ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ನ್‌ ಮಾಡಿದ್ದಕ್ಕೆ ಬೆದರಿಕೆ: ಆ್ಯಡಂ ಬಿದ್ದಪ್ಪ ಬಂಧನ, ಬಿಡುಗಡೆ

Published 27 ಅಕ್ಟೋಬರ್ 2023, 15:56 IST
Last Updated 27 ಅಕ್ಟೋಬರ್ 2023, 15:56 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆಯಲ್ಲಿ ದಾರಿ ಬಿಡುವಂತೆ ಹಾರ್ನ್ ಮಾಡಿದರೆಂಬ ಕಾರಣಕ್ಕೆ ಕಾರು ಅಡ್ಡಗಟ್ಟಿ ದುರ್ವರ್ತನೆ ತೋರಿದ್ದ ಆರೋಪದಡಿ ಆ್ಯಡಂ ಬಿದ್ದಪ್ಪ ಅವರನ್ನು ಬಂಧಿಸಿದ್ದ ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು, ಠಾಣೆ ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

‘ಅ. 25ರಂದು ರಾತ್ರಿ ನಡೆದಿರುವ ಘಟನೆ ಸಂಬಂಧ ಸಂತ್ರಸ್ತ ರಾಹುಲ್ ಅವರು ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ಆ್ಯಡಂನನ್ನು ಬಂಧಿಸಲಾಗಿತ್ತು. ಹೇಳಿಕೆ ಪಡೆದು ಠಾಣೆ ಜಾಮೀನು ಮೇಲೆ ಬಿಟ್ಟು ಕಳುಹಿಸಲಾಗಿದೆ’ ಎಂದು ಈಶಾನ್ಯ ವಿಭಾಗದ ಡಿಸಿಪಿ ಬಿ.ಎಂ. ಲಕ್ಷ್ಮಿಪ್ರಸಾದ್ ಹೇಳಿದರು.  

ಘಟನೆ ವಿವರ: ‘ವಸ್ತ್ರ ವಿನ್ಯಾಸಕ ಪ್ರಸಾದ್‌ ಬಿದ್ದಪ್ಪ ಮಗ ಆ್ಯಡಂ, ಪಾನಮತ್ತರಾಗಿ ಅತೀ ವೇಗದಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಕೊಂಡು ಹೊರಟಿದ್ದ. ಹಿಂದೆಯೇ ಕಾರಿನಲ್ಲಿ ಬರುತ್ತಿದ್ದ ರಾಹುಲ್, ದಾರಿ ಬಿಡುವಂತೆ ಹಾರ್ನ್ ಮಾಡಿದ್ದರು. ಆದರೆ, ಆರಂಭದಲ್ಲಿ ದಾರಿ ಬಿಟ್ಟಿರಲಿಲ್ಲ. ರಾಹುಲ್ ಅವರೇ ಸ್ವಲ್ಪ ದೂರದವರೆಗೆ ಕಾರು ಚಲಾಯಿಸಿ ಆ್ಯಡಂ ಕಾರು ಹಿಂದಿಕ್ಕಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಮತ್ತಷ್ಟು ವೇಗವಾಗಿ ಕಾರು ಚಲಾಯಿಸಿದ್ದ ಆ್ಯಡಂ, ಯಲಹಂಕದ ರೈಲ್ವೆ ಅಚ್ಚು ಮತ್ತು ಗಾಲಿ ಕಾರ್ಖಾನೆ ಬಳಿ ರಾಹುಲ್ ಅವರ ಕಾರು ಅಡ್ಡಗಟ್ಟಿದ್ದ ಆ್ಯಡಂ, ಅವರನ್ನು ಬೆದರಿಸಿದ್ದ. ಹೆದರಿದ್ದ ರಾಹುಲ್, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರ ಜೊತೆಗೂ ಆ್ಯಡಂ ಗಲಾಟೆ ಮಾಡಿ ದುರ್ವರ್ತನೆ ತೋರಿದ್ದ. ನಂತರ, ಸಿಬ್ಬಂದಿ ಆ್ಯಡಂನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು’ ಎಂದು ಮೂಲಗಳು ಹೇಳಿವೆ.

ಪಾನಮತ್ತ ಚಾಲನೆ ಪ್ರಕರಣ: ‘ಆ್ಯಡಂ ಬಿದ್ದಪ್ಪ ಮದ್ಯ ಕುಡಿದು ಕಾರು ಚಲಾಯಿಸುತ್ತಿದ್ದ ಆರೋಪವಿತ್ತು. ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮದ್ಯದ ಅಂಶ ಪತ್ತೆಯಾಯಿತು. ಪಾನಮತ್ತ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ. ಕಾರು ಜಪ್ತಿ ಮಾಡಲಾಗಿದೆ’ ಎಂದು ಯಲಹಂಕ ಸಂಚಾರ ಠಾಣೆ ಪೊಲೀಸರು ತಿಳಿಸಿದರು.

‘ಅತೀ ವೇಗದ ಚಾಲನೆ ಹಾಗೂ ಜೀವ ಬೆದರಿಕೆ ಆರೋಪದಡಿ ಆ್ಯಡಂ ವಿರುದ್ಧ ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ’ ಎಂದು ಹೇಳಿದರು.

‘ಅಶ್ಲೀಲ ಸಂದೇಶ ಕಳುಹಿಸಿ ಸಿಕ್ಕಿಬಿದ್ದಿದ್ದ’

‘ನಟಿ ಸಂಜನಾ ಗಲ್ರಾನಿ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪದಡಿ ಆ್ಯಡಂ ಬಿದ್ದಪ್ಪನನ್ನು ಇಂದಿರಾನಗರ ಠಾಣೆ ಪೊಲೀಸರು ಕೆಲ ತಿಂಗಳ ಹಿಂದೆಯಷ್ಟೇ ಬಂಧಿಸಿದ್ದರು. ಈ ಪ್ರಕರಣದಲ್ಲಿ ಜಾಮೀನು ಪಡೆದು ಆ್ಯಡಂ ಹೊರಗೆ ಬಂದಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT