೆದ್ದಾರಿ ಪ್ರಾಧಿಕಾರದಿಂದಲೂ ಆರು ಸ್ಥಳಗಳಲ್ಲಿ ಎಎನ್‌ಪಿಆರ್‌ ಕ್ಯಾಮೆರಾ ಅಳವಡಿಕೆ ಮಾಡಲಾಗುವುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ವಿಭಾಗದ ಅಧಿಕಾರಿ ವಿಲಾಸ್ ಪಿ. ಬ್ರಹ್ಮಣಕರ್ ತಿಳಿಸಿದರು.

‘ಮಂಡ್ಯ ಜಿಲ್ಲೆಯ ಮದ್ದೂರು ಹಾಗೂ ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಡುವೆ ಸೂಚನಾ ಫಲಕ ಅಳವಡಿಕೆ ಹಾಗೂ ಹಾಳಾದ ತಡೆಗೋಡೆ ದುರಸ್ತಿ ಕಾಮಗಾರಿಯನ್ನು ಪ್ರಾಧಿಕಾರದಿಂದ ಕೈಗೆತ್ತಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಎಕ್ಸ್‌ಪ್ರೆಸ್‌–ವೇ ಹಾದು ಹೋಗಿರುವ ಮಾರ್ಗದಲ್ಲಿನ ಪಟ್ಟಣ ಪ್ರದೇಶಗಳಲ್ಲಿ ಜನರ ಓಡಾಟಕ್ಕೆ ಅನುಕೂಲವಾಗಲೆಂದು ಕೆಳಸೇತುವೆ ಹಾಗೂ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ₹ 688 ಕೋಟಿಗೆ ಟೆಂಡರ್‌ ಆಗಿದ್ದು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ’ ಎಂದು ಅಲೋಕ್‌ ಕುಮಾರ್ ಮಾಹಿತಿ ನೀಡಿದರು.

‘ಎಕ್ಸ್‌ಪ್ರೆಸ್‌ ವೇನ ಮೂರು ಸ್ಥಳಗಳಲ್ಲಿ ಹೆಚ್ಚು ಅಪಘಾತ ಪ್ರಕರಣಗಳು ನಡೆಯುತ್ತಿವೆ. ಅಲ್ಲಿ ಸೂಚನಾ ಫಲಕ ಹಾಕುವಂತೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT