ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಫೈನಾನ್ಸ್ ಕಂಪನಿಗಳಲ್ಲಿ ಸಾಲದ ಮೇಲೆ ಕಾರು ಖರೀದಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.
ಆರ್.ಪ್ರದೀಪ್‌ಕುಮಾರ್ (32) ಹಾಗೂ ಮನ್ಸೂರ್ ಮಿರ್ಜಾ (38) ಬಂಧಿತರು.ಬಂಧಿತರಿಂದ ₹ 80 ಲಕ್ಷ ಮೌಲ್ಯದ 7 ಮಹೀಂದ್ರ ಕ್ಸೈಲೋ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಹೀಂದ್ರ ಫೈನಾನ್ಸ್ ಕಂಪನಿಯ ವ್ಯವಸ್ಥಾಪಕ ಮೋಹನ್‌ಕುಮಾರ್ ನೀಡಿದ ದೂರು ಆಧರಿಸಿ, ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
2018ರಲ್ಲಿ ಆರ್.ಪ್ರದೀಪ್‌ಕುಮಾರ್ ಎಂಬಾತ ಬೆಂಗಳೂರು ಟ್ರಾನ್ಸ್‌ಪೋರ್ಟ್ ಸಲ್ಯೂಷನ್ ಎಂಬ ಕಂಪನಿ ಸ್ಥಾಪಿಸಿದ್ದು, ಕಂಪನಿಗೆ ವಾಹನ ಖರೀದಿಸಲು ಸಾಲ ನೀಡುವಂತೆ ಕೋರಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಮನೆ, ಕಚೇರಿ ದಾಖಲೆ ಸಲ್ಲಿಸಿದ್ದರು. ದಾಖಲೆ ಪರಿಶೀಲಿಸಿ 6 ವಾಹನಗಳಿಗೆ ಮಹೀಂದ್ರ ಫೈನಾನ್ಸ್ ಕಂಪನಿಯವರು ಸಾಲ ಮಂಜೂರು ಮಾಡಿದ್ದರು. ಬಳಿಕ, ಪ್ರದೀಪ್‌ಕುಮಾರ್ ಸಾಲದ ಕಂತು ಪಾವತಿಸಿರಲಿಲ್ಲ. ಮನೆ ಹಾಗೂ ಕಚೇರಿಯನ್ನು ಪರಿಶೀಲಿಸಿದಾಗ ಅವರು ನಾಪತ್ತೆಯಾಗಿದ್ದರು. ಬಳಿಕ ಮೈಕೋ ಲೇಔಟ್ ಠಾಣೆಗೆ ದೂರು ನೀಡಲಾಗಿತ್ತು. ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು.
‘ವಾಹನದ ಸಾಲ ತೀರಿಸಿರುವುದಾಗಿ ಮಹೀಂದ್ರ ಫೈನಾನ್ಸ್ ಕಂಪನಿ ದಾಖಲೆ ಗಳನ್ನು ಸೃಷ್ಟಿಸಿ ತಿದ್ದಿ ಮಾರಾಟ ಮಾಡಲು ಆರೋಪಿಗಳು ಮುಂದಾಗಿದ್ದರು. ಎಲೆಕ್ಟ್ರಾನಿಕ್ ಸಿಟಿಯ ಆರ್‌ಟಿಒ ಕಚೇರಿಯಿಂದ ಎನ್‌ಒಸಿ ಪಡೆಯಲು ದಾಖಲೆಗಳು ಬಂದಿದ್ದವು. ಆಗ ಆರ್‌ಟಿಒ ಕಚೇರಿ ಅಧಿಕಾರಿಗಳ ಸೂಚನೆಯಂತೆ ಮೋಹನ್‌ಕುಮಾರ್ ಅವರು ಪರಿಶೀಲಿಸಿದಾಗ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಪತ್ತೆಯಾಗಿತ್ತು. ವಾಹನಗಳ ಸಾಲ ತೀರಿಸಲಾಗಿದೆ ಎಂಬ ದಾಖಲೆ ಸೃಷ್ಟಿಸಿ ಹೈದರಾಬಾದ್‌ನಲ್ಲಿ ಒಂದು ವಾಹನ ಮಾರಾಟ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ. ‘ಆರು ವಾಹನಗಳಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿ ಹೈದರಾಬಾದ್‌ನ ಮನ್ಸೂರ್ ಎಂಬಾತನ ಸಹಾಯ ಪಡೆದು ಪ್ರದೀಪ್‌ಕುಮಾರ್ ಮಾರಾಟ ಮಾಡಿ ದ್ದರು. ಹೈದರಾಬಾದ್‌ನ ಎಚ್‌ಡಿಬಿ, ಎಚ್‌ಡಿಎಫ್‌ಸಿ ಫೈನಾನ್ಸ್ ಕಂಪನಿಗಳಿಗೂ ಆರೋಪಿಗಳು ವಂಚಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.