ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕದ್ರವ್ಯ ಚಟುವಟಿಕೆ ನಿಗ್ರಹಿಸದಿದ್ದರೆ ಹೋರಾಟ: ವಿಜಯೇಂದ್ರ

Published 27 ಮೇ 2024, 17:48 IST
Last Updated 27 ಮೇ 2024, 17:48 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮೇರೆ ಮೀರಿರುವ ಕ್ರಿಮಿನಲ್ ಚಟುವಟಿಕೆಗಳ ಬೆನ್ನಲ್ಲೇ ನಿಷೇಧಿತ ಡ್ರಗ್ಸ್‌ ಮಾದರಿಯ ಮಾತ್ರೆಗಳ ಮಾರಾಟದ ದಂಧೆ ಅನೇಕ ಔಷಧದ ಮಳಿಗೆಗಳಲ್ಲಿ ರಾಜಾರೋಷವಾಗಿ ನಡೆಯುತ್ತಿದೆ. ಸರ್ಕಾರ ಇದನ್ನು ಮಟ್ಟ ಹಾಕದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ‘ಪ್ರಜಾವಾಣಿ’ ಪ್ರಕಟಿಸಿರುವ ವರದಿಯನ್ನು ‘ಎಕ್ಸ್’ ಮೂಲಕ ಹಂಚಿಕೊಂಡಿರುವ ಅವರು, ಮಾದಕ ದ್ರವ್ಯಗಳ ವಹಿವಾಟು ಸಹ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ಪರಿಣಾಮ ಇಬ್ಬರು ಅಮಾಯಕರು ಮಾದಕದ್ರವ್ಯ ವಸನಿಯಿಂದ ಕೊಲೆಗೀಡಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ನಿಷ್ಕ್ರಿಯಗೊಂಡಿರುವ ಕಾನೂನು ಸುವ್ಯವಸ್ಥೆಯ ನೆರಳಿನಲ್ಲಿ ಬೆಳಕಿಗೆ ಬಾರದ ಅದೆಷ್ಟೊ ಜನರು ಮಾದಕದ್ರವ್ಯ ಜಾಲಕ್ಕೆ ಸಿಲುಕಿ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೋ ಎಂಬ ಆತಂಕದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಅಸಮರ್ಥತೆಯಿಂದಾಗಿ ಕಾಳಸಂತೆಕೋರರು, ಕೊಲೆಗಡುಕರ ಹಾಗೂ ಮಾದಕ ದ್ರವ್ಯ ಮಾಫಿಯಾದ ಚಟುವಟಿಕೆಗಳು ಸ್ವೇಚ್ಛೆಯಾಗಿ ನಡೆಯುತ್ತಿದೆ. ಸಮಾಜ ಹಾಗೂ ದೇಶದ ಭವಿಷ್ಯ ಬೆಳಗಬೇಕಾದ ವಿದ್ಯಾರ್ಥಿಗಳು, ಯುವಜನರನ್ನು ದಿಕ್ಕು ತಪ್ಪಿಸುವ ವಿದ್ರೋಹಿ ಮಾಫಿಯಾ ಶಕ್ತಿಗಳು ರಾಜ್ಯದಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವು ಕಂಡು ಬರುತ್ತಿದ್ದು, ಈ ಸರ್ಕಾರ ಪ್ರಜೆಗಳಿಗೆ ಯಾವ ಭಾಗ್ಯ ಕರುಣಿಸುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ರಕ್ಷಣೆಯ ಭಾಗ್ಯವನ್ನಾದರೂ ಕಲ್ಪಿಸಿ ನಾಗರಿಕ ಸಮಾಜದಲ್ಲಿ ಸುರಕ್ಷತಾ ಭಾವವನ್ನು ಮೂಡಿಸಲಿ ಎಂದು ತಿಳಿಸಿದ್ದಾರೆ.

ರೇವ್‌ ಪಾರ್ಟಿಗಳು ಹಾದಿ– ಬೀದಿಗಳಲ್ಲಿ ಡ್ರಗ್ಸ್‌ ಮಾಫಿಯಾ ಜಾಲ ಹರಡುತ್ತಿರುವುದರ ಹಾಗೂ ಕಳಪೆ ಔಷಧ ಪೂರೈಸಿ ಜನರ ಆರೋಗ್ಯದ ಜತೆ ಚೆಲ್ಲಾಟವಾಡುತ್ತಿರುವ ಜಾಲದ ವಿರುದ್ಧ ಈ ಕೂಡಲೇ ಸರ್ಕಾರ ಕಾರ್ಯಾಚರಣೆ ಆರಂಭಿಸಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT