ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ರೈತರ ವಿರೋಧ

Last Updated 19 ಡಿಸೆಂಬರ್ 2022, 22:45 IST
ಅಕ್ಷರ ಗಾತ್ರ

ಯಲಹಂಕ: ಕಾಳತಮ್ಮನಹಳ್ಳಿ ಗ್ರಾಮದಲ್ಲಿ ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆ ರೂಪಿಸಲು ಬಿಡಿಎ ಅಧಿಕಾರಿಗಳು ಹೊರಟಿದ್ದು, 17 ಗ್ರಾಮಗಳ ಮೂಲ ರೈತರ ಗಮನಕ್ಕೆ ತಾರದೆ ಗುದ್ದಲಿ ಪೂಜೆ ನೆರವೇರಿಸಿದ್ದಾರೆ. ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಇದು ಸರಿಯಲ್ಲ ಎಂದು ದೂರಿದರು.

ಈ ಕುರಿತ ಸಭೆಯಲ್ಲಿ ಮಾತನಾಡಿದ ಸಮಿತಿಯ ಸದಸ್ಯರು, ‘ಸರ್ಕಾರ ಮತ್ತು ಬಿಡಿಎ, ರೈತರ ಮನವಿಗಳಿಗೆ ಸ್ಪಂದಿಸದೆ, ಪರಿಸರ ಸಂಸ್ಥೆಗಳಿಂದ ಅನುಮೋದನೆ ಪಡೆಯದೆ ಏಕಾಏಕಿ ಯೋಜನೆ ಕಾಮಗಾರಿ ಆರಂಭಿಸಿರುವುದು ಖಂಡನೀಯ’ ಎಂದು ಟೀಕಿಸಿದರು.

ಸಮಿತಿಯ ಮುಖಂಡ ಎಂ.ರಮೇಶ್ ಮಾತನಾಡಿ, ಯೋಜನೆ ಪ್ರಾರಂಭವಾದ ಹಾಗೂ ನ್ಯಾಯಾಲಯಗಳಲ್ಲಿ ಅದು ಹಾದುಬಂದ ಹಾದಿಯನ್ನು ನೆನಪಿಸಿದರು.

‘ಬಿಡಿಎ 2021ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸುವ ಪ್ರಯತ್ನದಲ್ಲಿ 1894ರ ಭೂಸ್ವಾಧೀನ ಕಾಯ್ದೆಯ ಅಡಿಯಲ್ಲಿ ಪರಿಹಾರ ನೀಡುವುದಾಗಿ ಘೋಷಿಸಿತು. ಈ ಕ್ರಮವನ್ನು ಖಂಡಿಸಿ 17 ಗ್ರಾಮಗಳ ರೈತರು ನ್ಯಾಯಕ್ಕಾಗಿ ಧರಣಿ, ಸತ್ಯಾಗ್ರಹ, ರಸ್ತೆತಡೆ ಚಳವಳಿ ಸೇರಿ ಅನೇಕ ಹೋರಾಟಗಳನ್ನು ನಡೆಸಿದರು. ಬಿಡಿಎ ಮತ್ತು ಸರ್ಕಾರಕ್ಕೆ ನೂರಾರು ಮನವಿಗಳನ್ನು ಸಲ್ಲಿಸಿದ್ದರೂ ರೈತರ ಮನವಿಗೆ ಸ್ಪಂದಿಸದೆ ಯೋಜನೆ ರೂಪಿಸಲು ಕಾಮಗಾರಿ ಆರಂಭಿಸಲು ಗುದ್ದಲಿಪೂಜೆ ನೆರವೇರಿಸಲು ಮುಂದಾಗಿರುವುದು ಸರಿಯಲ್ಲ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಬೆಂಗಳೂರು ಜಿಲ್ಲಾ ಸಂಯೋಜಕ ಬಿ.ಆರ್.ನಂಜುಂಡಪ್ಪ ಅವರು, ‘ಶಿವರಾಮ ಕಾರಂತ ಬಡಾವಣೆಯ ಯೋಜನೆಯ ವ್ಯಾಪ್ತಿಗೆ ಒಳಪಡುವ 17 ಹಳ್ಳಿಗಳಲ್ಲಿ ರೈತರು ಇಂದಿಗೂ ವ್ಯವಸಾಯ, ಹೈನುಗಾರಿಕೆಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಬಡಾವಣೆ ನಿರ್ಮಿಸಿದರೆ ಸಾವಿರಾರು ರೈತರ ಬದುಕು ದುಸ್ತರವಾಗಲಿದೆ. ತಕ್ಷಣ ಯೋಜನೆಯನ್ನು ಕೈಬಿಡಬೇಕು’ ಎಂದು ಆಗ್ರಹಿಸಿದರು.

ಸಮಿತಿಯ ಪದಾಧಿಕಾರಿಗಳಾದ ಮಾವಳಿಪುರ ಬಿ.ಶ್ರೀನಿವಾಸ್, ಮುನಿರಾಜು, ಬಸವರಾಜ ಪಾದಯಾತ್ರಿ, ಎಲ್.ಎ.ಕೃಷ್ಣಪ್ಪ, ಕಿಶೋರ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT